ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಮು ಗೆದ್ದರೆ 1 ಲಕ್ಷ ಆದಿವಾಸಿ ಗ್ರಾಮಗಳಲ್ಲಿ ಸಂಭ್ರಮಾಚರಣೆಗೆ ಬಿಜೆಪಿ ಯೋಜನೆ

Last Updated 15 ಜುಲೈ 2022, 13:31 IST
ಅಕ್ಷರ ಗಾತ್ರ

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಆದಿವಾಸಿ, ಬುಡಕಟ್ಟು ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಜುಲೈ 18ರ ರಾಷ್ಟ್ರಪತಿ ಚುನಾವಣೆಯ ಫಲಿತಾಂಶದ ನಂತರ, ದ್ರೌಪದಿ ಮುರ್ಮು ಅವರ ಗೆಲುವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲು ಯೋಜನೆ ರೂಪಿಸಿದೆ.

ಕೆಲವು ವಿರೋಧ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಮುರ್ಮು ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದು, ಅವರ ಗೆಲವು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಆರಂಭಿಸಲಾಗಿದೆ. ಈ ಸಂಬಂಧ ನಿರ್ದೇಶನಗಳು ಸಿಕ್ಕಿವೆ ಎಂದು ಪಕ್ಷದ ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

‘ಪಕ್ಷ ಮತ್ತು ದೇಶದ ಪ್ರತಿಯೊಬ್ಬರೂ ಮುರ್ಮು ಅವರ ಗೆಲುವಿನ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅವರು ಗೆದ್ದರೆ, ಮೊದಲ ಬುಡಕಟ್ಟು ಮಹಿಳೆ ಅಧ್ಯಕ್ಷರಾದಂತಾಗಲಿದೆ. ದೇಶದಾದ್ಯಂತ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಪ್ರಾಬಲ್ಯವಿರುವ ಹಳ್ಳಿಗಳು ಮತ್ತು ಪ್ರದೇಶಗಳಲ್ಲಿ ಸಂಭ್ರಮಾಚರಣೆ ಆಯೋಜಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಯೋಜನೆಯಂತೆ ದೇಶದ ಒಂದು ಲಕ್ಷಕ್ಕೂ ಅಧಿಕ ಆದಿವಾಸಿ ಗ್ರಾಮಗಳಲ್ಲಿ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

‘ಜುಲೈ 21 ರಂದು ರಾಷ್ಟ್ರಪತಿ ಚುನಾವಣೆಯ ಫಲಿತಾಂಶದ ಅಧಿಕೃತ ಘೋಷಣೆಯ ನಂತರ ವಿಜಯೋತ್ಸವದ ಆಚರಣೆಗಳು ಪ್ರಾರಂಭವಾಗುತ್ತವೆ. ಬುಡಕಟ್ಟು ಪ್ರದೇಶಗಳು, ಮಂಡಲ (ಬ್ಲಾಕ್) ಮಟ್ಟದಲ್ಲಿ ಆಚರಣೆ ನಡೆಸಲಾಗುವುದು ಮತ್ತು ಮುರ್ಮು ಪೋಸ್ಟರ್‌ಗಳನ್ನು ಮಾತ್ರ ಬಳಸಲಾಗುವುದು’ ಎಂದು ಪಕ್ಷದೊಳಗಿನ ಹಲವರು ತಿಳಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯ ನಂತರ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಎಲ್ಲಾ ಗ್ರಾಮಗಳು ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಣ್ಣ ಮಟ್ಟದ ರ‍್ಯಾಲಿಗಳನ್ನೂ ಆಯೋಜಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಈ ತಿಂಗಳ ಆರಂಭದಲ್ಲಿ ಹೈದರಾಬಾದ್‌ನಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಅಭ್ಯರ್ಥಿ ಮುರ್ಮು ಅವರನ್ನು ಶ್ಲಾಘಿಸಿದ್ದರು ಮತ್ತು ಅವರ ಉಮೇದುವಾರಿಕೆಯು ರಾಜಕೀಯವನ್ನು ಮೀರಿದ್ದಾಗಿದೆ ಎಂದು ಹೇಳಿದ್ದರು.

ಈ ವರ್ಷ ನಡೆಯಲಿರುವ ಗುಜರಾತ್‌ನ ವಿಧಾನಸಭಾ ಚುನಾವಣೆ, ಮುಂದಿನ ವರ್ಷ ನಡೆಯಲಿರುವ ಚತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆ, ನಂತರದ ಲೋಕಸಭೆ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯಗಳನ್ನು ಮುರ್ಮು ಅವರ ಗೆಲುವಿನ ಮೂಲಕ ಪಕ್ಷದತ್ತ ಸೆಳೆಯಲು ಬಿಜೆಪಿ ಚಿಂತಿಸಿದೆ.

ಎನ್‌ಡಿಎಯಿಂದ ದ್ರೌಪದಿ ಮುರ್ಮು ಅಭ್ಯರ್ಥಿಯಾಗಿದ್ದರೆ, ಎನ್‌ಡಿಎಯೇತರ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿಸಿವೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, 21ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT