ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಣಕ್ಯ’ ನಿತೀಶ್‌ಗೆ ಎಲ್ಲೆಡೆಯಿಂದಲೂ ಏಟು

Last Updated 11 ನವೆಂಬರ್ 2020, 0:13 IST
ಅಕ್ಷರ ಗಾತ್ರ

ಬಿಹಾರ ವಿಧಾನಸಭೆಯ ಚುನಾವಣೆಯ ನಂತರ ಪ್ರಕಟವಾಗಿದ್ದ ಮತಗಟ್ಟೆ ಸಮೀಕ್ಷೆಗಳಲ್ಲಿ ಶೇ 99ರಷ್ಟು ಸಮೀಕ್ಷೆಗಳು, ‘ರಾಜ್ಯದಲ್ಲಿ ಎನ್‌ಡಿಎ ಆಡಳಿತ ಅಂತ್ಯವಾಗಿ, ಮಹಾಘಟಬಂಧನ ಅಧಿಕಾರ ಹಿಡಿಯುತ್ತದೆ, ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿದ್ದವು.

‘ಬಿಹಾರದಲ್ಲಿ ನಿತೀಶ್‌ ಯುಗ ಮುಗಿಯಿತೇ’ ಎಂಬ ಪ್ರಶ್ನೆ ಅಂದು ಉದ್ಭವಿಸಿತ್ತು. ಮತ ಎಣಿಕೆಯ ಬಳಿಕವೂ ಈ ಪ್ರಶ್ನೆ ಹಾಗೆಯೇ ಉಳಿದಿದೆ. ಬಿಹಾರದಲ್ಲಿ ಎನ್‌ಡಿಎ ಕೂಟದ ನೇತೃತ್ವ ವಹಿಸಿದ್ದ ನಿತೀಶ್‌ ಅವರ ಜೆಡಿಯುಗೆ ಹಿನ್ನಡೆಯಾಗಿದೆ. ಎನ್‌ಡಿಎ ಕೂಟದ ಕಿರಿಯ ಪಕ್ಷವಾಗಿದ್ದ ಬಿಜೆಪಿಗೆ ಭಾರಿ ಮುನ್ನಡೆ ದಕ್ಕಿದೆ.

ಬಿಹಾರದಲ್ಲಿ ನಿತೀಶ್‌ ಅವರ ಶಕ್ತಿ ಕುಂದಿದೆ ಎಂಬುದನ್ನು ಈ ಚುನಾವಣೆ ಸಾರಿ ಹೇಳಿದೆ. ‘ಇದು ನನ್ನ ಕೊನೆಯ ಚುನಾವಣೆ’ ಎಂದು ನಿತೀಶ್‌ ಅವರು ಕೊನೆಯ ಹಂತದ ಮತದಾನಕ್ಕೆ ಮುನ್ನ ಘೋಷಿಸಿದ್ದರು. ತಮ್ಮ ಶಕ್ತಿ ಕುಂದುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿರುವುದರ ಸೂಚನೆಯಂತೆ ಇದು ಕಾಣಿಸುತ್ತಿದೆ. ಮೈತ್ರಿ ಸರ್ಕಾರದಲ್ಲಿ ಯಾವತ್ತೂ ‘ಹಿರಿಯ ಪಾಲುದಾರ’ನಾಗಿಯೇ ಇದ್ದ ಜೆಡಿಯು, ಈ ಬಾರಿ 50:50ರ ಅನುಪಾತದಲ್ಲಿ ಬಿಜೆಪಿ ಜತೆ ಸೀಟು ಹಂಚಿಕೆ ಮಾಡಿಕೊಂಡಿದ್ದರ ಹಿಂದೆಯೂ ಇದರ ಛಾಯೆ ಕಾಣಿಸುತ್ತದೆ. ಬಿಹಾರದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ, ಮಹಾಘಟಬಂಧನ ಅಥವಾ ತೇಜಸ್ವಿ ಯಾದವ್ ಜತೆಗೆ ಬಿಜೆಪಿಯೂ ನಿತೀಶ್‌ಗೆ ಎದುರಾಳಿಯಾಗಿತ್ತು ಎಂಬುದು ಗಮನಕ್ಕೆ ಬಾರದಿರದು.

ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಗುರಿ ಇರುವ ಯಾವುದೇ ರಾಜಕೀಯ ಪಕ್ಷ, 40 ಸಂಸದರನ್ನು ಹೊಂದಿರುವ ಬಿಹಾರದಂಥ ರಾಜ್ಯವನ್ನು ಕಡೆಗಣಿಸುವಂತಿಲ್ಲ. ಜತೆಗೆ,ಈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂಬ ಮಹತ್ವಾಕಾಂಕ್ಷೆಯೂ ಬಿಜೆಪಿಗೆ ಇದೆ ಎಂಬುದರಲ್ಲಿ ಸಂದೇಹ ಇಲ್ಲ. ಆದರೆ, ಪ್ರಭಾವಿ ನಾಯಕನ ಕೊರತೆ ಬಿಜೆಪಿಯನ್ನು ಕಾಡಿದ್ದು ದಿಟ. ಲಾಲು ಪ್ರಸಾದ್‌ ಜೈಲು ಸೇರಿದ ನಂತರ ನಿತೀಶ್‌ ಕುಮಾರ್‌ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ. ‘ಮೈತ್ರಿ ಯಾವುದೇ ಆಗಿದ್ದರೂ ನಿತೀಶ್‌ ಅವರ ಸಹಕಾರ ಇಲ್ಲದೆ ಸರ್ಕಾರ ರಚನೆ ಸಾಧ್ಯವಿಲ್ಲ’ ಎನ್ನುವಷ್ಟರ ಮಟ್ಟಿಗೆ ಅವರು ಬೆಳೆದಿದ್ದಾರೆ. ಒಮ್ಮೆ ಘಟಬಂಧನದ ಜತೆಗೆ, ಇನ್ನೊಮ್ಮೆ ಎನ್‌ಡಿಎ ಜತೆಗೆ ಕೈಜೋಡಿಸುತ್ತಾ, ಎಲ್ಲಾ ಮೈತ್ರಿಗಳಲ್ಲೂ ತಾವೇ ಮುಖ್ಯಮಂತ್ರಿಯಾಗುತ್ತಾ ನಿತೀಶ್‌, ತಮ್ಮ ಅನಿವಾರ್ಯತೆಯನ್ನು ಸಾಬೀತುಪಡಿಸುತ್ತಾ ಹೋಗಿದ್ದಾರೆ. ಈ ಕಾರಣಕ್ಕಾಗಿಯೇ ಪ್ರಬಲ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಬಿಹಾರದಲ್ಲಿ ನಿತೀಶ್‌ ಅನಿವಾರ್ಯವಾಗಿದ್ದಾರೆ. ಆದರೆ ಈ ಬಾರಿ ಅವರ ಜತೆಗೆ ಕೈಜೋಡಿಸುವುದರ ಜತೆಗೆ ಅವರ ಶಕ್ತಿಯನ್ನು ಕುಂದಿಸುವ ಕೆಲಸವನ್ನೂ ಬಿಜೆಪಿಯು ವ್ಯವಸ್ಥಿತವಾಗಿ ಮಾಡಿಕೊಂಡೇ ಬಂದಿರುವಂತೆ ಕಾಣಿಸುತ್ತದೆ. ಚುನಾವಣೆಯ ಸಂದರ್ಭದಲ್ಲಿ ಚಿರಾಗ್‌ ಪಾಸ್ವಾನ್‌ ಅವರ ನಡೆಯ ಹಿಂದೆ ಬಿಜೆಪಿಯ ಕೈವಾಡವಿತ್ತು ಎಂಬ ಆರೋಪಗಳನ್ನು ನೇರಾನೇರ ತಳ್ಳಿಹಾಕಲು ಬರುವುದಿಲ್ಲ.

ಮೈತ್ರಿಯಲ್ಲಿ ನಾವು ಸಮಾನ ಪಾಲುದಾರರು ಎನ್ನುವ ಮೂಲಕ ಶೇ 50ರಷ್ಟು ಪಾಲನ್ನು ಪಡೆದ ಬಿಜೆಪಿ, ನಿತೀಶ್‌ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು. ಆದರೆ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗ ವರಸೆಗಳು ಬದಲಾದವು. ನಿತೀಶ್‌ ವಿರುದ್ಧ ತೊಡೆತಟ್ಟಿದ ಚಿರಾಗ್‌ ಪಾಸ್ವಾನ್‌,ರಾಜ್ಯ ರಾಜಕೀಯದ ಮಟ್ಟಿಗೆ ತಾನು ಎನ್‌ಡಿಎ ದಿಂದ ಹೊರಹೋಗುವುದಾಗಿ ಘೋಷಿಸಿದರು. ಜತೆಗೆ, ‘ನಾನು ವಿರೋಧಿಸುವುದು ನಿತೀಶ್‌ ಅವರನ್ನು ಮಾತ್ರ, ಬಿಜೆಪಿಯನ್ನಲ್ಲ’ ಎಂದರು. ಅಷ್ಟೇ ಅಲ್ಲ ಜೆಡಿಯು ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಅವರ ಮತಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಬಿಜೆಪಿಗೆ ನೆರವಾದರು.

ನಿತೀಶ್‌ ವಿರುದ್ಧ ಆರ್‌ಜೆಡಿ ಮತ್ತು ಎಲ್‌ಜೆಪಿ ನಾಯಕರು ಮಾಡಿದ ಆರೋಪಗಳಿಗೆ ಜವಾಬು ನೀಡುವ ಕೆಲಸವನ್ನು ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾಡಲಿಲ್ಲ. ಬದಲಿಗೆ, ನಿತೀಶ್‌ ಅವರ ಕಾರ್ಯವೈಖರಿಯನ್ನು ಹೊಗಳಿ, ‘ಮೈತ್ರಿಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಲಭಿಸಿದರೂ ನಿತೀಶ್‌ ಅವರೇ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಬಿಜೆಪಿಯ ಅತ್ಯುಚ್ಚ ನಾಯಕರಾದ ನರೇಂದ್ರ ಮೋದಿ, ಅಮಿತ್‌ ಶಾ ಆದಿಯಾಗಿ ಎಲ್ಲರೂ ಹೇಳಿದರು.

ಮಹಾರಾಷ್ಟ್ರದಲ್ಲಿ ಇಂಥದ್ದೇ ಸ್ಥಿತಿ ನಿರ್ಮಾಣವಾಗಿ, ಶಿವಸೇನಾಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಖಂಡತುಂಡವಾಗಿ ನಿರಾಕರಿಸಿದ ಬಿಜೆಪಿಯ ನೀತಿ, ಬಿಹಾರದಲ್ಲಿ ಬದಲಾಗಿದ್ದೇಕೆ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿ ಮೂಡುತ್ತದೆ. ಪರೋಕ್ಷವಾಗಿ ನಿತೀಶ್‌ ಅವರ ಮನೋಬಲವನ್ನು ಕುಸಿಯುವಂತೆ ಮಾಡುವ ಮತ್ತು ನಾವೇ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂಬ ಸಂದೇಶ ರವಾನಿಸುವ ಕೆಲಸವನ್ನು ಈ ಮಾತುಗಳ ಮೂಲಕ ಬಿಜೆಪಿ ನಾಯಕರು ಮಾಡಿದ್ದಾರೆ.

ಕಳೆದ ಹಲವು ಚುನಾವಣೆಗಳಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆದ್ದುಕೊಂಡು ನಿರ್ಣಾಯಕ ಸ್ಥಾನದಲ್ಲಿರುತ್ತಿದ್ದ ಜೆಡಿಯು ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿಯುವ ಲಕ್ಷಣ ಕಾಣಿಸುತ್ತಿದೆ. ಹಾಗೇನಾದರೂ ಆದರೆ, ಬಿಜೆಪಿಯ ಯೋಜನೆಗೆ ಯಶಸ್ಸು ಲಭಿಸಿದಂತೆಯೇ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರದಲ್ಲಿ ಗೊಂದಲ ಇಲ್ಲ ಎಂದು ವಾದಿಸಬಹುದು. ಆದರೆ, ವಾಸ್ತವ ಹಾಗೆ ಇರಲಾರದು. ಬಿಜೆಪಿಯ ಒಂದು ಬಣ ಈಗಾಗಲೇ ‘ಬಿಜೆಪಿಯವರೇ ಮುಖ್ಯಮಂತ್ರಿಯಾಗಬೇಕು’ ಎಂದು ಸಣ್ಣ ಧ್ವನಿಯಲ್ಲಿ ಹೇಳಲಾರಂಭಿಸಿದೆ. ಆ ಧ್ವನಿ ಒತ್ತಡವಾಗಿ ರೂಪಾಂತರಗೊಳ್ಳುವುದಿಲ್ಲ ಎಂದು ಹೇಳಲಾಗದು. ಹಾಗೇನಾದರೂ ಆದರೆ ನಿತೀಶ್‌ಗೆ ಮುಖ್ಯಮಂತ್ರಿ ಸ್ಥಾನ ದಕ್ಕುವುದು ಅನುಮಾನವೇ. ಆದ್ದರಿಂದ ಎನ್‌ಡಿಎ ಅಧಿಕಾರ ಹಿಡಿದರೂ ‘ಬಿಹಾರದಲ್ಲಿ ನಿತೀಶ್‌ ಯುಗ ಅಂತ್ಯವಾಯಿತೇ’ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT