ಬುಧವಾರ, ಆಗಸ್ಟ್ 17, 2022
25 °C
ಸಮಗ್ರ ಅಪ್‌ಡೇಟ್

ಭಾರತ್ ಬಂದ್: ಯಾವ್ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Nagaon: A policeman attempts to douse a burning tyre, set ablaze by demonstrators in support of the nationwide strike, called by agitating farmers to press for repeal of the Centre's agri laws, in Nagaon, Tuesday, Dec. 8, 2020. (PTI Photo)

ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ದೇಶದ ಬಹುತೇಕ ಕಡೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಆದರೆ ಪ್ರತಿಭಟನೆಯ ಕಾವು ದೇಶದಾದ್ಯಂತ ತೀವ್ರಗೊಂಡಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ವಿಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ದೆಹಲಿ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಉತ್ತರದ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೆಹಲಿಯ ಸಿಂಘು ಗಡಿಯಲ್ಲಿ ಭಾರಿ ಭದ್ರತೆ: ಕಳೆದ 12 ದಿನಗಳಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿರುವ ದೆಹಲಿ–ಹರಿಯಾಣ ಸಿಂಘು ಗಡಿಯಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.


ಜಮ್ಮುವಿನಲ್ಲಿ ಪ್ರತಿಭಟನೆ

ಪುಣೆ ಎಪಿಎಂಸಿ ಕಾರ್ಯಾಚರಣೆ: ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷ ಶಿವಸೇನಾ ಸಹ ಬಂದ್‌ಗೆ ಬೆಂಬಲ ಘೋಷಿಸಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಎಪಿಎಂಸಿಗಳು ಬಂದ್ ಆಗಿವೆ. ಆದರೆ, ಪುಣೆಯಲ್ಲಿ ಎಪಿಎಂಸಿ ಮಾರುಕಟ್ಟೆ ಎಂದಿನಂತೆಯೇ ಕಾರ್ಯಾಚರಿಸುತ್ತಿದೆ.

ಇದನ್ನೂ ಓದಿ: 

‘ನಾವು ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ. ಆದರೆ, ಇತರ ರಾಜ್ಯಗಳಿಂದ ಬರುವ ಕೃಷಿ ಉತ್ಪನ್ನಗಳು ಹಾಳಾಗಬಾರದು ಎಂಬ ಉದ್ದೇಶದಿಂದ ಅವುಗಳನ್ನು ಸಂಗ್ರಹಿಸಿಡುವ ಸಲುವಾಗಿ ಮಾರುಕಟ್ಟೆ ತೆರೆದಿದ್ದೇವೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

‘ಬಂದ್‌ ಹಿಂದೆ ರಾಜಕೀಯ ಉದ್ದೇಶವಿಲ್ಲ. ಇದು ರೈತರ ಕುರಿತಾದ ನಮ್ಮ ಸಂವೇದನೆಯಷ್ಟೆ. ದೆಹಲಿಯಲ್ಲಿ ರೈತರು ಯಾವುದೇ ರಾಜಕೀಯ ಪಕ್ಷದ ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿಲ್ಲ’ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಆಂಧ್ರದಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ: ಆಂಧ್ರ ಪ್ರದೇಶದ ಪಾರ್ವತಿಪುರಂ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ಎಡಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಎಡಪಕ್ಷಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ಬಿಗಿ ಬಂದೋಬಸ್ತ್: ಭಾರತ್‌ ಬಂದ್‌ಗೆ ಬಿಹಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಖನೌ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ರೈಲು, ರಸ್ತೆ ತಡೆ


ಕೋಲ್ಕತ್ತದಲ್ಲಿ ಎಸ್‌ಯುಸಿಐ ಕಾರ್ಯಕರ್ತರಿಂದ ಪ್ರತಿಭಟನೆ

ಭಾರತ್‌ ಬಂದ್‌ ಪ್ರಯುಕ್ತ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ ತೀವ್ರಗೊಂಡಿದೆ. ಕೋಲ್ಕತ್ತದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲಿಗರು ರೈಲು ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿವೆ. ಸರ್ಕಾರಿ ವಾಹನಗಳು ಕಡಿಮೆ ಪ್ರಮಾಣದಲ್ಲಿ ಕಾರ್ಯಾಚರಿಸುತ್ತಿವೆ.

ಇದನ್ನೂ ಓದಿ: 

ಎಸ್‌ಎಫ್‌ಐ ಹಾಗೂ ಡಿವೈಎಫ್‌ವೈ ಕಾರ್ಯಕರ್ತರು ಕೋಲ್ಕತ್ತದಲ್ಲಿ ಲೇಕ್‌ಟೌನ್‌ ರಸ್ತೆ, ಕಾಲೇಜ್‌ ಸ್ಟ್ರೀಟ್‌, ಜಾದವ್‌ಪುರ ಹಾಗೂ ಶ್ಯಾಂಬಜಾರ್‌ ಪ್ರದೇಶಗಳಲ್ಲಿ ರಸ್ತೆ ತಡೆ ಮಾಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣ ಬಂದ್ ಆಚರಿಸುತ್ತಿದ್ದೇವೆ. ಇದೇ ತರ ದೇಶದ ಎಲ್ಲೆಡೆಯೂ ಇರಲಿದೆ ಎಂದು ಭಾವಿಸುತ್ತೇವೆ’ ಎಂದು ಸಿಪಿಐ(ಎಂ) ನಾಯಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.

ಇದನ್ನೂ ಓದಿ: 

ಉತ್ತರ ಪ್ರದೇಶದಲ್ಲಿಯೂ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ತೆಲಂಗಾಣದಲ್ಲಿ ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಬಿಹಾರದಲ್ಲಿ ಆರ್‌ಜೆಡಿ ಪ್ರತಿಭಟನೆ: ಬಿಹಾರದ ದರ್ಭಾಂಗದಲ್ಲಿ ಆರ್‌ಜೆಡಿ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದ ಹಲವೆಡೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಸ್ಸಾಂನಲ್ಲಿ ಪ್ರತಿಭಟನಾಕಾರರು ಪೊಲೀಸ್ ವಶಕ್ಕೆ: ಅಸ್ಸಾಂನ ಗುವಾಹಟಿಯಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಜನತಾ ಭವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಾರ್ಖಂಡ್‌ನಲ್ಲಿಯೂ ಪ್ರತಿಪಕ್ಷ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದೆ.

ಪಂಜಾಬ್‌ನ ಅನೇಕ ಕಡೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ–ಮುಂಗಟ್ಟುಗಳು ಮುಚ್ಚಿವೆ.

ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಜನಜೀವನ ಸಹಜವಾಗಿದೆ. ರೈತರ ಸಂಘಟನೆಗಳ ಸದಸ್ಯರು ಹಾಗೂ ಪ್ರತಿಪಕ್ಷಗಳ ಕಾರ್ಯಕರ್ತರ ಪ್ರತಿಭಟನೆಯೂ ಕಂಡುಬರುತ್ತಿವೆ. ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾನಿರತರು ಕೇಂದ್ರ ಸರ್ಕಾರದ ವಿರುದ್ಧ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಘೋಷಣೆಗಳನ್ನು ಕೂಗುತ್ತಿರುವುದು, ಪ್ರತಿಕೃತಿ ದಹನ ನಡೆಸಿರುವುದು ಕಂಡುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು