ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ನಿಲ್ಲದ ಜಟಾಪಟಿ

ದೇಶದ ಹಲವೆಡೆ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ವೀಕ್ಷಣೆಗೆ ವಿದ್ಯಾರ್ಥಿಗಳ ಯತ್ನ, ವಿ.ವಿಗಳಿಂದ ತಡೆ
Last Updated 27 ಜನವರಿ 2023, 22:05 IST
ಅಕ್ಷರ ಗಾತ್ರ

ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರ ಪ್ರದರ್ಶನ ವಿಚಾರದಲ್ಲಿ ನಡೆಯುತ್ತಿರುವ ಜಟಾಪಟಿ ಮುಂದುವರಿದಿದೆ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಪ್ರದರ್ಶಿಸಲಾಗಿದೆ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಕ್ಕೆ ತಡೆ ಒಡ್ಡಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ

l ‘ಅಂಬೇಡ್ಕರ್ ವಿ.ವಿಯಲ್ಲಿ ವಿದ್ಯುತ್ ಕಡಿತ’: ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪೊಲೀಸರು ತಡೆ ನೀಡಿದ್ದಾರೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ಸ್ಥಳದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ಮುನ್ನ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿತ್ತು ಎಂದು ಸಂಘಟನೆ ಆರೋಪಿಸಿದೆ. ಆದರೂ, ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಿಸಿದರು. ಜೆಎನ್‌ಯು ಹಾಗೂ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ನಡೆಸಿದ ಹಿಂಸಾಚಾರವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ಪ್ರತಿಭಟನೆಗೆ ಕರೆ ನೀಡಿತ್ತು. ಅಂಬೇಡ್ಕರ್ ವಿಶ್ವವಿದ್ಯಾಲಯದ ಆವರಣವನ್ನು ಪೊಲೀಸರು ಪ್ರವೇಶಿಸಿದ್ದು ಏಕೆ ಎಂದು ಎಐಎಸ್‌ಎ ಪ್ರಶ್ನಿಸಿದೆ.

l ಜೆಎನ್‌ಯುದಲ್ಲಿ ಎಬಿವಿಪಿ ವಿರುದ್ಧ ಪ್ರತಿಭಟನೆ: ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಗೂಂಡಾಗಿರಿ ಖಂಡಿಸಿ ಎಡಪಕ್ಷಗಳ ವಿವಿಧ ವಿದ್ಯಾರ್ಥಿ ಸಂಘಟನೆಗಳು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಗುರುವಾರ ಪ್ರತಿಭಟನೆ ನಡೆಸಿದವು. ವಿಶ್ವವಿದ್ಯಾಲಯದಲ್ಲಿ ಮಂಗಳವಾರ ರಾತ್ರಿ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದಾಗ ಕಲ್ಲೂತೂರಾಟ ನಡೆಸಿ ದ್ದನ್ನು ಪ್ರತಿಭಟನಾನಿರತರು ಖಂಡಿಸಿದರು. ಕ್ಯಾಂಪಸ್‌ನ ಗಂಗಾ ಢಾಬಾದಿಂದ ಚಂದ್ರಭಾಗ್ ಹಾಸ್ಟೆಲ್‌ವರೆಗೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

l ‘ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪ್ರದರ್ಶನ’: ತಮಿಳುನಾಡಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಿಸಿದ ಆರೋಪದ ಮೇಲೆ ಸಿಪಿಎಂ ಕೌನ್ಸಿಲರ್ ಸೇರಿದಂತೆ ಕೆಲವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದನ್ನು ಸಿಪಿಎಂ ಖಂಡಿಸಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸಾಕ್ಷ್ಯಚಿತ್ರ ಪ್ರದರ್ಶಿಸಲು ಬೆಂಬಲ ನೀಡುವುದಾಗಿ ಪಕ್ಷದ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಅವರು ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸಂಜೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಆದರೆ ಮದ್ರಾಸ್ ವಿಶ್ವದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರದರ್ಶನಕ್ಕೆ ತಡೆ ಒಡ್ಡಲಾಯಿತು. ಹೀಗಾಗಿ, ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ಗಳಲ್ಲಿ ಸಾಕ್ಷ್ಯಚಿತ್ರ ವೀಕ್ಷಿಸಿದರು. ‘ಇದು ಸರ್ಕಾರದ ವಿಶ್ವವಿದ್ಯಾಲಯವಾಗಿದ್ದು, ಏನೇ ಮಾಡುವುದಿದ್ದರೂ ಸರ್ಕಾರದ ನಿರ್ದೇಶನ ಬೇಕು’ ಎಂದು ಕುಲಪತಿ ಡಾ. ಎಸ್. ಗೌರಿ ಅವರು ಹೇಳಿದ್ದಾರೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗುರುವಾರ ಪ್ರದರ್ಶನ ನಡೆಯಿತು.

l 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ವೀಕ್ಷಣೆ: ಕೋಲ್ಕತ್ತದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಗುರುವಾರ ರಾತ್ರಿ ಪ್ರದರ್ಶಿಸಲಾಯಿತು. ಎಸ್‌ಎಫ್‌ಐ ಆಯೋಜಿಸಿದ್ದ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

l ಜಾಮಿಯಾ– ಶುಕ್ರವಾರದ ತರಗತಿ ಬಂದ್‌: ಸಾಕ್ಷ್ಯಚಿತ್ರ ಪ್ರದರ್ಶನ ವಿಚಾರಕ್ಕೆ ಗಲಾಟೆ ನಡೆದಿದ್ದ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದ ತರಗತಿಗಳನ್ನು ರದ್ದುಗೊಳಿಸಿ ಆಡಳಿತ ಮಂಡಳಿ ಆದೇಶಿಸಿತ್ತು

ಆಧಾರ: ಪಿಟಿಐ

====

ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಎಸ್‌ಎಫ್‌ಐ ವತಿಯಿಂದ ಗುರುವಾರ ಏರ್ಪಡಿಸಿದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿದರು ಎಂದು ಸಂಘಟನೆ ಹೇಳಿದೆ. ಇದಕ್ಕೆ ತಿರುಗೇಟು ನೀಡುವ ರೀತಿಯಲ್ಲಿ, ಇದೇ ಕ್ಯಾಂಪಸ್‌ನಲ್ಲಿ ಎಬಿವಿಪಿ ವತಿಯಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನವೂ ನಡೆಯಿತು. ಆದರೆ, ಚಿತ್ರ ಪ್ರದರ್ಶನಕ್ಕೆ ಆಡಳಿತ ಮಂಡಳಿ ಆರಂಭದಲ್ಲಿ ಅಡ್ಡಿಪಡಿಸಿತು ಎಂದು ಎಬಿವಿಪಿ ಆರೋಪಿಸಿದೆ. ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದರು ಎಂದು ಸಂಘಟನೆ ಆರೋಪಿಸಿದೆ. ಎಸ್‌ಎಫ್‌ಐಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲು ಅನುಮತಿ ನೀಡಿರುವಾಗ, ತಮಗೆ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶಿಸಲು ಏಕೆ ಅವಕಾಶ ಇಲ್ಲ ಎಂದು ಪ್ರಶ್ನಿಸಿ ಪ್ರತಿಭಟನೆಯನ್ನೂ ನಡೆಸಲಾಯಿತು ಎಂದು ಎಬಿವಿಪಿ ಹೇಳಿದೆ. ಜನವರಿ 21ರಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಫ್ರಟರ್ನಿಟಿ ಮೂವ್‌ಮೆಂಟ್ ವಿದ್ಯಾರ್ಥಿ ಸಂಘಟನೆಯು ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದರ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT