ಬುಧವಾರ, ಮಾರ್ಚ್ 29, 2023
23 °C

ಸಹ ವಿದ್ಯಾರ್ಥಿ ಮೇಲೆ ಹಲ್ಲೆ: ತೆಲಂಗಾಣ ಬಿಜೆಪಿ ಅಧ್ಯಕ್ಷನ ಪುತ್ರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಹೈದರಾಬಾದ್‌ನ ಖಾಸಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸಹವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಪೊಲೀಸರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರ ಪುತ್ರ ಬಂಡಿ ಭಗೀರಥ ಸಾಯಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭಗೀರಥ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುತ್ತಿರುವುದು ಹಾಗೂ ಆತನ ಸ್ನೇಹಿತ ಸಹ ಹೊಡೆದಿರುವ ದೃಶ್ಯಗಳನ್ನು ಮಂಗಳವಾರದಿಂದ ಕೆಲ ಸುದ್ದಿ ವಾಹಿನಿಗಳು ಬಿತ್ತರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲೂ ಹಲ್ಲೆ ನಡೆಸಿರುವ ವಿಡಿಯೊ ಹರಿದಾಡಿದೆ. 

ದುಂಡಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಹೀಂದ್ರಾ ವಿಶ್ವವಿದ್ಯಾಲಯದ ಅಧಿಕಾರಿಗಳು ಹಲ್ಲೆ ನಡೆಸಿದಕ್ಕಾಗಿ ಭಗೀರಥನನ್ನು ಅಮಾನತುಗೊಳಿಸಿದ್ದಾರೆ ಎಂದು ವರದಿಯಾಗಿದೆ.

 ‘ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಆದೇಶದ ಮೇರೆಗೆ ನನ್ನ ಮಗನನ್ನು ಅಮಾನತು ಮಾಡಲಾಗಿದೆ. ನನ್ನ ರಾಜಕೀಯ ಬೆಳವಣಿಗೆ ಸಹಿಸದೆ ಈ ರೀತಿ ಮಾಡಿದ್ದಾರೆ’ ಎಂದು ಬಂಡಿ ಸಂಜಯ್ ಆರೋಪಿಸಿದರು.

‘ಮಕ್ಕಳು ಕಾಲೇಜುಗಳಲ್ಲಿ ಜಗಳವಾಡುತ್ತಾರೆ. ಮತ್ತೆ ಸ್ನೇಹಿತರಾಗುತ್ತಾರೆ.  ಹಿಂದಿನ ಘಟನೆಯ ಬಗ್ಗೆ ಈಗ ಪ್ರಕರಣ ದಾಖಲಿಸುವ ಅಗತ್ಯವೇನಿತ್ತು?’ ಎಂದು ಅವರು ಪ್ರಶ್ನಿಸಿದ್ದಾರೆ.  

ಈ ನಡುವೆ ಬಂಡಿ ಕಚೇರಿಯು ವಿಡಿಯೊ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾನೆ. ‌‘ಭಗೀರಥನ ಸ್ನೇಹಿತನ ಸಹೋದರಿಗೆ ಮೆಸೇಜ್‌ ಕಳುಹಿಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಅಸಭ್ಯವಾಗಿ ಉತ್ತರಿಸಿದೆ. ಆಗ ಅವನು ನನಗೆ ಕಪಾಳ ಮೋಕ್ಷ ಮಾಡಿದ.  ಅದನ್ನು ಮರೆತು, ನಾವು ಸ್ನೇಹಿತರಾಗಿದ್ದೇವೆ. ಇದು ಮುಗಿದ ಅಧ್ಯಾಯ’ ಎಂದು ಸಂತ್ರಸ್ತ ವಿದ್ಯಾರ್ಥಿ ಶ್ರೀರಾಮ್‌ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು