ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bharat Jodo Yatra: ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರಾಹುಲ್ ಗಾಂಧಿ

ಭಾರತ್‌ ಜೋಡೊ ಯಾತ್ರೆ ನಾಳೆ ಸಂಪನ್ನ
Last Updated 29 ಜನವರಿ 2023, 13:20 IST
ಅಕ್ಷರ ಗಾತ್ರ

ಶ್ರೀನಗರ: ಭಾರತ್‌ ಜೋಡೊ ಯಾತ್ರೆ ಅಂಗವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಅವರ ತಂಗಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಲ್ಲಿನ ಐತಿಹಾಸಿಕ ಲಾಲ್ ಚೌಕ್‌ನಲ್ಲಿ ಭಾನುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಭಾರಿ ಬಿಗಿ ಭದ್ರತೆಯಲ್ಲಿ ನಡೆದ ತ್ರಿವರ್ಣ ಧ್ವಜ ವಂದನೆ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಕಾಂಗ್ರೆಸ್‌ ಕಾರ್ಯಕರ್ತರು ಸಾಕ್ಷಿಯಾದರು. ನಂತರ, ದಲ್ ಸರೋವರದ ತೀರದತ್ತ ಸಾಗಿದ ಯಾತ್ರೆಯು, ಅಲ್ಲಿನ ನೆಹರು ಪಾರ್ಕ್‌ನಲ್ಲಿ ತಂಗಿತು.

ಸೋಮವಾರ (ಜ.30) ಇಲ್ಲಿನ ಮೌಲಾನಾ ಆಜಾದ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿ ಆವರಣದಲ್ಲಿ ರಾಹುಲ್‌ ಗಾಂಧಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಅದರೊಂದಿಗೆ ಭಾರತ್‌ ಜೋಡೊ ಯಾತ್ರೆಯು ಸಂಪನ್ನಗೊಳ್ಳುವುದು.

ನಂತರ, ಎಸ್‌.ಕೆ. ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುವ ಬಹಿರಂಗ ಸಭೆಯನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡುವರು.

ಕಳೆದ ವರ್ಷ ಸೆಪ್ಟೆಂಬರ್‌ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಮಹತ್ವಾಕಾಂಕ್ಷೆಯ ಭಾರತ್‌ ಜೋಡೊ ಯಾತ್ರೆ, ದೇಶದ 75 ಜಿಲ್ಲೆಗಳ ಮೂಲಕ ಸಾಗಿ, 4,080 ಕಿ.ಮೀ. ಕ್ರಮಿಸಿದೆ.

ನಗರದ ಹೊರವಲಯದ ಪಂಥ ಚೌಕ್‌ದಿಂದ ಭಾನುವಾರ ಬೆಳಿಗ್ಗೆ 10.45ಕ್ಕೆ ರಾಹುಲ್‌ ಗಾಂಧಿ ನಡಿಗೆ ಆರಂಭಿಸಿದರು. ಎಂದಿನಂತೆಯೇ, ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ರಾಹುಲ್‌ ಗಾಂಧಿ ಅವರೊಂದಿಗೆ, ರಾಷ್ಟ್ರ ಧ್ವಜ ಹಾಗೂ ಪಕ್ಷದ ಬಾವುಟಗಳನ್ನು ಹಿಡಿದಿದ್ದ ಮಹಿಳೆಯರು ಹಾಗೂ ಬೆಂಬಲಿಗರು ಹೆಜ್ಜೆ ಹಾಕಿದರು.

ಆಹ್ವಾನ: ಯಾತ್ರೆಯ ಸಮಾರೋಪದ ಭಾಗವಾಗಿ, ಎಸ್‌.ಕೆ. ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುವ ರ‍್ಯಾಲಿಗೆ 22 ವಿರೋಧ ಪಕ್ಷಗಳನ್ನು ಆಹ್ವಾನಿಸಲಾಗಿದೆ.

ಈ ರ‍್ಯಾಲಿಯಲ್ಲಿ 12 ವಿರೋಧ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ತೆಲುಗು ದೇಶಂ ಪಾರ್ಟಿ ಈ ರ‍್ಯಾಲಿಯಿಂದ ದೂರ ಉಳಿಯಲಿರುವ ಪ್ರಮುಖ ಪಕ್ಷಗಳಾಗಿವೆ ಎಂದು ಮೂಲಗಳು ಹೇಳಿವೆ.

ಬದಲಾವಣೆ: ರಾಹುಲ್‌ ಗಾಂಧಿ ಅವರು ಸೋಮವಾರ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಬೇಕಿತ್ತು. ಆದರೆ, ಅದಕ್ಕೆ ಸ್ಥಳೀಯ ಆಡಳಿತ ಅನುಮತಿ ನೀಡಿರಲಿಲ್ಲ. ಹೀಗಾಗಿ, ಜ.30ರಂದು ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲು ಕಾರ್ಯಕ್ರಮ ನಿಗದಿ ಮಾಡಲಾಗಿತ್ತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಜಮ್ಮು–ಕಾಶ್ಮೀರ ಆಡಳಿತವು ಶನಿವಾರ ಸಂಜೆ ಅನುಮತಿ ನೀಡಿತು. ಭಾನುವಾರವೇ (ಜ.29) ಈ ಕಾರ್ಯಕ್ರಮ ನಡೆಸಬೇಕು ಎಂಬ ಷರತ್ತಿನ ಮೇರೆಗೆ ಅನುಮತಿ ನೀಡಲಾಯಿತು’ ಎಂದೂ ಅವರು ತಿಳಿಸಿದ್ದಾರೆ.

10 ನಿಮಿಷಗಳ ಅವಧಿಯ ಈ ಕಾರ್ಯಕ್ರಮಕ್ಕಾಗಿ ವ್ಯಾಪಕ ಭದ್ರತೆ ಒದಗಿಸಲಾಗಿತ್ತು. ಈ ಪ್ರದೇಶದಲ್ಲಿನ ಅಂಗಡಿಗಳನ್ನು, ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು.

ಯಾತ್ರೆಯು ಶುಕ್ರವಾರ ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸಿದ ಸಂದರ್ಭದಲ್ಲಿ, ಕಾಜಿಗುಂಡ ಬಳಿ ಭದ್ರತಾ ಲೋಪವಾಗಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಆರೋಪಿಸಿದ್ದರು. ಆದರೆ, ಜಮ್ಮು–ಕಾಶ್ಮೀರ ಪೊಲೀಸರು ಈ ಆರೋಪಗಳನ್ನು ತಳ್ಳಿ ಹಾಕಿದ್ದರು.

‘ಭರವಸೆ ಈಡೇರಿಸಿದ್ದೇವೆ’: ‘ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ, ದೇಶಕ್ಕೆ ನಾವು ನೀಡಿದ್ದ ಭರವಸೆಯನ್ನು ಈದಿನ ಈಡೇರಿಸಿದಂತಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಧ್ವಜಾರೋಹಣ ನಂತರ ಅವರು ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

‘ದ್ವೇಷ ಸೋಲುತ್ತದೆ. ಪ್ರೀತಿಯು ಯಾವಾಗಲೂ ಗೆಲ್ಲುತ್ತದೆ. ಭಾರತವು ಭರವಸೆಗಳ ಹೊಸ ಉದಯ ಕಾಣಲಿದೆ’ ಎಂದೂ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಹಿಂದೆ ಜನವರಿ 30ರಂದು ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಇರಿಸಿಕೊಳ್ಳಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಯೋಜನೆ ಬದಲಾಯಿತು.

ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ , ಬೇರೆ ಎಲ್ಲೂ ಅನುಮತಿ ದೊರಕದ ಕಾರಣ ರಾಹುಲ್ ಗಾಂಧಿ ಅವರು ಜನವರಿ 30ರಂದು ಪಿಸಿಸಿ ಕಚೇರಿ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಬೇಕಿತ್ತು. ಆದರೆ ಇಂದೇ ಲಾಲ್ ಚೌಕ್‌ನಲ್ಲಿ ತ್ರಿವರ್ಜ ಧ್ವಜ ಹಾರಿಸಲು ಸ್ಥಳೀಯ ಆಡಳಿತವು ಶನಿವಾರ ಸಂಜೆ ಅನುಮತಿಯನ್ನು ನೀಡಿತು ಎಂದು ಹೇಳಿದರು.

ಪ್ರಧಾನಿಗೆ ಸಮಾನವಾದ ಭದ್ರತೆ ವ್ಯವಸ್ಥೆಯನ್ನು ರಾಹುಲ್‌ ಅವರ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಏರ್ಪಡಿಸಲಾಗಿತ್ತು. 10 ನಿಮಿಷಗಳ ಈ ಕಾರ್ಯಕ್ರಮಕ್ಕೆ ಲಾಲ್ ಚೌಕ್‌ ಹೋಗುವ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತು. ಬ್ಯಾರಿಕೇಡ್ ಸ್ಥಾಪಿಸಿ, ಭದ್ರತಾ ಸಿಬ್ಬಂದಿ ನಿಯೋಜಿಸಲಾಯಿತು. ಅಂಗಡಿ, ವ್ಯಾಪಾರ ಮಳಿಗೆಗಳನ್ನು ಮುಚ್ಚಗಡೆಗೊಳಿಸಲಾಯಿತು.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್‌ 7ರಂದು ಆರಂಭವಾದ ಭಾರತ್ ಜೋಡೊ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT