ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸಿ.ಎಂ ಪ್ರಮಾಣ ವಚನಕ್ಕೆ ಬೀಡಿ ಕಾರ್ಮಿಕನಿಗೆ ಆಹ್ವಾನ!

ಕೋವಿಡ್ ಲಸಿಕೆಗಾಗಿ ಎರಡು ಲಕ್ಷ ನೀಡಿದ್ದ ಕಾರ್ಮಿಕ
Last Updated 19 ಮೇ 2021, 11:42 IST
ಅಕ್ಷರ ಗಾತ್ರ

ತಿರುವನಂತಪುರ: ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗುತ್ತಿರುವ ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿರುವ 500 ಗಣ್ಯವ್ಯಕ್ತಿಗಳಲ್ಲಿ (ವಿಐಪಿ) ಬೀಡಿ ಕಾರ್ಮಿಕರೊಬ್ಬರು ಸೇರಿದ್ದಾರೆ!

ಕಣ್ಣೂರಿನ ಕುರುವ ಗ್ರಾಮದ ಚಲಾದನ್ ಜನಾರ್ಧನನ್ ವಿಶೇಷ ಆಹ್ವಾನಕ್ಕೆ ಭಾಜನರಾದ ಬೀಡಿ ಕಾರ್ಮಿಕ. ಚಲಾದನ್ ಅವರು ಕೋವಿಡ್ ಲಸಿಕಾ ಆಂದೋಲನದ ಭಾಗವಾಗಿ ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು.

ಚಲಾದನ್ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹ 2,00,850 ಹಣದಲ್ಲಿ ₹ 2ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದರು. ಅವರ ಈ ಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕಾರಿಗಳು ಚಲಾದನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಲು ತಿರುವನಂತಪುರಕ್ಕೆ ಪ್ರಯಾಣಿಸುವುದನ್ನು ತಡೆಯಬಹುದಾಗಿದೆ.

‘ನನ್ನ ಜೀವನದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತದೆ ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ’ ಎಂದು ಚಲಾದನ್ ಜನಾರ್ದನನ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

63 ವರ್ಷದ ಚಲಾದನ್ ಅವರು ಯುವಕನಿದ್ದಾಗಿನಿಂದಲೇ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಕಣ್ಣೂರಿನ ಜನಪ್ರಿಯ ಕಾರ್ಮಿಕರ ಸಹಕಾರಿ ದಿನೇಶ್ ಬೀಡಿ ಸಂಸ್ಥೆಯಲ್ಲೂ ಅವರು ಕೆಲಸ ಮಾಡಿದ್ದಾರೆ.

‘ಪಿಣರಾಯಿ ವಿಜಯನ್ ಅವರು ಸರ್ಕಾರದ ವತಿಯಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಹಾಗಾಗಿ, ಸಿಪಿಎಂ ಬೆಂಬಲಿಗನಾಗಿ ನಾನು ನನ್ನ ಉಳಿತಾಯದ ಪೂರ್ಣ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವ ನಿರ್ಧಾರ ಮಾಡಿದೆ’ ಎಂದು ಚಲಾದನ್ ತಿಳಿಸಿದ್ದಾರೆ.

ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿರುವ ಚಲಾದನ್ ಅವರ ನಿರ್ಧಾರಕ್ಕೆ ಅವರ ಇಬ್ಬರು ಮಕ್ಕಳು ಬೆಂಬಲ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT