ಸೋಮವಾರ, ಜನವರಿ 25, 2021
21 °C

ಹಕ್ಕಿ ಜ್ವರ: ಮೊಟ್ಟೆ ತಿನ್ನಬಹುದಾ? ಚಿಕನ್‌ನಿಂದ ಸೋಂಕು ಬರುತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಈಗಾಗಲೇ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢಪಟ್ಟಿದೆ. ಪ್ರಾಣಿ–ಪಕ್ಷಿ ಸಂಗ್ರಹಾಲಯಗಳು, ಹಕ್ಕಿಗಳ ಮಾರಾಟ ಸ್ಥಳಗಳು, ಕೆಲವು ಕೋಳಿ ಫಾರಂಗಳನ್ನು ಮುಚ್ಚಲಾಗಿದೆ. ಅಂತರ್‌ರಾಜ್ಯ ಕೋಳಿ ಮಾಂಸದ ವಹಿವಾಟಿಗೂ ಪೆಟ್ಟು ಬಿದ್ದಿಗೆ. ಈ ನಡುವೆ ಪದೇ ಪದೇ ಜನರಲ್ಲಿ ಏಳುತ್ತಿರುವ ಪ್ರಶ್ನೆ 'ಚಿಕನ್‌ ತಿನ್ನಬಹುದಾ? ಮೊಟ್ಟೆ ತಿಂದ್ರೆ ನಮಗೂ ಹಕ್ಕಿ ಜ್ವರ ತಗುಲುತ್ತ,...?' –ಇಲ್ಲ ಎಂಬುದು ತಜ್ಞರ ಉತ್ತರ.

ಪೂರ್ಣ ಬೇಯಿಸಿದ ಮೊಟ್ಟೆಗಳು ಹಾಗೂ ಚಿಕನ್‌ ಸೇವಿಸುವುದು ಸುರಕ್ಷಿತ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಪಶುಸಂಗೋಪನಾ ಸಚಿವ ಗಿರಿರಾಜ್‌ ಸಿಂಗ್‌ ಸರ್ಕಾರದ ಮಾರ್ಗಸೂಚಿ ಜೊತೆಗೆ ಟ್ವೀಟಿಸಿದ್ದರು. ಅಧಿಕ ಉಷ್ಣಾಂಶದಲ್ಲಿ ಈ ವೈರಸ್‌ ಸಕ್ರಿಯವಾಗಿರಲು ಸಾಧ್ಯವಾಗುವುದಿಲ್ಲ, ಹಾಗಾಗಿ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಇನ್ನೂ ಮಾಂಸದ ಮಧ್ಯಭಾಗದಲ್ಲಿನ ನಸುಗೆಂಪು ಬಣ್ಣ ಬದಲಾಗುವವರೆಗೂ ಬೇಯಿಸಬೇಕು. ಅರೆ ಬೆಂದ ಮಾಂಸ–ಮೊಟ್ಟೆ ಅಪಾಯಕಾರಿಯಾಗಬಹುದು ಎಂದು ತಜ್ಞರು ಸಲಹೆ ಮಾಡಿದ್ದಾರೆ.

ಮುಖ್ಯವಾಗಿ ವಲಸೆ ಹಕ್ಕಿಗಳಿಂದ ಹಕ್ಕಿ ಜ್ವರ ವ್ಯಾಪಿಸುವ ಸಾಧ್ಯತೆ ಅಧಿಕ. ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಿಂದ ಮಾಂಸ ಮತ್ತು ಪಕ್ಷಿಗಳ ಸಾಗಣೆ ನಡೆಯದಂತೆ ಎಚ್ಚರವಹಿಸಲು ಸೂಚಿಸಲಾಗಿದೆ. ಹಕ್ಕಿ ಜ್ವರದಿಂದ ಸತ್ತಿರುವ ಪಕ್ಷಿಗಳನ್ನು ಸಾಗಿಸುವ ಸಂದರ್ಭಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ತಳ್ಳಿ ಹಾಕಲಾಗದು ಎಂದು ಸರ್ಕಾರ ಹೇಳಿದೆ.

ಹಕ್ಕಿ ಜ್ವರಕ್ಕೆ ಕಾರಣವಾಗುವ ಎಚ್‌5ಎನ್‌8 ವೈರಸ್‌ ಮನುಷ್ಯನಿಗೆ ಹರಡುವ ಶಕ್ತಿ ಹೊಂದಿದೆ. ಬೇಯಿಸಿದ ಪಕ್ಷಿ ಮಾಂಸ ತಿನ್ನುವುದರಿಂದ ಇದು ಮನುಷ್ಯನಿಗೆ ಹರಡುವುದಿಲ್ಲ. ಆದರೆ ಹಕ್ಕಿ ಜ್ವರದಿಂದ ಸತ್ತ ಪಕ್ಷಿಗಳನ್ನು ವಿಲೇವಾರಿ ಮಾಡುವಾಗ ಹರಡುವ ಸಾಧ್ಯತೆ ಇದ್ದು, ಈ ಸಾಧ್ಯತೆಯ ಪ್ರಮಾಣ ಅತ್ಯಂತ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ 2015ರಲ್ಲಿ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಹೇಳಿದೆ.

ವೈರಸ್‌ ಹಕ್ಕಿಗಳ ಸಲೈವಾ, ರಕ್ತ ಹಾಗೂ ಹಿಕ್ಕೆಗಳಿಂದ ಹರಡಬಹುದಾಗಿದೆ. ಇದರಿಂದ ರಕ್ಷಣೆ ಪಡೆಯಲು ಸತ್ತ ಪಕ್ಷಿಗಳನ್ನು ಸಾಗಿಸುವವರು ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಧರಿಸಬೇಕು ಎಂದು ಕೇಂದ್ರ ಸರ್ಕಾರ ಸಲಹೆ ಮಾಡಿದೆ. ಸೋಂಕಿತ ಪಕ್ಷಿಗಳ ಮಾಂಸ ಕತ್ತರಿಸಿದರೆ ಸೋಂಕು ಹರಡುವ ಸಾಧ್ಯತೆ ಇದೆ. 1997ರಲ್ಲಿ ಹಾಂಕಾಂಗ್‌ನಲ್ಲಿ ಎನ್‌5ಎನ್‌1 ವೈರಸ್‌ನಿಂದಾಗಿ ಹಕ್ಕಿ ಜ್ವರದ ಸೋಂಕು 80 ಜನರಲ್ಲಿ ಕಾಣಿಸಿಕೊಂಡಿತ್ತು ಹಾಗೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು. ಆದರೆ, ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್‌ ಹರಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

(ಕೋಳಿ ಫಾರಂಗಳನ್ನು ಮುಚ್ಚುವ ಕುರಿತು ಗಿರಿರಾಜ್‌ ಸಿಂಗ್‌ ಅವರು ಟ್ವೀಟರ್‌ನಲ್ಲಿ ಪ್ರಕಟಣೆ ಹಂಚಿಕೊಂಡಿದ್ದಾರೆ)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು