ನವದೆಹಲಿ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನು ಅವರ ಮೇಲ್ಮನವಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗೋಧ್ರಾ ಹಿಂಸಾಚಾರದ ಬಳಿಕ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಕುಟುಂಬದ ಏಳು ಜನರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ 11 ಅಪರಾಧಿಗಳನ್ನು ಆಗಸ್ಟ್ 15ರಂದು ಗುಜರಾತ್‌ನ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿತ್ತು.
ಇದನ್ನು ಪ್ರಶ್ನಿಸಿ ಬಾನು ಅವರು ನವೆಂಬರ್ 30ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠ, ಮುಂದಿನ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ. ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಕೇಂದ್ರ, ರಾಜ್ಯ ಸರ್ಕಾರ ಮತ್ತು ಅಪರಾಧಿಗಳಿಗೆ ನೋಟಿಸ್ ನೀಡಿದೆ. ಅಪರಾಧಿಗಳ ಶಿಕ್ಷೆ ರದ್ದುಮಾಡಿದ ಕಡತಗಳೊಂದಿಗೆ ಮುಂದಿನ ವಿಚಾರಣೆ ದಿನದಂದು ಸಿದ್ಧವಿರುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.
ಭಾವುಕ ಅಂಶಗಳನ್ನು ಪರಿಗಣಿಸಿ ವಿಚಾರಣೆ ನಡೆಸುವುದಿಲ್ಲ. ಕಾನೂನು ರೀತಿಯಲ್ಲಿ ಮುಂದುವರಿಯಲಾಗುವುದು ಎಂದೂ ಪೀಠ ಸ್ಪಷ್ಟಪಡಿಸಿದೆ.
ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಆಗಸ್ಟ್ 15ರಂದು ಗುಜರಾತ್‌ನ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿತ್ತು. ಬಾನು ಅವರು ಇದನ್ನು ಪ್ರಶ್ನಿಸಿ ನವೆಂಬರ್ 30ರಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.