ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಚುನಾವಣೆ ಮುಂದೂಡಲು ಬಿಜೆಪಿ, ಎಸ್‌ಎಡಿ ಚುನಾವಣಾ ಆಯೋಗಕ್ಕೆ ಪತ್ರ

Last Updated 16 ಜನವರಿ 2022, 16:07 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನಲ್ಲಿ ಫೆಬ್ರುವರಿ 14ಕ್ಕೆ ನಿಗದಿಯಾಗಿರುವ ವಿಧಾನಸಭೆ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ (ಸಂಯುಕ್ತ) ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಗುರು ರವಿದಾಸ್‌ ಜಯಂತಿ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಬಿಎಸ್‌ಪಿ ಮತ್ತು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸಹ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಭಾನುವಾರ ಬಿಜೆಪಿ ಸಹ ಅಂಥದ್ದೇ ಮನವಿ ಮಾಡಿದೆ. ಫೆಬ್ರುವರಿ 16ರಂದು ಗುರು ರವಿದಾಸ್ ಅವರ ಜಯಂತಿ ಇದೆ.

ಚುನಾವಣೆ ಮುಂದೂಡುವಂತೆ ಕೋರಿ ಮುಖ್ಯ ಚುನಾವಣಾ ಆಯುಕ್ತರಿಗೆ ಪಂಜಾಬ್‌ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುಭಾಷ್‌ ಶರ್ಮಾ ಬರೆದಿರುವ ಪತ್ರದಲ್ಲಿ 'ಪಂಜಾಬ್‌ ಜನಸಂಖ್ಯೆಯ ಶೇಕಡ 32ರಷ್ಟಿರುವ ಪರಿಶಿಷ್ಠ ಜಾತಿ (ಎಸ್‌ಸಿ) ಸಮುದಾಯದವರು ಸೇರಿದಂತೆ ರಾಜ್ಯದ ಬಹಳಷ್ಟು ಜನರು ಗುರು ರವಿದಾಸ್ ಅವರ ಅನುಯಾಯಿಗಳು. ಅವರ ಜನ್ಮದಿನದ ಪ್ರಯುಕ್ತ ಲಕ್ಷಾಂತರ ಭಕ್ತಾದಿಗಳು ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಿ ಗುರು ಜಯಂತಿ ಆಚರಿಸಲಿದ್ದಾರೆ. ಹಾಗಾಗಿ ಅವರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಗಳಿಂದಾಗಿ ಮತದಾನ ದಿನವನ್ನು ಮುಂದೂಡಲು ಮನವಿ ಮಾಡುತ್ತಿದ್ದೇವೆ' ಎಂದು ಉಲ್ಲೇಖಿಸಿದ್ದಾರೆ.

ಶಿರೋಮಣಿ ಅಕಾಲಿ ದಳದ (ಸಂಯುಕ್ತ) ಮುಖ್ಯಸ್ಥ ಸುಖದೇವ್‌ ಸಿಂಗ್‌ ಧಿಂಡ್ಸ ಸಹ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮತದಾನದ ದಿನವನ್ನು ಮುಂದೂಡುವಂತೆ ಕೋರಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಜನವರಿ 13ರಂದು ಪತ್ರ ಬರೆದಿದ್ದ ಮುಖ್ಯಮಂತ್ರಿ ಚನ್ನಿ, ವಿಧಾನಸಭಾ ಚುನಾವಣೆಯನ್ನು ಕನಿಷ್ಠ ಆರು ದಿನಗಳವರೆಗೆ ಮುಂದೂಡಬೇಕು ಎಂದು ಕೋರಿದ್ದರು.

ಫೆಬ್ರುವರಿ 10ರಿಂದ 16ರ ವರೆಗೂ ಸುಮಾರು 20 ಲಕ್ಷ ಜನರು ಉತ್ತರ ಪ್ರದೇಶದ ಬನಾರಸ್‌ಗೆ ತೆರಳುತ್ತಾರೆ. ಇದರಿಂದ ಅವರು ಮತದಾನದಿಂದ ವಂಚಿತರಾಗುತ್ತಾರೆ. ಹೀಗಾಗಿ ಅವರಿಗೂ ಮತದಾನದ ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದರು.

ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರುವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT