ಹಿಮಾಚಲ ಪ್ರವೇಶ ಮಾಡಿದ 'ಭಾರತ್ ಜೋಡೊ‘ ಯಾತ್ರೆ

ಶಿಮ್ಲಾ: ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ‘ ಯಾತ್ರೆ ಬುಧವಾರ ಬೆಳಿಗ್ಗೆ ಹಿಮಾಚಲ ಪ್ರದೇಶವನ್ನು ಪ್ರವೇಶ ಮಾಡಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ, ರಾಜ್ಯ ಪಕ್ಷದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಸಿಂಗ್, ಸಚಿವರು, ಶಾಸಕರು, ಮುಖಂಡರು ಸೇರಿದಂತೆ ಕಾರ್ಯಕರ್ತರು ಇಲ್ಲಿನ ಮನ್ಸೆರಾ ಟೋಲ್ ಪ್ಲಾಜಾದ ಸಮೀಪ ಯಾತ್ರೆಯನ್ನು ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದಲ್ಲಿ ದ್ವೇಷ, ಹಿಂಸಾಚಾರ ಮತ್ತು ಭಯವನ್ನು ಬಿತ್ತುತ್ತಿದೆ ಎಂದು ಆರೋಪ ಮಾಡಿದರು.
ಕೇಂದ್ರ ಸರ್ಕಾರದ ನೀತಿಗಳು, ನೋಟು ರದ್ಧತಿ, ಜಿಎಸ್‌ಟಿ ಮತ್ತು ಕೃಷಿ ವಿರೋಧಿ ಕಾನೂನುಗಳು ಮೂರು ಅಥವಾ ನಾಲ್ಕು ಜನ ಕೋಟ್ಯಧಿಪತಿಗಳಿಗೆ ಮಾತ್ರ ಪ್ರಯೋಜನವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರು, ಯುವಕರ, ಕಾರ್ಮಿಕರ ಅಭಿವೃದ್ಧಿ ಕಾರ್ಯಸೂಚಿ ಬಿಜೆಪಿಯವರಲ್ಲಿ ಇಲ್ಲ ಎಂದರು.
ಭಾರತ್ ಜೋಡೊ ಯಾತ್ರೆ ಇಲ್ಲಿಯವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದ ಮೂಲಕ ಹಾದುಹೋಗಿದೆ. ಇದೀಗ ಹಿಮಾಚಲ ಪ್ರವೇಶ ಮಾಡಿದೆ.
2022ರ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭವಾಯಿತು. ಇದೇ ತಿಂಗಳು (ಜನವರಿ) 30 ರಂದು ಜೋಡೊ ಯಾತ್ರೆ ಮುಕ್ತಾಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.