ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗ್ನ ಪ್ರೇಮಿಯಂತೆ ವರ್ತಿಸುತ್ತಿರುವ ಬಿಜೆಪಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಅಕ್ಷರ ಗಾತ್ರ

ಮುಂಬೈ: ಈ ಹಿಂದೆ ಮಿತ್ರಪಕ್ಷವಾಗಿದ್ದ ಬಿಜೆಪಿಯು ಶಿವಸೇನಾದ 25 ವರ್ಷಗಳನ್ನು ಹಾಳುಮಾಡಿದ್ದು, ಇದೀಗ 'ಭಗ್ನ ಪ್ರೇಮಿಯಂತೆ' ವರ್ತಿಸುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಏಕಾಗ್ರತೆಯನ್ನುಹಾಳು ಮಾಡಲು,ಎದುರಾಳಿ ತಂಡದ ಆಟಗಾರರು ಸ್ಲೆಡ್ಜಿಂಗ್‌ ಮಾಡುವಂತೆಯೇ, ಬಿಜೆಪಿಯವರು ಸ್ಲೆಡ್ಜ್‌ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಠಾಕ್ರೆ ಕಿಡಿಕಾರಿದ್ದಾರೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಠಾಕ್ರೆ, 'ಅವರಿಗೆ (ಬಿಜೆಪಿಗೆ) ಸ್ಲೆಡ್ಜ್‌ ಮಾಡುವುದು ಹೇಗೆ ಎಂಬುದು ತಿಳಿದಿದೆ. ಸ್ಲಿಪ್‌, ಗಲ್ಲಿ, ಸಿಲ್ಲಿ ಪಾಯಿಂಟ್‌ಗಳಲ್ಲಿ ನಿಂತು ಸ್ಲೆಡ್ಜ್‌ ಮಾಡುತ್ತಾರೆ. ಅವರು ಬ್ಯಾಟರ್‌ ಅನ್ನು ಹೇಗಾದರೂ ಔಟ್‌ ಮಾಡಲು ಬಯಸುತ್ತಾರೆ. ಹಾಗಾಗಿ ಬ್ಯಾಟರ್‌ಗೆ ತೊಂದರೆ ನೀಡಲು ಸ್ಲೆಡ್ಜ್‌ ಮಾಡುತ್ತಾರೆ' ಎಂದು ಕುಟುಕಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಆರೋಪಗಳ ಬಗ್ಗೆ ಮಾತನಾಡಿರುವ ಅವರು,ಬಿಜೆಪಿಯವರು ಏಕಮುಖ ಪ್ರೇಮಿ (ಒನ್‌ಸೈಡ್‌ ಲವರ್‌) ರೀತಿ ವರ್ತಿಸುತ್ತಿದ್ದಾರೆ. ಒಂದು ವೇಳೆ ಅವರ ಪ್ರೀತಿಯನ್ನು ನಿರಾಕರಿಸಿದರೆ ಏನಾಗುತ್ತದೆ. ಆ್ಯಸಿಡ್ ಎರಚಿ ಪರಾರಿಯಾಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎಸ್‌ಎಸ್‌) ಅಧ್ಯಕ್ಷ ರಾಜ್ ಠಾಕ್ರೆ ಅವರು ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು ಎಂದು ಇತ್ತೀಚೆಗೆ ಸರ್ಕಾರವನ್ನು ಒತ್ತಾಯಿಸಿದ್ದರು. ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅಮರಾವತಿ ಸಂಸದೆ ನವನೀತ್‌ ಕೌರ್‌ ರಾಣಾ ಅವರು, ಸಿಎಂಠಾಕ್ರೆ ಅವರ 'ಮಾತೊಶ್ರೀ' ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಹಾಗೆಯೇ ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಓವೈಸಿ ಅವರು ಮೊಘಲ್‌ ಆಡಳಿತಗಾರ ಔರಂಗಜೇಬ್‌ ಸಮಾಧಿಗೆ ಭೇಟಿ ನೀಡಿದ್ದರು. ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ ಈ ವಿಚಾರಗಳನ್ನು ಪ್ರಸ್ತಾಪಿಸಿದ ಉದ್ಧವ್‌, 'ಬಿಜೆಪಿಯು ಎ, ಬಿ, ಸಿ ಮತ್ತು ಡಿ ತಂಡಗಳನ್ನು ನಿಯೋಜಿಸಿದೆ' ಎಂದು ಗುಡುಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸದ್ಯ ವಿರೋಧ ಪಕ್ಷದ ನಾಯಕರಾಗಿರುವ ದೇವೇಂದ್ರ ಫಡಣವೀಸ್‌ ಅವರು, ಬಾಬರಿ ಮಸೀದಿ ಧ್ವಂಸದ ವೇಳೆ ಶಿವಸೇನಾದ ಯಾವೊಬ್ಬ ಕಾರ್ಯಕರ್ತರೂ ಭಾಗವಹಿಸಿರಲಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಈ ವಿಚಾರವಾಗಿ ಫಡಣವೀಸ್‌ ವಿರುದ್ಧವೂ ಠಾಕ್ರೆ ಕಿಡಿಕಾರಿದ್ದಾರೆ.

'ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗವಹಿಸಿದ್ದಾಗಿ ಅವರು (ದೇವೇಂದ್ರ ಫಡಣವೀಸ್) ಹೇಳಿದ್ದಾರೆ. ಹಾಗಿದ್ದರೆ, ಆಗ ನಿಮ್ಮ ವಯಸ್ಸು ಎಷ್ಟು? ಏನು ಮಾತನಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು, 'ಒಂದು ವೇಳೆ ದೇವೇಂದ್ರ ಫಡಣವೀಸ್ ಬಾಬರಿ ಮಸೀದಿ ಏರಲು ಪ್ರಯತ್ನಿಸಿದ್ದರೆ, ಅದು ಕುಸಿಯುತ್ತಿತ್ತು' ಎಂದು ಕುಟುಕಿದ್ದಾರೆ. ಹಾಗೆಯೇ, ಹಿಂದುತ್ವಕ್ಕೆ ದೇವೇಂದ್ರ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ 2014ರ ವಿಧಾನಸಭೆ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಶಿವಸೇನಾದ (63)ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT