ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜುಗಳಿಗೆ ಹಿಂಬಾಗಿಲ ಪ್ರವೇಶ ನಿಲ್ಲಬೇಕು: ದೆಹಲಿ ಹೈಕೋರ್ಟ್‌

Last Updated 19 ಸೆಪ್ಟೆಂಬರ್ 2021, 9:34 IST
ಅಕ್ಷರ ಗಾತ್ರ

ನವದೆಹಲಿ: ಅರ್ಹತೆ ಆಧಾರದಲ್ಲಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಲುವಾಗಿ ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರಮಪಟ್ಟು ಓದುತ್ತಿದ್ದಾರೆ. ಹೀಗಾಗಿ, ಹಿಂಬಾಗಿಲಮೂಲಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಕಡಿವಾಣ ಹಾಕುವುದು ಇಂದಿನ ತುರ್ತು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

ಭೋಪಾಲ್‌ನಲ್ಲಿರುವ ಎಲ್‌.ಎನ್‌ ಮೆಡಿಕಲ್‌ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದ ಐವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್‌ ಸಂಘಿ ಹಾಗೂ ಜಸ್ಮೀತ್‌ ಸಿಂಗ್‌ ಅವರಿರುವ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವೈದ್ಯಕೀಯ ಕಾಲೇಜುಗಳು ಸೇರಿದಂತೆ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಈ ಹಿಂಬಾಗಿಲಿನಿಂದ ಪ್ರವೇಶ ಪಡೆಯುವುದನ್ನು ನಿಲ್ಲಿಸಬೇಕು ಎಂದೂ ನ್ಯಾಯಪೀಠ ಹೇಳಿತು.

ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆ ನಡೆಸುವ ಕೇಂದ್ರೀಕೃತ ಕೌನ್ಸೆಲಿಂಗ್‌ಗೆ ಹಾಜರಾಗದಿದ್ದರೂ, ವಿದ್ಯಾರ್ಥಿಗಳಿಗೆ 2016ರಲ್ಲಿ ಈ ಕಾಲೇಜಿನಲ್ಲಿ ಪ್ರವೇಶ ನೀಡಲಾಗಿತ್ತು.

ಈ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕುವಂತೆ ನಿರ್ದೇಶಿಸಿ ಭಾರತೀಯ ವೈದ್ಯಕೀಯ ಪರಿಷತ್‌ (ಎಂಸಿಐ) 2017ರ ಏಪ್ರಿಲ್‌ನಲ್ಲಿ ಸಂಸ್ಥೆಗೆ ಪತ್ರಗಳನ್ನು ಬರೆದಿತ್ತು. ಇದಕ್ಕೆ ಸಂಸ್ಥೆಯಾಗಲಿ ಅಥವಾ ವಿದ್ಯಾರ್ಥಿಗಳಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ನಂತರ, ವೈದ್ಯಕೀಯ ಕಾಲೇಜಿನಿಂದ ತಮ್ಮನ್ನು ಹೊರಹಾಕುವಂತೆ ಎಂಸಿಐ ನೀಡಿದ್ದ ನಿರ್ದೇಶನವನ್ನು ವಜಾಗೊಳಿಸಬೇಕು. ತಾವು ಅದೇ ಕಾಲೇಜಿನಲ್ಲಿ ಅಧ್ಯಯನ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಐವರು ವಿದ್ಯಾರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಏಕಸದಸ್ಯ ಪೀಠವು ವಿದ್ಯಾರ್ಥಿಗಳ ಅರ್ಜಿಯನ್ನು ವಜಾಗೊಳಿಸಿ, ತೀರ್ಪು ನೀಡಿತ್ತು. ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ, ವಿದ್ಯಾರ್ಥಿಗಳು ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT