ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: 'ಏಕ್‌ ಮೂತಿ ಚಾವಲ್‌' ಅಭಿಯಾನಕ್ಕೆ ಜೆ.ಪಿ. ನಡ್ಡಾ ಚಾಲನೆ

Last Updated 7 ಜನವರಿ 2021, 13:52 IST
ಅಕ್ಷರ ಗಾತ್ರ

ಕೋಲ್ಕತ್ತ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಶ್ಚಿಮ ಬಂಗಾಳಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ.

ಕೇಂದ್ರ ಸರ್ಕಾರವು ರೈತ ವಿರೋಧಿ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿರುವ ಬೆನ್ನಲ್ಲೇ 'ಏಕ್ ಮೂತಿ ಚಾವಲ್‌' (ಒಂದು ಹಿಡಿ ಅಕ್ಕಿ) ಅಭಿಯಾನವನ್ನು ನಡ್ಡಾ ಆರಂಭಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಮಾಹಿತಿ ನೀಡಿದೆ.

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇ ಏರಿದ್ದು, ಜೆ.ಪಿ.ನಡ್ಡಾ ನೇತೃತ್ವದ ಅಭಿಯಾನವು ಮಹತ್ವ ಪಡೆದುಕೊಂಡಿದೆ.

ಪಕ್ಷದ ಅಧಿಕೃತ ಮಾಹಿತಿಯ ಪ್ರಕಾರ, ನಡ್ಡಾ ಅವರು ಪಶ್ಚಿಮ ಬಂಗಾಳದ ಬುರ್ದ್ವಾನ್‌ ಜಿಲ್ಲೆಯಿಂದ ಅಭಿಯಾನ ಆರಂಭಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಈ ಅಭಿಯಾನವನ್ನು ಮುಂದುವರೆಸಲಿದ್ದು, 48,000 ಕೃಷಿಕರ ನಿವಾಸಗಳಿಗೆ ತೆರಳಿ ಅಕ್ಕಿಯನ್ನು ಸಂಗ್ರಹಿಸಲಿದ್ದಾರೆ.

'ಅಕ್ಕಿಯನ್ನು ಸಂಗ್ರಹಿಸುವ ಅಭಿಯಾನವು ಒಂದು ತಿಂಗಳು ನಡೆಯಲಿದೆ. ಸಂಗ್ರಹಿಸಿದ ಅಕ್ಕಿಯನ್ನು ರೈತರಿಗೆ ಮತ್ತು ಬಡವರಿಗೆ ನೀಡಲಾಗುತ್ತದೆ' ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಹೇಳಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಚರಿಸುತ್ತಿದ್ದ ವಾಹನ ಮತ್ತು ಜತೆಗಿದ್ದ ವಾಹನಗಳ ಮೇಲೆ ಪಶ್ಚಿಮ ಬಂಗಾಳದ ಡೈಮಂಡ್‌ ಹಾರ್ಬರ್‌ ಪ್ರದೇಶದಲ್ಲಿ ಡಿಸೆಂಬರ್‌ 11ರಂದು ಕಲ್ಲೆಸೆಯಲಾಗಿತ್ತು. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT