ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ‘ಹಲಾಲ್‌’ ವಿರುದ್ಧದ ಆಂದೋಲನಕ್ಕೆ ಬಿಜೆಪಿ ಬೆಂಬಲ– ಸಿಪಿಎಂ ಖಂಡನೆ

ಕ್ರಮ ಕೈಗೊಳ್ಳಲು ಹೋಟೆಲ್ ಮಾಲೀಕರ ಸಂಘ ಸಿ.ಎಂಗೆ ಒತ್ತಾಯ
Last Updated 22 ನವೆಂಬರ್ 2021, 15:23 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಹೋಟೆಲ್‌ಗಳಲ್ಲಿ ‘ಹಲಾಲ್’ ನಾಮಫಲಕಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಆಹಾರ ಸಂಸ್ಕೃತಿಯ ವಿರುದ್ಧದ ಅಭಿಯಾನಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿರುವುದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.

ಬಿಜೆಪಿಯು ‘ಹಲಾಲ್’ ವಿರುದ್ಧದ ಅಭಿಯಾನದ ಮೂಲಕ ರಾಜ್ಯದಲ್ಲಿ ಕೋಮುವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಸಿಪಿಎಂ ಆಪಾದಿಸಿದೆ.

ಕೆಲ ಸ್ಥಾಪಿತ ಹಿತಾಸಕ್ತಿ ಗುಂಪುಗಳು ನಿರ್ದಿಷ್ಟವಾಗಿ ‘ಹಲಾಲ್’ ಆಹಾರ ನೀಡುವ ಹೋಟೆಲ್‌ಗಳನ್ನುಹೆಸರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿಬಹಿಷ್ಕಾರದ ಕರೆ ನೀಡುತ್ತಿದ್ದು, ದಾರಿತಪ್ಪಿಸುವ ಇಂಥ ಪ್ರಚಾರಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೋಟೆಲ್ ಮಾಲೀಕರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಗ್ರಹಿಸಿದ್ದಾರೆ.‌‌

ಮುಸ್ಲಿಂ ಧಾರ್ಮಿಕ ಗುರುವೊಬ್ಬರು ‘ಹಲಾಲ್’ ಆಹಾರದ ವಿಧಿ–ವಿಧಾನಗಳನ್ನು ನೆರವೇರಿಸುತ್ತಿರುವ ವಿಡಿಯೊ ತುಣುಕೊಂದು ಪ್ರಚೋದನಕಾರಿಯಾಗಿದ್ದು, ಅದರಲ್ಲಿ ಧರ್ಮಗುರು ಆಹಾರದ ಮೇಲೆ ಉಗುಳುತ್ತಿದ್ದಾರೆ ಮತ್ತು ಹೋಟೆಲ್‌ಗಳಲ್ಲಿ ‘ಹಲಾಲ್’ ಆಹಾರವನ್ನು ಅನುಸರಿಸುತ್ತಿದ್ದಾರೆ ಎನ್ನುವ ತಪ್ಪು ಪ್ರಚಾರವನ್ನು ಆಂದೋಲನದ ಒಂದು ವಿಭಾಗವು ನಡೆಸುತ್ತಿದೆ. ಅಂತೆಯೇ ಮತ್ತೊಂದು ವಿಭಾಗವು ‘ಹಲಾಲ್’ ಆಹಾರದ ಹೋಟೆಲ್‌ಗಳ ಪಟ್ಟಿಯನ್ನು ನೀಡಿ, ಅವುಗಳನ್ನು ಬಹಿಷ್ಕರಿಸಲು ಕರೆ ನೀಡುವ ಪ್ರಚಾರ ಕೈಗೊಂಡಿದೆ. ಅಲ್ಲದೆ ‘ಹಲಾಲ್ ಅಲ್ಲದ ಆಹಾರ’ ನೀಡುವ ಹೋಟೆಲ್‌ಗಳ ವಿರುದ್ಧವೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿ ಅಭಿಯಾನವೂ ನಡೆಯುತ್ತಿದೆ.

‘ಹಲಾಲ್’ ನಾಮಫಲಕಗಳನ್ನು ಪ್ರದರ್ಶಿಸುವ ಹೋಟೆಲ್‌ಗಳ ವಿರುದ್ಧ ಕೇರಳದಲ್ಲಿ ಈ ಹಿಂದೆಯೂ ಅಭಿಯಾನ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗೋಣಿಚೀಲಗಳ ಮೇಲೆ ‘ಹಲಾಲ್’ ಎನ್ನುವ ಲೇಬಲ್‌ವುಳ್ಳ ಬೆಲ್ಲದ ಬಗ್ಗೆಯೂ ರಾಜ್ಯದಲ್ಲಿ ಇತ್ತೀಚೆಗೆ ಗದ್ದಲವಾಗಿತ್ತು. ಈ ಪ್ರಕರಣವು ಕೇರಳ ಹೈಕೋರ್ಟ್‌ನಲ್ಲಿದ್ದು, ಈ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಕೋರ್ಟ್ ಸೋಮವಾರ ವರದಿ ಕೇಳಿದೆ.

ಕೋಮುವಿಭಜನೆ ಸೃಷ್ಟಿಸುವ ಆರ್‌ಎಸ್‌ಎಸ್ ಹುನ್ನಾರ: ಸಿಪಿಎಂ

‘ಹಲಾಲ್’ ಆಹಾರ ಸಂಸ್ಕೃತಿಯ ವಿರುದ್ಧ ನಡೆಯುತ್ತಿರುವ ಅಭಿಯಾನವು ಜನರನ್ನು ತಪ್ಪುದಾರಿಗೆಳೆಯುವ, ರಾಜ್ಯದಲ್ಲಿ ಕೋಮುವಿಭಜನೆಯನ್ನು ಸೃಷ್ಟಿಸುವ ಆರ್‌ಎಸ್‌ಎಸ್‌ ಪ್ರಯತ್ನಗಳ ಭಾಗವಾಗಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಕೊಡಿಯೇರಿ ಬಾಲಕೃಷ್ಣ ಆರೋಪಿಸಿದ್ದಾರೆ.

ಕೇರಳದ ಬಿಜೆಪಿ ನಾಯಕತ್ವವು ಈ ಅಭಿಯಾನವನ್ನು ಬೆಂಬಲಿಸಿದ್ದು, ಹೋಟೆಲ್‌ಗಳಲ್ಲಿ ಹಲಾಲ್ ಆಹಾರ ಸಂಸ್ಕೃತಿಯನ್ನು ನಿಷೇಧಿಸುವಂತೆ ಕೋರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಕೂಡ ಹೋಟೆಲ್‌ಗಳಲ್ಲಿ ಹಲಾಲ್ ಆಹಾರದ ವಿರುದ್ಧ ಬಹಿರಂಗ ಕರೆಗಳನ್ನು ಮಾಡಿದ್ದರು. ಬಿಜೆಪಿ ರಾಜ್ಯ ವಕ್ತಾರ ಸಂದೀಪ್ ವಾರಿಯರ್ ಅವರು ಈ ಅಭಿಯಾನವನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದರು. ಆದರೆ, ನಂತರ ಅವರು ಅದನ್ನು ಹಿಂತೆಗೆದುಕೊಂಡರು.

‘ವ್ಯಾಪಾರ ತಂತ್ರದ ಭಾಗವಾಗಿ ನೋಡಿ’

‘ಹೋಟೆಲ್‌ಗಳಲ್ಲಿ ‘ಹಲಾಲ್’ ಆಹಾರ ನಾಮಫಲಕಗಳನ್ನು ವ್ಯಾಪಾರ ತಂತ್ರವಾಗಿ ಮಾತ್ರ ನೋಡಬೇಕಾಗಿದೆ’ ಎಂದು ಕೇರಳ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಜಯಪಾಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬ್ರಾಹ್ಮಣರ ಹೋಟೆಲ್‌’ಗಳಂತಹ ಶೀರ್ಷಿಕೆಯ ಹೋಟೆಲ್‌ಗಳೂ ಇದ್ದವು. ಹಲಾಲ್ ಮತ್ತು ಹಲಾಲ್ ಅಲ್ಲದ ಆಹಾರ ನೀಡುವ ಹೋಟೆಲ್‌ಗಳನ್ನು ಹೆಸರಿಸುವ ಅಭಿಯಾನಗಳು ಸಮಾಜದಲ್ಲಿ ಒಡಕು ಮೂಡಿಸಲು ಕಾರಣವಾಗುತ್ತವೆ. ಆದ್ದರಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘವು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT