ಮಂಗಳವಾರ, ಜನವರಿ 19, 2021
26 °C
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಆರೋಪ

ಮಮತಾಗೆ ಸೋಲಿನ ಭೀತಿ: ಬಿಜೆಪಿ ಅಧ್ಯಕ್ಷ ನಡ್ಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಪಿಎಂ–ಕಿಸಾನ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ ಹೇಳಿದ್ದಾರೆ. ಪೂರ್ವ ಬರ್ಧಮಾನ್ ಜಿಲ್ಲೆಯ ಕಟ್ವಾದಲ್ಲಿ ಅವರು ಮಾತನಾಡಿದರು.

ಬಿಜೆಪಿಯ ರೈತರನ್ನು ತಲುಪುವ ಸಲುವಾಗಿ ‘ಕೃಷಿಕ್ ಸುರಕ್ಷಾ ಅಭಿಯಾನ’ ಮತ್ತು ‘ಒಂದು ಮುಷ್ಟಿ ಅಕ್ಕಿ ಸಂಗ್ರಹ’ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿ ಚಾಲನೆ ನೀಡಿದೆ. ‘ಬಿಜೆಪಿಯು ಬಂಗಾಳದಲ್ಲಿ ರೈತಪರ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ ನಂತರ ಟಿಎಂಸಿ ಮುಖ್ಯಸ್ಥರಿಗೆ ರೈತರ ಬಗ್ಗೆ ಕಾಳಜಿ ಮೂಡಿದೆ’ ಎಂದು ನಡ್ಡಾ ನುಡಿದರು.

‘ಪಿಎಂ ಕಿಸಾನ್ ಯೋಜನೆ ಆರಂಭಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಅವರು ಪತ್ರ ಬರೆದಿದ್ದಾರೆಂದು ತಿಳಿಯಿತು. ಆದರೆ, ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಇದು ತುಂಬಾ ತಡವಾಯಿತು. ಬಂಗಾಳದ 4.67 ಲಕ್ಷ ಜನರಿಗೆ ದೊರೆಯಬೇಕಿದ್ದ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನೂ ಟಿಎಂಸಿ ಸರ್ಕಾರ ಕಸಿದುಕಂಡಿದೆ. ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿಯು ಯೋಜನೆಯನ್ನು ಅನುಷ್ಠಾನ ಮಾಡಲಿದೆ’ ಎಂದಿದ್ದಾರೆ.

ರೈತರ ಹತ್ತಿರಕ್ಕೆ ಬಿಜೆಪಿಯನ್ನು ಕೊಂಡೊಯ್ಯುವ ಭಾಗವಾಗಿ, ನಡ್ಡಾ ಅವರು ರಾಜ್ಯದ ಐದು ರೈತರ ಕುಟುಂಬಗಳಿಂದ ಕೆಲವು ಬೆಳೆ ಮತ್ತು ತರಕಾರಿ ಸಂಗ್ರಹಿಸಿದರು.

ಶಾ ಭೇಟಿ ಮಾಡಿದ ರಾಜ್ಯಪಾಲ: ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

‘ದಾಳಿ ನಿಮ್ಮ ಸಂಸ್ಕೃತಿಯೇ’

ತಮ್ಮ ಹೆಸರಿಗೆ ವಿಶೇಷಣಗಳನ್ನು ಲಗತ್ತಿಸುವುದು ಮತ್ತು ತಮ್ಮ ಬೆಂಗಾವಲು ಪಡೆ ಮೇಲೆ ದಾಳಿ ಮಾಡುವುದು ಪಶ್ಚಿಮ ಬಂಗಾಳದ ಸಂಸ್ಕೃತಿಯೇ ಎಂದು ನಡ್ಡಾ ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ಒಂದು ವಿಡಿಯೊದಲ್ಲಿ ನಡ್ಡಾ ಅವರ ಅಡ್ಡಹೆಸರನ್ನು (ಸರ್‌ನೇಮ್) ಮಮತಾ ಲೇವಡಿ ಮಾಡಿದ್ದಾರೆ ಎನ್ನಲಾಗಿದೆ. ಡಿ.10ರಂದು ನಡ್ಡಾ ಅವರು ಬಂಗಾಳಕ್ಕೆ ಭೇಟಿ ನೀಡಿದಾಗ ಅವರ ಬೆಂಗಾವಲು ಪಡೆ ಮೇಲೆ ದಾಳಿ ಎಸಗಲಾಗಿತ್ತು.

‘ಪಶ್ಚಿಮ ಬಂಗಾಳಕ್ಕೆ ಹೊರಗಿನಿಂದ ಬರುವವರ ಬಗ್ಗೆ ಟಿಎಂಸಿಯಲ್ಲಿ ಚರ್ಚೆಗಳು ನಡೆದಿವೆ. ಆದರೆ ರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರುದ್ಧ ನಡೆದುಕೊಳ್ಳುವ ಪಕ್ಷ, ಅದರ ಮುಖ್ಯಸ್ಥರ ಬಗ್ಗೆ ಏನು ಹೇಳಬೇಕು’ ಎಂದು ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.

* ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಆಯುಷ್ಮಾನ್ ಭಾರತ್, ಪಿಎಂ ಕಿಸಾನ್ ಯೋಜನೆ ಜಾರಿಗೆ ಬರಲಿವೆ. 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲ್ಲಲಿದೆ.

-ಜೆ.ಪಿ. ನಡ್ಡಾ ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು