ಭಾನುವಾರ, ಡಿಸೆಂಬರ್ 4, 2022
20 °C
ಮುಂದುವರಿದ ಶೋಧ ಕಾರ್ಯಾಚರಣೆ

ದೋಣಿ ದುರಂತ: 32 ಮಂದಿ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಂದಾ: ಉತ್ತರಪ್ರದೇಶದ ಬಂದಾ ಜಿಲ್ಲೆಯ ಯಮುನಾ ನದಿಯಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ 32 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೃತಪಟ್ಟವರನ್ನು ಫುಲ್ವಾ (50), ರಜ್ರಾನಿ (45) ಹಾಗೂ ಕಿಶನ್ (7 ತಿಂಗಳು) ಎಂದು ಗುರುತಿಸಿರುವುದಾಗಿ ಬಂದಾದ ಡಿಐಜಿ ವಿಪಿನ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೃತದೇಹಗಳ ಪತ್ತೆಗಾಗಿ ಪ್ರಯಾಗ್‌ ರಾಜ್‌ನಿಂದ ಮುಳುಗುತಜ್ಞರನ್ನೂ ಕರೆಸಲಾಗಿದೆ. ದೋಣಿಯು ಮರ್ಕಾದಿಂದ ಫತೇಪುರ ಜಿಲ್ಲೆಯ ಜರೌಲಿ ಘಾಟ್‌ಗೆ ಹೋಗುತ್ತಿತ್ತು. ದೋಣಿಯಲ್ಲಿ ಒಟ್ಟು 50 ಮಂದಿ ಇದ್ದು ಜತೆಗೆ ದ್ವಿಚಕ್ರ ವಾಹನಗಳೂ ಇದ್ದವು.

ಇವರಲ್ಲಿ ಬಹುತೇಕರು ರಕ್ಷಾ ಬಂಧನದ ನಿಮಿತ್ತ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಹೊರಟಿದ್ದರು. ದೋಣಿಯು ಸಮ್‌ಗರ ಹಳ್ಳಿಯ ಸಮೀಪಕ್ಕೆ ಬಂದಾಗ ಜೋರಾಗಿ ಗಾಳಿ ಬೀಸಿದ ಪರಿಣಾಮ ಮಗುಚಿಬಿದ್ದಿದ್ದು, ಹಲವರು ನೀರು ಪಾಲಾಗಿದ್ದಾರೆ. ನಾವಿಕ ಸೇರಿದಂತೆ ಇತರ 15 ಮಂದಿ ಈಜಿ ದಡ ಸೇರಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ಮೃತಪಟ್ಟ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು