ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಗದ್ದುಗೆ: ಎನ್‌ಡಿಎಗೆ ಹತ್ತಿರ, ಕಠಿಣ ಸ್ಪರ್ಧೆ ಒಡ್ಡಿದ ಮಹಾಘಟಬಂಧನ

ವಿಳಂಬವಾದ ಮತ ಎಣಿಕೆ l ಆರ್‌ಜೆಡಿ ದೊಡ್ಡ ಪಕ್ಷ
Last Updated 10 ನವೆಂಬರ್ 2020, 20:57 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ಹಲವು ಅಚ್ಚರಿಗಳನ್ನು ದೇಶದ ಮುಂದಿಟ್ಟಿದೆ. ಮಂಗಳವಾರ ನಡೆದ ಮತ ಎಣಿಕೆಯು ಇಡೀ ದಿನ ಹಾವು ಏಣಿ ಆಟದಂತೆ ಪಕ್ಷಗಳು ಮತ್ತು ಮೈತ್ರಿಕೂಟಗಳ ಮುನ್ನಡೆಯನ್ನು ಏರುಪೇರು ಮಾಡುತ್ತಲೇ ಸಾಗಿತು. ಗೆಲುವಿನ ಶೇಕಡಾವಾರು ಪ್ರಮಾಣದಲ್ಲ ಹೇಳುವುದಾದರೆ ಬಿಜೆಪಿಗೆ ದೊಡ್ಡ ಮುನ್ನಡೆ ದೊರೆತಿದೆ. ಬಿಹಾರದಲ್ಲಿನ ಎನ್‌ಡಿಎ ಮೈತ್ರಿಕೂಟದ ‘ಹಿರಿಯಣ್ಣ’ ಆಗಿದ್ದ ಜೆಡಿಯು ಬಹಳ ಹಿಂದೆ ಉಳಿದಿದೆ.

ಮಹಾಘಟಬಂಧನದ ವಿಚಾರದಲ್ಲಿಯೂ ಅಚ್ಚರಿ ಇದೆ. ಎಡ ಪಕ್ಷಗಳು ಹಲವು ಕ್ಷೇತ್ರಗಳಲ್ಲಿ ಅನಿರೀಕ್ಷಿತ ಗೆಲುವು ಸಾಧಿಸಿ, ಮೈತ್ರಿಕೂಟದ ಇತರ ಪಕ್ಷಗಳಲ್ಲಿ ವಿಸ್ಮಯಕ್ಕೆ ಕಾರಣವಾಗಿವೆ. ಭಾರಿ ಉಮೇದಿನಿಂದ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಕಳೆದ ಬಾರಿಯಷ್ಟು (27) ಸ್ಥಾನಗಳನ್ನು ಉಳಿಸಿಕೊಳ್ಳುವುದೂ ಸಾಧ್ಯವಾಗಿಲ್ಲ.

ಚುನಾವಣಾ ಆಯೋಗದ ಜಾಲತಾಣವು ನೀಡಿರುವ ಮಾಹಿತಿಯಂತೆ (ಪತ್ರಿಕೆ ಮುದ್ರಣಕ್ಕೆ ಹೋಗುವ ಹೊತ್ತಿಗೆ) ಬಿಜೆಪಿ 72 ಕ್ಷೇತ್ರಗಳಲ್ಲಿ ಗೆಲುವು ಅಥವಾ ಮುನ್ನಡೆ ಹೊಂದಿದೆ. ಈ ಪಕ್ಷವು 110 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿಯ ಗೆಲುವು/ಮುನ್ನಡೆಯ ಶೇಕಡಾವಾರು ಪ್ರಮಾಣ ಶೇ 65ರಷ್ಟಾಗಿದೆ. ಜೆಡಿಯು ಗೆಲುವಿನ ಪ್ರಮಾಣವು ಶೇ 40ಕ್ಕಿಂತಲೂ ಕಡಿಮೆ ಇದೆ. ಈ ಪಕ್ಷವು ಗೆದ್ದ ಅಥವಾ ಮುನ್ನಡೆಯಲ್ಲಿರುವ ಕ್ಷೇತ್ರಗಳ ಸಂಖ್ಯೆ 43 ಮಾತ್ರ.

ಅಸಾದುದ್ದೀನ್‌ ಒವೈಸಿ ಅವರ ಎಐಎಂಎಂ ಐದು ಕ್ಷೇತ್ರಗಳಲ್ಲಿ ಗೆಲುವು/ಮುನ್ನಡೆ ಸಾಧಿಸಿದೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಒಂದು ಕ್ಷೇತ್ರದಲ್ಲಿ ಗೆಲ್ಲಲಷ್ಟೇ ಶಕ್ತವಾಗಿದೆ.

ವಿಳಂಬಕ್ಕೆ ಕಾರಣ

ಈ ಬಾರಿಯ ಮತದಾನದಲ್ಲಿ ಶೇ 63ರಷ್ಟು ಹೆಚ್ಚು ಮತಯಂತ್ರಗಳನ್ನು ಬಳಸಿದ್ದೇ ಎಣಿಕೆಯಲ್ಲಿ ವಿಳಂಬವಾಗಲು ಕಾರಣ ಎಂದು ಚುನಾವಣಾ ಆಯೋಗ ಹೇಳಿದೆ.

ಕೋವಿಡ್‌–19 ಕಾರಣದಿಂದ, ಅಂತರ ಕಾಯ್ದುಕೊಳ್ಳುವುದೇ ಮುಂತಾದ ನಿಯಮಗಳನ್ನು ಪಾಲಿಸಬೇಕಿತ್ತು. ಹಾಗಾಗಿ, ಪ್ರತಿ ಮತಗಟ್ಟೆಯ ಗರಿಷ್ಠ ಮತದಾರರ ಸಂಖ್ಯೆಯನ್ನು 1,500ರ ಬದಲು 1,000ಕ್ಕೆ ಇಳಿಸಲಾಗಿತ್ತು.

ಇದರಿಂದಾಗಿ ಮತಗಟ್ಟೆಗಳ ಸಂಖ್ಯೆಯು 1.06 ಲಕ್ಷಕ್ಕೆ ಹೆಚ್ಚಳವಾಗಿತ್ತು. ಮತ ಎಣಿಕೆ ಕೇಂದ್ರಗಳನ್ನು ಕಳೆದ ಬಾರಿಯ 38ರಿಂದ 55ಕ್ಕೆ ಏರಿಸಲಾಗಿತ್ತು.

ಬಿಜೆಪಿ ಪಾರಮ್ಯ

*ಉಪಚುನಾವಣೆ ನಡೆದ 10 ರಾಜ್ಯಗಳ 59 ಕ್ಷೇತ್ರಗಳ ಪೈಕಿ ಬಿಜೆಪಿಗೆ 40 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ

*ಕಾಂಗ್ರೆಸ್‌ ಪಕ್ಷಕ್ಕೆ11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ದಕ್ಕಿದೆ

*ಉಪಚುನಾವಣೆ ಗೆಲುವಿನಿಂದಾಗಿ ಮಧ್ಯ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಸುಭದ್ರವಾಗಿದೆ

*ಗುಜರಾತ್‌ನ ಎಲ್ಲ 8 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ

ಶಾ–ನಿತೀಶ್‌ ಮಾತು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಜೆಡಿಯುಗೆ ಕಡಿಮೆ ಸ್ಥಾನಗಳು ಬಂದರೂ ಮುಖ್ಯಮಂತ್ರಿಯಾಗಿ ನಿತೀಶ್‌ ಅವರೇ ಮುಂದುವರಿಯಲಿದ್ದಾರೆ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಶಾ ಅವರು ಭರವಸೆ ನೀಡಿದ್ದರು. ಹಾಗಾಗಿ, ಈ ಮಾತುಕತೆ ಮಹತ್ವದ್ದಾಗಿದೆ.

ಒವೈಸಿ ಪಕ್ಷಕ್ಕೆ 5 ಕಡೆ ಮುನ್ನಡೆ

‘ಜಾತ್ಯತೀತ ಪಕ್ಷ’ಗಳಿಗೆ ಸಿಗಬಹುದಾದ ಮತಗಳ ವಿಭಜನೆಯೇ ಎಐಎಂಐಎಂ ಸ್ಪರ್ಧೆಯ ಉದ್ದೇಶ ಎಂಬ ಟೀಕೆಗೆ ಮತದಾರ ಉತ್ತರ ಕೊಟ್ಟಿದ್ದಾನೆ ಎಂದು ಆ ಪಕ್ಷದ ವಕ್ತಾರ ಅಸೀಮ್‌ ವಕಾರ್‌ ಹೇಳಿದ್ದಾರೆ. ಮುಸ್ಲಿಮರು ಹೆಚ್ಚಾಗಿರುವ ಸೀಮಾಂಚಲ ಪ್ರದೇಶದ ಐದು ಕ್ಷೇತ್ರಗಳಲ್ಲಿ ಪಕ್ಷವು ಮುನ್ನಡೆ ಸಾಧಿಸಿದೆ. ಒಂದು ವೇಳೆ, ಬಿಹಾರದಲ್ಲಿ ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ದೊರೆಯದೇ ಇದ್ದರೆ ಎಐಎಂಐಎಂ ನಿರ್ಣಾಯಕ ಪಾತ್ರ ವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT