ಶನಿವಾರ, ಸೆಪ್ಟೆಂಬರ್ 18, 2021
21 °C

‘ಬಿಹಾರಿ ಗೂಂಡಾ’ ವಾಕ್ಸಮರ: ಬಿಜೆಪಿ ಸಂಸದ ದುಬೆ ಆರೋಪ- ಹಳಿಗೆ ಬಾರದ ಕಲಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮನ್ನು ‘ಬಿಹಾರಿ ಗೂಂಡಾ’ ಎಂದು ಸಂಬೋಧಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಗುರುವಾರ ಆರೋಪಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಬುಧವಾರ ನಿಗದಿಯಾಗಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ಸಭೆಯಲ್ಲಿ ದುಬೆ ಅವರು ಭಾಗಿಯಾಗಿರಲೇ ಇಲ್ಲ ಎಂದು ಮಹುವಾ ತಿರುಗೇಟು ನೀಡಿದ್ದಾರೆ. 

‘ಸಂಸದನಾಗಿ ನನ್ನ 13 ವರ್ಷಗಳ ಅನುಭವದಲ್ಲಿ ಟಿಎಂಸಿ ಪಕ್ಷದ ಒಬ್ಬ ಮಹಿಳೆ ನನ್ನನ್ನು ಹೀಗೆ ಕರೆದಿದ್ದಾರೆ. ನನ್ನ ಜೀವನದಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ’ ಎಂದು ದುಬೆ ಅವರು ಲೋಕಸಭೆಯಲ್ಲಿ ಗುರುವಾರ ಈ ವಿಚಾರ ಪ್ರಸ್ತಾಪಿಸಿದ್ದಾರೆ. ತಮ್ಮ ವಿರುದ್ಧ ಬಳಸಲಾಗಿದೆ ಎಂದು ದುಬೆ ಹೇಳಿಕೊಂಡ ಪದವನ್ನು ನಂತರ ಕಡತದಿಂದ ತೆಗೆದುಹಾಕಲಾಯಿತು.

ಟಿಎಂಸಿ ಸಂಸದರು ಉತ್ತರ ಭಾರತೀಯರನ್ನು ಅವಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದುಬೆ ಆರೋಪಿಸಿದರು. ‘ನಾವು ಮಾಡಿದ ತಪ್ಪಾದರೂ ಏನು. ಈ ದೇಶವನ್ನು ಅಭಿವೃದ್ಧಿಪಡಿಸಲು ಯತ್ನಿಸಿದ್ದೇ ನಮ್ಮ ತಪ್ಪು. ಹಿಂದಿ ಮಾತನಾಡುವ ಉತ್ತರ ಪ್ರದೇಶದ ಅಥವಾ ಮಧ್ಯಪ್ರದೇಶದ ಜನರ ರೀತಿಯಲ್ಲೇ ನಾವೂ ಕಾರ್ಮಿಕರಾಗಿ ಈ ದೇಶದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ, ಶ್ರಮಿಸಿದ್ದೇವೆ‘ ಎಂದು ದುಬೆ ಹೇಳಿದರು.

ಇದಕ್ಕೆ ಮಹುವಾ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ಅಚ್ಚರಿಯಾಗಿದೆ. ಕೋರಂ ಕೊರತೆಯ ಕಾರಣ ಸಂಸದೀಯ ಸಮಿತಿ ಸಭೆ ನಡೆಯಲಿಲ್ಲ. ಹಾಜರಿಲ್ಲದ ಸದಸ್ಯರನ್ನು ನಾನು ಅವಹೇಳನ ಮಾಡುವುದು ಹೇಗೆ ಸಾಧ್ಯ. ಹಾಜರಾತಿ ಕಡತವನ್ನು ಪರಿಶೀಲಿಸಿ’ ಎಂದಿದ್ದಾರೆ.

ಪೆಗಾಸಸ್ ಗೂಢಚರ್ಯೆ ಪ್ರಕರಣ ಸಂಬಂಧ ಅಧಿಕಾರಿಗಳನ್ನು ವಿಚಾರಣೆ ನಡೆಸಬೇಕಿದ್ದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯು ಕೋರಂ ಕೊರತೆಯಿಂದ ಬುಧವಾರ ನಡೆಯಲಿಲ್ಲ. ‘ನಡೆಯದ ಸಭೆಯ ಬಗ್ಗೆ ನಾನು ಹೇಗೆ ವಿವರಿಸಲಿ. ಯಾರೂ ಇಲ್ಲದ ಸಭೆಯಲ್ಲಿ ಯಾರೋ ಏನೋ ಆರೋಪ ಮಾಡಿದರು ಎಂದರೆ, ನಾನು ಹೇಗೆ ಉತ್ತರಿಸಲಿ’ ಎಂದು ಸಮಿತಿಯ ಅಧ್ಯಕ್ಷ, ಕಾಂಗ್ರೆಸ್ ಸಂಸದ ತರೂರ್ ಪ್ರಶ್ನಿಸಿದ್ದಾರೆ.  

ಕೆಲವು ಶಕ್ತಿಗಳು ಸಮಿತಿಯ ಕಾರ್ಯವನ್ನು ಹಳಿತಪ್ಪಿಸಲು ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಿವೆ ಎಂದು ತರೂರ್ ಆರೋಪಿಸಿದ್ದಾರೆ. 

ಸಭೆಯ ಕೊಠಡಿಯಲ್ಲಿ ಹಾಜರಿದ್ದ ಸಮಿತಿಯ ಬಿಜೆಪಿ ಸದಸ್ಯರು ಪ್ರತಿಭಟನಾರ್ಥವಾಗಿ ಹಾಜರಾತಿ ಕಡತಕ್ಕೆ ಸಹಿ ಹಾಕಿರಲಿಲ್ಲ. 

ದುಬೆ ಅವರು ತಮ್ಮ ವಿರುದ್ಧ ಮಂಡಿಸಿರುವ ನಿಲುವಳಿ ಮಂಡನೆ ಬಗ್ಗೆ ಪ್ರಶ್ನಿಸಿದಾಗ, ಇದಕ್ಕೆ ಯಾವುದೇ ಸಿಂಧುತ್ವವಿಲ್ಲ ಎಂದು ತರೂರ್ ಉತ್ತರಿಸಿದರು. ‘ಗೊತ್ತುವಳಿ ಮಂಡನೆಗೆ ಒಪ್ಪಿಗೆ ಪಡೆಯಬೇಕು ಮತ್ತು 25 ಸದಸ್ಯರು ಅದನ್ನು ಬೆಂಬಲಿಸಬೇಕು‘ ಎಂದಿದ್ದಾರೆ. 

ತರೂರ್ ಹೇಳಿಕೆಗೆ ತಿರುಗೇಟು ನೀಡಿರುವ ದುಬೆ, ‘ತರೂರ್‌ಗೆ ನಿಯಮಗಳ ಬಗ್ಗೆ ತಿಳಿದಿಲ್ಲ. ಅವರು ಹತಾಶೆಗೆ  ಒಳಗಾಗಿದ್ದಾರೆ. ಅವರು ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಬಯಕೆ ಹೊಂದಿದ್ದಾರೆ’ ಎಂದಿದ್ದಾರೆ. 

ದುಬೆ ಮತ್ತು ತರೂರ್ ಇಬ್ಬರೂ ಈ ಹಿಂದೆ ಪರಸ್ಪರರ ವಿರುದ್ಧ ಖಾಸಗಿ ನಿಲುವಳಿ ಮಂಡಿಸಿದ್ದರು. ಬಿಜೆಪಿ ಸದಸ್ಯರ ಪ್ರಾಬಲ್ಯ ಹೊಂದಿರುವ ಸ್ಥಾಯಿಸಮಿತಿಯು ಆಗಾಗ್ಗೆ ಘರ್ಷಣೆಗಳಿಗೆ ಸಾಕ್ಷಿಯಾಗುತ್ತಿದೆ.

ಹಳಿಗೆ ಬಾರದ ಕಲಾಪ

ಸಂಸತ್ ಕಲಾಪವನ್ನು ಹಳಿಗೆ ತರಲು ನಡೆಸಿದ ಯತ್ನಗಳು ಗುರುವಾರವೂ ವಿಫಲವಾಗಿವೆ. ಪೆಗಾಸಸ್ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಇಟ್ಟಿರುವ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರ ನಿರಾಕರಿಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಗದ್ದಲದ ಮಧ್ಯೆಯೇ ಮೂರು ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು.  

ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರ ಭೇಟಿ ಮಾಡಿ ಗೊಂದಲ ಪರಿಹರಿಸಲು ಯತ್ನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯ ಪ್ರತಿಪಕ್ಷ ನಾಯಕರು ಪೆಗಾಸಸ್ ಕುರಿತು ಚರ್ಚಿಸಲು ಒತ್ತಾಯಿಸಿ ಸಂಸದರ ಸಹಿ ಹೊಂದಿರುವ ಪತ್ರದೊಂದಿಗೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ.

ಪೆಗಾಸಸ್ ಕುರಿತು ಚರ್ಚೆಯ ಬೇಡಿಕೆಯಿಂದ ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ನಿರ್ಧರಿಸಿದೆ. ರಾಜನಾಥ್ ಜೊತೆ ಸಭೆ ನಡೆದಲ್ಲಿ, ಪ್ರತಿಪಕ್ಷದ ನಿಲುವನ್ನು ಮನವರಿಕೆ ಮಾಡಿಕೊಡುವ ಹೊಣೆಯನ್ನು ಖರ್ಗೆ ಅವರಿಗೆ ವಹಿಸಲಾಗಿದೆ.

ರಾಜ್ಯಸಭೆಯಲ್ಲಿ ಸದನ ನಾಯಕ ಪೀಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಖರ್ಗೆ ಅವರು ಎರಡು ಬಾರಿ ಭೇಟಿಯಾದ ಬಗ್ಗೆ ಕಾಂಗ್ರೆಸ್ ರಾಜ್ಯಸಭಾ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರನ್ನು ಕೇಳಿದಾಗ, ‘ಅವರು ಏನೂ ಹೇಳಲಿಲ್ಲ, ಚಹಾ ಸೇವಿಸಿದರು ಮತ್ತು ಹೊರಟುಹೋದರು‘ ಎಂದರು.   

ದಿನವಿಡೀ ಉಭಯ ಸದನಗಳನ್ನು ಪ್ರತಿಭಟನೆಯ ಕಾರಣ ಅನೇಕ ಬಾರಿ ಮುಂದೂಡಲಾಯಿತು. ಘೋಷಣೆ ಕೂಗಿದ ವಿಪಕ್ಷಗಳ ಸಂಸದರ ಮೇಲೆ ಜ್ಯೋತಿರಾದಿತ್ಯ ಸಿಂಧಿಯಾ ಹರಿಹಾಯ್ದರು. ಲೋಕಸಭೆಯಲ್ಲಿ ಆರು ಮತ್ತು ರಾಜ್ಯಸಭೆಯಲ್ಲಿ ಮೂರು – ಒಟ್ಟು ಒಂಬತ್ತು ಮಸೂದೆಗಳಿಗೆ ಸರ್ಕಾರವು ಚರ್ಚೆಯಿಲ್ಲದೇ ಅಂಗೀಕಾರ ಪಡೆಯಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು