ಗುರುವಾರ , ಮೇ 26, 2022
24 °C

2024ರಲ್ಲಿ ಬಿಜೆಪಿಯನ್ನು‌ ಸೋಲಿಸಬಹುದೇ?: ಪ್ರಶಾಂತ್‌ ಕಿಶೋರ್‌ ಹೇಳುವುದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: 2024ರಲ್ಲಿ ನಡೆಯಲಿರುವ ಸಾರ್ವ‌ತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು. ಆದರೆ, ಸದ್ಯ ಇರುವ ಪ್ರತಿಪಕ್ಷಗಳು ಮತ್ತು ಮೈತ್ರಿಗಳಿಂದ ಅದು ಸಾಧ್ಯವಿಲ್ಲ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಿಶೋರ್‌, 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ? ಎಂದರೆ ಖಚಿತವಾಗಿ ಹೌದು ಎನ್ನಬಹುದು. ಆದರೆ, ಪ್ರಸ್ತುತ ಇರುವ ಪಕ್ಷಗಳು ಮತ್ತು ಮೈತ್ರಿಗಳಿಂದ ಇದು ಬಹುಶಃ ಇಲ್ಲ ಎಂದು ಹೇಳಿದ್ದಾರೆ.

ಪ್ರಶಾಂತ್‌ ಅವರು, 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಪರ ಚುನಾವಣಾ ಕಾರ್ಯತಂತ್ರ ಹೆಣೆದಿದ್ದರು.

ಸದ್ಯದ ರಾಜಕೀಯ ಸ್ಥಿತಿಗತಿ ಕುರಿತು ಮಾತನಾಡಿರುವ ಅವರು, ಹಿಂದುತ್ವ ಮತ್ತು ಕಟು ರಾಷ್ಟ್ರೀಯವಾದದ ಅಸಾಧಾರಣ ನಿರೂಪಣೆಯ ನೆರವಿನಿಂದ ಬಿಜೆಪಿ ಅಕಾರಕ್ಕೇರಿದೆ. ಅದನ್ನು ಎದುರಿಸಲು ಪ್ರತಿಪಕ್ಷಗಳು ಸಮರ್ಥವಾದ ನೀತಿ-ನಿರೂಪಣೆಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಬಿಜೆಪಿಯನ್ನು ಸೋಲಿಸಲು ಬಯಸುವ ಯಾವುದೇ ಪಕ್ಷ ಅಥವಾ ನಾಯಕ 5-10 ವರ್ಷಗಳ ದೃಷ್ಟಿಕೋನವನ್ನು ಹೊಂದಿರಬೇಕು ಎಂಬುದನ್ನು ಒತ್ತಿಹೇಳಿದ್ದಾರೆ.

ಹಾಗೆಯೇ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 200 ಲೋಕಸಭೆ ಕ್ಷೇತ್ರಗಳಲ್ಲಿ (ಒಟ್ಟು 543 ಸ್ಥಾನಗಳ ಪೈಕಿ), ಅಪಾರವಾದ ಜನಪ್ರಿಯತೆಯ ಹೊರತಾಗಿಯೂ ಬಿಜೆಪಿ ಕೇವಲ 50 ಸ್ಥಾನಗಳನ್ನು ಗೆಲ್ಲಬಹುದು.

ಇದು ಏನು ಹೇಳುತ್ತದೆ ಎಂದರೆ, ಕಾಂಗ್ರೆಸ್‌ ಅಥವಾ ತೃಣಮೂಲ ಕಾಂಗ್ರೆಸ್‌ ಅಥವಾ ಮೈತ್ರಿ ಮಾಡಿಕೊಳ್ಳಲು ಬಯಸುವ ಇನ್ಯಾವುದೇ ಪಕ್ಷವಿರಲಿ, ತಮ್ಮನ್ನು ತಾವು ಮರುಸಂಘಟನೆ ಮಾಡಿಕೊಳ್ಳಬೇಕು. ‌ತಮ್ಮಲ್ಲಿನ ಸಂಪನ್ಮೂಲ, ತಂತ್ರಗಾರಿಕೆಯನ್ನು ಬಲಪಡಿಸಿಕೊಳ್ಳಬೇಕು. ಹೀಗೆ ಮಾಡಿಕೊಂಡರೆ, ವಿರೋಧ ಪಕ್ಷಗಳು 250 ರಿಂದ 260 ಸ್ಥಾನಗಳ ವರೆಗೆ ಗೆಲ್ಲಬಹುದು ಎಂದಿದ್ದಾರೆ.

ಪ್ರಮುಖ ಪ್ರತಿಪಕ್ಷಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಶೋರ್‌, ಬಿಹಾರದಲ್ಲಿ 2015ರಲ್ಲಿ ನಡೆದ ಚುನಾವಣೆ ಬಳಿಕ, ಕೇವಲ ಒಂದೇ ಒಂದು ʼಮಹಾಮೈತ್ರಿʼಯೂ ಯಶಸ್ಸು ಕಂಡಿಲ್ಲ. ಪಕ್ಷಗಳು ಒಟ್ಟಿಗೆ ಸೇರಿದರಷ್ಟೇ ಸಾಲದು. ಬದಲಾಗಿ, ತಮ್ಮ ಸಾಮಾಜಿಕ ತಳಹದಿಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಅದು ಯಾದವರು, ಯಾದವೇತರ ಹಿಂದುಳಿದ ಸಮುದಾಯವೇ ಇರಲಿ, ದಲಿತರು ಅಥವಾ ಮೇಲ್ವರ್ಗದವರೇ ಆಗಿರಲಿ. ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಸಾಮಾಜಿಕ ನೆಲೆ ಈಗ ಇರುವುದಕ್ಕಿಂತ ವಿಸ್ತಾರಗೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು