ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಬಳಿಕ ರಥಯಾತ್ರೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ

Last Updated 16 ಜನವರಿ 2023, 21:16 IST
ಅಕ್ಷರ ಗಾತ್ರ

ನವದೆಹಲಿ: ಬಜೆಟ್ ಅಧಿವೇಶನದ ನಂತರ ರಾಜ್ಯದ ನಾಲ್ಕು ಕಡೆ ರಥಯಾತ್ರೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನವದೆಹಲಿಯಲ್ಲಿ ಸೋಮವಾರ ಆರಂಭವಾಗಿದೆ. ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ರಾಜ್ಯದ ಕೆಲವು ಮುಖಂಡರು ಕಾರ್ಯಕಾರಿಣಿಯಲ್ಲಿ ಭಾಗಿಯಾಗಿದ್ದಾರೆ.

ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ’ಕಾರ್ಯಕಾರಿಣಿಯಲ್ಲಿ ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳ ಬಗ್ಗೆ ವರದಿ ಮಂಡಿಸಲಾಯಿತು. ಬೂತ್ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು, ಸಂಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

’ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇವೆ. ನಕಾರಾತ್ಮಕ ಪ್ರಚಾರದ ಪ್ರಯತ್ನಗಳು ನಡೆದರೂ ಪರಿಣಾಮ ಬೀರಿಲ್ಲ. ರಾಜ್ಯದಲ್ಲಿ ಬಿಜೆಪಿ ನಡೆಸಿರುವ ಜನಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ. ಹೇಗೆ ಮಾಡಬೇಕು ಎಂಬುದು ನಿರ್ಧಾರ ಆಗಿಲ್ಲ. ಆದರೆ, ನಾಲ್ಕು ದಿಕ್ಕಿನಿಂದ ರಥಯಾತ್ರೆ ಮಾಡಬೇಕು ಎಂದು ನಿರ್ಧರಿಸಲಾಗಿದೆ’ ಎಂದರು.

‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಲವು ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ರಾಜ್ಯ ಘಟಕವು ರಾಷ್ಟ್ರೀಯ ಘಟಕಕ್ಕೆ ವರದಿಯನ್ನು ನೀಡಿದೆ. ಕಾರ್ಯಕಾರಿಣಿ ಮುಗಿದ ಬಳಿಕ ಈ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದರು.

ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದು ಈ ಹಿಂದಿನಿಂದಲೂ ನಡೆಯುತ್ತಿತ್ತು. ಇದರ ಹಿಂದಿರುವವರು ಯಾರು ಎಂಬುದು ಗೊತ್ತಿದೆ’ ಎಂದರು.

ಆರೋಪಕ್ಕೆ ತಿರುಗೇಟಿಗೆ ಸೂಚನೆ: ‘ಯಾವುದೇ ವಿಷಯದ ಬಗ್ಗೆ ಆರೋಪಗಳನ್ನು ಮಾಡಲು ವಿರೋಧ ಪಕ್ಷಗಳಿಗೆ ಅವಕಾಶ ನೀಡಬಾರದು. ವಿರೋಧ ಪಕ್ಷಗಳ ಚುನಾವಣಾ ಘೋಷಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಅದಕ್ಕೆ ತಕ್ಕ ಪ್ರತಿ ತಂತ್ರ ಹೆಣೆಯಬೇಕು ಎಂಬುದಾಗಿ ರಾಷ್ಟ್ರೀಯ ನಾಯಕರು ಹೇಳಿದರು’ ಎಂದು ಮೂಲಗಳು ಹೇಳಿವೆ.

ಮೂರು–ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಿರುವ ಕಲ್ಯಾಣ ಕಾರ್ಯಕ್ರಮಗಳು ಪಕ್ಷದ ಕೈ ಹಿಡಿಯಲಿದೆ ಎಂದೂ ಮುಖ್ಯಮಂತ್ರಿ ಹೇಳಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಯಾವುದೇ ರಾಜಕೀಯ ಪಕ್ಷದ ಮೈತ್ರಿ ಮಾಡಿಕೊಳ್ಳದೆ ಚುನಾವಣೆ ಎದುರಿಸಬೇಕು ಎಂದು ರಾಜ್ಯ ನಾಯಕರು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದರು. ರಾಜ್ಯ ನಾಯಕರು ಮಾಡುತ್ತಿರುವ ಒಳ ಒಪ್ಪಂದಗಳಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆಯಾಯಿತು.

ಪಕ್ಷ ಸಂಘಟನೆ ಬಲಪಡಿಸಲು ಬೂತ್‌ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷರು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಹೆಚ್ಚು ಹೆಚ್ಚು ಭೇಟಿ ನೀಡಬೇಕು ಎಂದು ರಾಜ್ಯ ನಾಯಕರು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೆ 106 ಸ್ಥಾನ– ವರಿಷ್ಠರಿಗೆ ಮಾಹಿತಿ
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಸ್ತುತ ಸನ್ನಿವೇಶದ ಪ್ರಕಾರ ಬಿಜೆಪಿಯು ಸ್ವಂತ ಬಲದಿಂದ 106 ಸ್ಥಾನಗಳನ್ನು ಗೆಲ್ಲಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದಾರೆ.

ಕಾರ್ಯಕಾರಿಣಿ ಸಭೆಯ ನೇಪಥ್ಯದಲ್ಲಿ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೀಸಲಾತಿ ಘೋಷಣೆ ಬಳಿಕ ಆಗಿರುವ ಪರಿಣಾಮಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಮಾಡುತ್ತಿರುವ ಆರೋಪಗಳಿಗೆ ತಕ್ಕ ತಿರುಗೇಟು ನೀಡಬೇಕು ಎಂದು ರಾಜ್ಯ ನಾಯಕರಿಗೆ ರಾಷ್ಟ್ರೀಯ ನಾಯಕರು ಸೂಚಿಸಿದರು ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT