ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕಡೆ ಸ್ಪರ್ಧೆ ತಡೆಯಲು ಚುನಾವಣಾ ಆಯೋಗ ಮನವಿ: ಕಾನೂನು ತಿದ್ದುಪಡಿಗೆ ಆಗ್ರಹ

Last Updated 17 ಜೂನ್ 2022, 11:31 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು ಎರಡು ದಶಕಗಳ ಹಿಂದಿನ ಪ್ರಸ್ತಾವನೆಯೊಂದಕ್ಕೆ ಭಾರತೀಯ ಚುನಾವಣಾ ಆಯೋಗ ಮರುಜೀವ ನೀಡಿದೆ. ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕಾನೂನಿಗೆ ತಿದ್ದುಪಡಿ ತರಬೇಕೆಂದು ಆಯೋಗವು ಸರ್ಕಾರವನ್ನು ಒತ್ತಾಯಿಸಿದೆ. ಅದಾಗದಿದ್ದರೆ, ಕ್ಷೇತ್ರ ತೆರವು ಮಾಡಿ ಉಪ ಚುನಾವಣೆಗೆ ಕಾರಣವಾಗುವವರಿಗೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದೆ.

ಕಾನೂನು ಸಚಿವಾಲಯದಲ್ಲಿ ಶಾಸಕಾಂಗ ಕಾರ್ಯದರ್ಶಿಯೊಂದಿಗಿನ ಇತ್ತೀಚಿನ ಚರ್ಚೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಈ ಸುಧಾರಣಾ ಕ್ರಮಕ್ಕೆ ಒತ್ತಾಯಿಸಿದರು. 2004ರಲ್ಲಿ ಮೊದಲಬಾರಿಗೆ ಇದನ್ನು ಪ್ರಸ್ತಾಪಿಸಲಾಗಿತ್ತು.

ಅಸ್ತಿತ್ವದಲ್ಲಿರುವ ಚುನಾವಣಾ ಕಾನೂನಿನ ಪ್ರಕಾರ ಯಾವುದೇ ಅಭ್ಯರ್ಥಿಯು ಸಾರ್ವತ್ರಿಕ ಚುನಾವಣೆ ಅಥವಾ ಉಪ-ಚುನಾವಣೆಗಳಲ್ಲಿ ಎರಡು ವಿಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಸಲು ಅನುಮತಿಸಲಾಗಿದೆ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಚುನಾಯಿತರಾದರೆ, ಆ ವ್ಯಕ್ತಿಯು ತಾನು ಗೆದ್ದ ಸ್ಥಾನಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ.

‌ಪ್ರಜಾಪ್ರತಿನಿಧಿ ಕಾಯಿದೆಗೆ 1996ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಒಬ್ಬ ವ್ಯಕ್ತಿಯನ್ನು ಎರಡಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈ ತಿದ್ದುಪಡಿಗೆ ಮುನ್ನ, ಅಭ್ಯರ್ಥಿ ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ಅಡ್ಡಿ ಇರಲಿಲ್ಲ.

ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ತಡೆಯಲು ಚುನಾವಣಾ ಆಯೋಗವು 2004ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿನ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿ ತರಬೇಕೆಂದು ಅಭಿಪ್ರಾಯಪಟ್ಟಿತ್ತು.

‘ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನೇ ಉಳಿಸಿಕೊಳ್ಳುವುದಾದರೆ, ಎರಡು ಸ್ಥಾನಗಳಿಂದ ಸ್ಪರ್ಧಿಸಿ, ಎರಡರಲ್ಲೂ ಗೆಲ್ಲುವ ಅಭ್ಯರ್ಥಿ, ತಾನು ತೆರವು ಮಾಡುವ ಸ್ಥಾನದ ಉಪಚುನಾವಣೆಯ ವೆಚ್ಚವನ್ನು ಭರಿಸಬೇಕು’ ಎಂದು ಚುನಾವಣಾ ಆಯೋಗ ಸದ್ಯ ಒತ್ತಾಯಿಸುತ್ತಿದೆ.

ದಂಡದ ಮೊತ್ತವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ₹5 ಲಕ್ಷ ಮತ್ತು ಲೋಕಸಭೆ ಚುನಾವಣೆಗೆ ₹10 ಲಕ್ಷ ರೂಪಾಯಿ ಎಂದು ಪ್ರಸ್ತಾಪಿಸಿದೆ. ಈ ಮೊತ್ತವನ್ನು ಆಗಾಗ್ಗೆ ಪರಿಷ್ಕರಿಸಬೇಕು ಎಂದು ಚುನಾವಣಾ ಸಮಿತಿಯು ಹೇಳಿದೆ.

ಅಭ್ಯರ್ಥಿಯು ಎರಡು ಸ್ಥಾನಗಳಿಂದ ಸ್ಪರ್ಧಿಸಿ, ಎರಡನ್ನೂ ಗೆದ್ದರೆ, ಒಂದನ್ನು ತೆರವು ಮಾಡಬೇಕಾಗುತ್ತದೆ. ಇದರಿಂದಾಗಿ ಸಾರ್ವಜನಿಕ ಬೊಕ್ಕಸಕ್ಕೆ ಆರ್ಥಿಕ ಹೊರೆ ಉಂಟಾಗುತ್ತದೆ. ಜೊತೆಗೆ ಮಾನವ ಸಂಪನ್ಮೂಲ, ಇತರ ಸಂಪನ್ಮೂಲಗಳೂ ವ್ಯಯವಾಗುತ್ತವೆ. ಕ್ಷೇತ್ರ ತೊರೆದು ಉಪ ಚುನಾವಣೆಗೆ ಕಾರಣವಾಗುವುದು ಕ್ಷೇತ್ರದ ಮತದಾರರಿಗೆ ಮಾಡಿದ ಅನ್ಯಾಯವೂ ಹೌದು ಎಂದು ಆಯೋಗ ಹೇಳಿದೆ.

ಸಂಕೀರ್ಣ ಕಾನೂನು ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಕಾನೂನು ಆಯೋಗವು, ಅಭ್ಯರ್ಥಿಗಳನ್ನು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ನಿರ್ಬಂಧಿಸುವ ಪ್ರಸ್ತಾಪವನ್ನು ಬೆಂಬಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT