ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಬಿಜೆಪಿ ಬದ್ಧವಾಗಿದೆ: ಅಮಿತ್ ಶಾ

Last Updated 24 ನವೆಂಬರ್ 2022, 15:29 IST
ಅಕ್ಷರ ಗಾತ್ರ

ನವದೆಹಲಿ: ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಬಿಜೆಪಿ ಬದ್ಧವಾಗಿದೆ. ಆದರೆ ಅದನ್ನು ಜಾರಿಗೆ ತರುವಾಗ ಪ್ರಜಾಸತ್ತಾತ್ಮಕವಾದ ಎಲ್ಲ ಪ್ರಕ್ರಿಯೆ ಪಾಲಿಸಲಾಗುವುದು, ಅದರ ಕುರಿತು ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಭಾರತೀಯ ಜನಸಂಘದ ಕಾಲದಿಂದಲೇ ಏಕರೂಪ ನಾಗರಿಕ ಸಂಹಿತೆ ಜಾರಿಯು ಬಿಜೆಪಿಯ ಭರವಸೆಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂಬ ಬಯಕೆ ಬಿಜೆಪಿಗೆ ಮಾತ್ರ ಇರುವುದಲ್ಲ. ಸೂಕ್ತ ಸಮಯದಲ್ಲಿ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದುಸಂವಿಧಾನ ರಚನಾ ಸಭೆಯು ಸಂಸತ್ತು ಮತ್ತು ರಾಜ್ಯಗಳಿಗೆ ಸಲಹೆ ನೀಡಿತ್ತು. ಆದರೆ, ಸಂವಿಧಾನ ರಚನಾ ಸಭೆಯ ಬದ್ಧತೆಯು ಕ್ರಮೇಣ ಮರೆತು ಹೋಯಿತು’ ಎಂದು ಶಾ ಹೇಳಿದ್ದಾರೆ.

‘ಬಿಜೆಪಿಯನ್ನು ಬಿಟ್ಟರೆ ಬೇರೆ ಯಾವ ಪಕ್ಷವೂ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರವಾಗಿ ಇಲ್ಲ. ಅವರು ಈ ಕುರಿತು ಮಾತು ಕೂಡ ಆಡುವುದಿಲ್ಲ. ನೀವು ಅದನ್ನು ಜಾರಿಗೆ ತನ್ನಿ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂದೂ ಈ ಪಕ್ಷಗಳು ಹೇಳುತ್ತಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಅಗತ್ಯ. ಏಕರೂಪ ನಾಗರಿಕ ಸಂಹಿತೆ ಕುರಿತು ಮುಕ್ತ ಮತ್ತು ಆರೋಗ್ಯಕರ ಚರ್ಚೆ ಆಗಬೇಕಾಗಿದೆ’ ಎಂದು ಶಾ ಹೇಳಿದ್ದಾರೆ.

ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ನಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಗುಂಪುಗಳು ಮತ್ತು ವಿವಿಧ ಧರ್ಮಗಳ ಜನರು ತಮ್ಮ ಅಭಿಪ್ರಾಯಗಳನ್ನು ಈ ಸಮಿತಿಯ ಮುಂದಿಡಲಿದ್ದಾರೆ ಎಂದು ಶಾ ಹೇಳಿದ್ದಾರೆ.

‘ಈ ಪ್ರಕ್ರಿಯೆಯಲ್ಲಿ ಬಂದ ಸಲಹೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಎಲ್ಲ ರೀತಿಯ ಚರ್ಚೆಗಳ ಬಳಿಕವೇ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಿಜೆಪಿ ಬದ್ಧವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT