ಮಂಗಳವಾರ, ಮಾರ್ಚ್ 21, 2023
23 °C

ಬಿಹಾರದಲ್ಲಿ ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 60ಕ್ಕೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರದ ಸರಣ್‌ ಜಿಲ್ಲೆಯಲ್ಲಿ ಸಂಭವಿಸಿದ ಕಳ್ಳಬಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಇರುವ ಮದ್ಯ ನಿಷೇಧ ಕಾನೂನಿನ ಔಚಿತ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸತತ ಮೂರನೇ ದಿನವೂ ವಿರೋಧ ಪಕ್ಷಗಳು ಸರಣ್‌ ದುರಂತದ ಕುರಿತು ಗದ್ದಲ ಎಬ್ಬಿಸಿದವು. ಸ್ಪೀಕರ್‌ ಪೀಠದ ಎದುರು ಬಿಜೆಪಿ ಶಾಸಕರು ಫಲಕಗಳನ್ನು ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಾಘಟಬಂಧನಕ್ಕೆ ಬೆಂಬಲ ನೀಡಿರುವ ಸಿಪಿಎಂ (ಎಂಎಲ್‌) ಲಿಬರೇಷನ್‌ ಪಕ್ಷ ಕೂಡ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದೆ. ಮದ್ಯ ಸೇವಿಸಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದಿಲ್ಲ ಎಂಬ ನಿಯಮವು ಮದ್ಯ ನಿಷೇಧ ಕಾನೂನಿನಲ್ಲಿದೆ. ಕಾನೂನಿನ ಈ ಅಂಶದ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಪಕ್ಷ ಆಗ್ರಹಿಸಿದೆ.

ಎಸ್‌ಐಟಿ ರಚನೆ: ಸರಣ್‌ ಕಳ್ಳಬಟ್ಟಿ ದುರಂತದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್‌ ಮೀನಾ ಹೇಳಿದ್ದಾರೆ. 

‘ಕಳೆದ 48 ಗಂಟೆಗಳಲ್ಲಿ 126 ಕಳ್ಳಬಟ್ಟಿ ವ್ಯಾಪಾರಿಗಳನ್ನು ಬಂಧಿಸಲಾಗಿದೆ. 4 ಸಾವಿರ ಲೀಟರ್‌ ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ. 

ಜೋ ಪಿಯೇಗಾ, ವೋ ಮರೇಗಾ: ನಿತೀಶ್‌
ಕಳ್ಳಬಟ್ಟಿ ದುರಂತದ ಕುರಿತು ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ‘ಯಾರು ಕುಡಿಯುತ್ತಾರೊ ಅವರು ಸಾಯುತ್ತಾರೆ’ (ಜೋ ಪಿಯೆಗಾ, ವೋ ಮರೆಗಾ) ಎಂದರು. ನಿತೀಶ್‌ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

‘ಕಳ್ಳಬಟ್ಟಿಯಿಂದಾದ ಸಾವಿಗೂ ಮದ್ಯ ನಿಷೇಧ ಕಾನೂನಿಗೂ ಸಂಬಂಧ ಕಲ್ಪಿಸುತ್ತಿರುವುದರಿಂದ ದಿಗ್ಬ್ರಾಂತನಾಗಿದ್ದೇನೆ. ಮದ್ಯ ನಿಷೇಧ ಕಾನೂನು ಜಾರಿಯಲ್ಲಿರದ ರಾಜ್ಯಗಳಲ್ಲೂ ಜನರು ಕಳ್ಳಬಟ್ಟಿ ಕುಡಿದು ಸಾಯುತ್ತಾರೆ’ ಎಂದು ನಿತೀಶ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು