ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಕೋವಿಡ್‌ ಸಾವಿನ ಪ್ರಮಾಣ ಒಂದೇ ದಿನ ಶೇ 72ರಷ್ಟು ಹೆಚ್ಚಳ!

Last Updated 10 ಜೂನ್ 2021, 20:02 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಪ್ರಮಾಣ 24 ತಾಸುಗಳೊಳಗೆ ಶೇ 72ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆಯು ಸರಿಯಾಗಿ ದಾಖಲಾಗುತ್ತಿಲ್ಲ ಎಂಬ ಬಹುಕಾಲದ ಅನುಮಾನಕ್ಕೆ ಇದು ಪುಷ್ಟಿ ನೀಡಿದೆ.

ಜೂನ್‌ 7ರವರೆಗೆ ಬಿಹಾರದಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 5,424 ಇತ್ತು. ಆದರೆ, ಮರುದಿನ ಈ ಸಂಖ್ಯೆ 9,375ಕ್ಕೆ ಏರಿದೆ. ಪಟ್ನಾ ಹೈಕೋರ್ಟ್‌ನ ಆದೇಶದಂತೆ ಬಿಹಾರ ಸರ್ಕಾರವು ಸಾವಿನ ಸಂಖ್ಯೆಯನ್ನು ಮರುಪರಿಶೀಲನೆ ನಡೆಸಿದ್ದರಿಂದ ಈ ಹೆಚ್ಚಳ ಆಗಿದೆ. 3,951 ಪ್ರಕರಣಗಳು ಹೊಸದಾಗಿ ಸೇರ್ಪಡೆ ಆಗಿವೆ.

ಅತಿ ದೊಡ್ಡ ಪ್ರಮಾಣದ ಹೆಚ್ಚಳ ಪಟ್ನಾದಲ್ಲಿ ಕಂಡು ಬಂದಿದೆ. ಜೂನ್‌ 8ರ ಪ್ರಕಾರ, ಪಟ್ನಾದಲ್ಲಿ 2,293 ಮಂದಿ ಮೃತಪಟ್ಟಿದ್ದಾರೆ. ಆದರೆ, ಒಂದು ದಿನ ಹಿಂದೆ ಇದು 1,223 ಆಗಿತ್ತು. ಏರಿಕೆಯ ಪ್ರಮಾಣವು ಶೇ 80ರಷ್ಟಾಗಿದೆ.

ಕೋವಿಡ್‌ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಇತರ ಜಿಲ್ಲೆಗಳೆಂದರೆ ಮುಝಫ್ಫರ್‌ಪುರ (294ರಿಂದ 608), ಮಧುಬನಿ (154ರಿಂದ 316), ಬೇಗುಸರಾಯ್‌ (138ರಿಂದ 454), ಪೂರ್ವ ಚಂಪಾರಣ್‌ (131ರಿಂದ 422)ಮತ್ತು ನಳಂದ (240ರಿಂದ 462).

‘ಬಿಹಾರದ ಅನುಭವದ ಆಧಾರದಲ್ಲಿ, ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್‌ನಿಂದಾದ ಮರಣದ ಸಂಖ್ಯೆಯ ಮರುಪರಿಶೀಲನೆ ನಡೆಯಬೇಕು ಮತ್ತು ಅಗತ್ಯ ಬಿದ್ದರೆ ಪರಿಷ್ಕರಣೆ ಆಗಬೇಕು. ಬಿಹಾರ ಮತ್ತು ಉತ್ತರ ಪ್ರದೇಶ ಮಾತ್ರವಲ್ಲ, ಕೇರಳ ಸೇರಿ ಎಲ್ಲ ರಾಜ್ಯಗಳಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು’ ಎಂದು ಕೋಯಿಕ್ಕೋಡ್‌ ಐಐಎಂನ ಸಂದರ್ಶಕ ಪ್ರಾಧ್ಯಾಪಕ ರಿಜೊ ಜಾನ್‌ ಹೇಳಿದ್ದಾರೆ. ಬಿಹಾರದಲ್ಲಿ ಕೋವಿಡ್‌ ಅಂಕಿ ಅಂಶ ಸಮರ್ಪಕವಾಗಿಲ್ಲ ಎಂದು ಬಹಳ ಹಿಂದೆಯೇ ಅವರು ಅನುಮಾನ ವ್ಯಕ್ತಪಡಿಸಿದ್ದರು.

ರಾಜ್ಯ ಸರ್ಕಾರವು ಕೊಟ್ಟ ಅಂಕಿ ಅಂಶಗಳು ಸಂದೇಹಾಸ್ಪದವಾಗಿದ್ದ ಕಾರಣ ಸಾವಿನ ಸಂಖ್ಯೆಯ ಮರುಪರಿಶೀಲನೆಗೆ ಪಟ್ನಾ ಹೈಕೋರ್ಟ್‌ ಆದೇಶಿಸಿತ್ತು.

ಬಕ್ಸರ್ ಜಿಲ್ಲೆಯ ಒಂದು ಉದಾಹರಣೆಯನ್ನು ನೋಡಬಹುದು. ಮುಕ್ತಿಧಾಮ್ ಚಾರಿತಾರ್ಬನ್ ಎಂಬ ಶವಸಂಸ್ಕಾರ ಮೈದಾನದಲ್ಲಿ ಮೇ 5 ಮತ್ತು ಮೇ 14ರ ನಡುವೆ 10 ದಿನಗಳಲ್ಲಿ 789 ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಮಾರ್ಚ್ 1ರಿಂದ ಅದೇ ಜಿಲ್ಲೆಯಲ್ಲಿ ಕೇವಲ ಆರು ಸಾವುಗಳು ಸಂಭವಿಸಿವೆ ಎಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿತು.

‘ನಾವು ಈ ಪ್ರಮಾಣಪತ್ರಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಎಲ್ಲಾ ಸಂಗತಿಗಳನ್ನು ಖಚಿತ ಮೂಲಗಳಿಂದ ಪರಿಶೀಲಿಸಬೇಕು ಮತ್ತು ನಂತರ ಅದನ್ನು ನಮ್ಮ ಮುಂದೆ ಇಡಬೇಕು. ಇಲ್ಲದಿದ್ದರೆ ಅದು ಸುಳ್ಳು ಅಥವಾ ಅಪೂರ್ಣವಾದ ಪ್ರಮಾಣಪತ್ರ ಆಗುತ್ತದೆ’ ಎಂದು ಹೈಕೋರ್ಟ್ ಹೇಳಿತು.

ಸಂದೇಹಾಸ್ಪದ ದತ್ತಾಂಶಗಳು ಬಿಹಾರದಲ್ಲಿ ಮಾತ್ರ ಕಂಡುಬಂದಿಲ್ಲ. ಗುಜರಾತ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಂದ ಇದೇ ರೀತಿಯ ವರದಿಗಳಿವೆ.

‘ಲಭ್ಯವಿರುವ ಅಂದಾಜಿನ ಆಧಾರದ ಮೇಲೆ, ರಾಜ್ಯದಿಂದ ರಾಜ್ಯಕ್ಕೆ ಸಾವಿನ ವರದಿಯು 2ರಿಂದ 10 ಪಟ್ಟು ವ್ಯತ್ಯಾಸವಾಗುತ್ತದೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಸಾವು ವರದಿಯಾಗುವ ಪ್ರಮಾಣವು 4.5 ಪಟ್ಟು ಕಡಿಮೆ ಇದೆ ಎಂದು ಮಿಷಿಗನ್ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನ ಅಭಿಪ್ರಾಯಪಟ್ಟಿದೆ. ಆದರೆ ಕೋವಿಡ್ ಸಾವು ಸರಿಯಾಗಿ ವರದಿ ಆಗುತ್ತಿಲ್ಲ ಎಂಬ ಈ ಅಧ್ಯಯನಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT