ಸೋಮವಾರ, ಜನವರಿ 25, 2021
17 °C

'ಹಿಂದೂಸ್ತಾನ್‌' ಬದಲಿಗೆ 'ಭಾರತ್‌' ಎಂದು ಪ್ರಮಾಣ ವಚನ ಸ್ವೀಕರಿಸಿದ ಬಿಹಾರ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದ ನೂತನ ಶಾಸಕರಿಗೆ ಸೋಮವಾರ ಪ್ರಮಾಣ ವಚನ ಬೋಧಿಸಲಾಗಿದ್ದು, ಈ ವೇಳೆ ಉರ್ದು ಶಪಥದಲ್ಲಿದ್ದ 'ಹಿಂದೂಸ್ತಾನ್‌' ಎಂಬ ಪದ ಬದಲಿಸಿ 'ಭಾರತ್‌' ಎಂದು ಮಾಡುವಂತೆ ಎಐಎಂಐಎಂ ಶಾಸಕ ಒತ್ತಾಯಿಸಿದ್ದಾರೆ. 

ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಖ್ತರುಲ್ ಇಮಾನ್ ಅವರು ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಎದ್ದು ನಿಲ್ಲುತ್ತಲೇ ಈ ಬೇಡಿಕೆ ಇಟ್ಟರು. ಅಖ್ತರುಲ್‌ ಅವರ ಬೇಡಿಕೆಯನ್ನು ಕಂಡು ಆಶ್ಚರ್ಯಗೊಂಡ ಹಂಗಾಮಿ ಸ್ಪೀಕರ್‌ ಜಿತನ್‌ ರಾಮ್‌ ಮಾಂಜಿ, 'ಈ ವರೆಗೆ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಹಿಂದೂಸ್ತಾನ್‌ ಎಂದೇ ಹೇಳಿದ್ದಾರೆ,' ಎಂದು ತಿಳಿಸಿದರು.

ಆದರೂ, 'ಹಿಂದೂಸ್ತಾನ' ಎಂಬುದರ ಬದಲಿಗೆ 'ಭಾರತ್‌' ಎಂದು ಹೇಳಲು ಸ್ಪೀಕರ್‌ ನಂತರ ಅವಕಾಶ ಕಲ್ಪಿಸಿಕೊಟ್ಟರು. ಹಿಂದೂಸ್ತಾನ ಎಂಬುದರ ಬಗ್ಗೆ ಇದ್ದ ಆಕ್ಷೇಪಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖ್ತರುಲ್‌, ' ನಾನು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ,' ಎಂದು ಹೇಳಿದರು. 

'ನಾವು ಯಾವುದೇ ಭಾಷೆಯಲ್ಲಿ ಸಂವಿಧಾನದ ಮುನ್ನುಡಿಯನ್ನು ಓದಿದರೂ, ಅಲ್ಲಿ ಭಾರತ್ ಎಂಬ ಪದವನ್ನು ಉಲ್ಲೇಖಿಸಲಾಗಿರುತ್ತದೆ. ಇದನ್ನೇ ನಾನು ಸರಳವಾಗಿ ಹೇಳಿದ್ದೇನೆ. ನಾವು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವುದರಿಂದ ಈ ವಿಷಯ ತಿಳಿಸಿದ್ದೇನೆ,' ಎಂದು ಅವರು ಸ್ಪಷ್ಟಪಡಿಸಿದರು.

ಈ ಕುರಿತು ಮಾತನಾಡಿರುವ ಆಡಳಿತ ಪಕ್ಷ ಜೆಡಿಯು ಶಾಸಕ ಮದನ್‌ ಸಹ್ನಿ, 'ಹಿಂದುಸ್ತಾನ ಎಂಬ ಪದ ಸಾಮಾನ್ಯವಾಗಿ ಎಲ್ಲೆಡೆ ಬಳಸುವಂಥದ್ದು. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡುವ ಮೂಲಕ ಕೆಲವರು ತಾವು ಪ್ರತ್ಯೇಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ,' ಎಂದು ಹೇಳಿದ್ದಾರೆ. 

ಬಿಜೆಪಿ ಶಾಸಕ ನೀರಜ್‌ ಸಿಂಗ್‌ ಬಬ್ಲು, ' ಹಿಂದೂಸ್ತಾನ್ ಎಂಬ ಪದದಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ,' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು