ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ನಬ್ ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ; ವಿಚಾರಣೆ ಮುಂದೂಡಿಕೆ

ಜಾಮೀನು ಕೋರಿ ಮನವಿ
Last Updated 5 ನವೆಂಬರ್ 2020, 15:32 IST
ಅಕ್ಷರ ಗಾತ್ರ

ಮುಂಬೈ: ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಬಂಧನವನ್ನು ಪ್ರಶ್ನಿಸಿ ಹಾಗೂ 2018ರ ಎಫ್‌ಐಆರ್‌ ರದ್ದು ಪಡಿಸುವಂತೆ ಕೋರಿ ಅವರ ಪರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ಶುಕ್ರವಾರ (ನವೆಂಬರ್‌ 6) ಸಂಜೆ 3 ಗಂಟೆ ವರೆಗೂ ಅರ್ಜಿ ವಿಚಾರಣೆ ಮುಂದೂಡಿದೆ.

ಹಿರಿಯ ವಕೀಲರಾದ ಆಬಾದ್ ಪೊಂಡಾ ಮತ್ತು ಹರೀಶ್‌ ಸಾಲ್ವೆ ಅವರು ಅರ್ನಬ್‌ ಗೋಸ್ವಾಮಿ ಪರ ವಾದಿಸುತ್ತಿದ್ದು, ಎಫ್‌ಐಆರ್‌ ರದ್ದು ಪಡಿಸುವಂತೆ ಕೋರಿದ್ದಾರೆ.

ರಾಜ್ಯ ಸರ್ಕಾರ ಮತ್ತು ಇತರೆ ಪ್ರತಿವಾದಗಳ ವಾದ ಕೇಳದೆಯೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಮತ್ತು ಎಂ.ಎಸ್‌.ಕರ್ಣಿಕ್‌ ಅವರನ್ನು ಒಳಗೊಂಡ ನ್ಯಾಯಪೀಠವು ಗುರುವಾರ ಹೇಳಿದೆ. 2018ರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ಸಂಬಂಧ ಅನ್ವಯ್‌ ನಾಯಕ್‌ ಅವರ ಪತ್ನಿ ಅಕ್ಷತಾ ಅವರಿಗೆ ಅರ್ಜಿಯ ಕುರಿತು ನೋಟಿಸ್‌ ತಡವಾಗಿ ಸಲ್ಲಿಕೆಯಾಗಿದೆ.

ಅಕ್ಷತಾ ನಾಯಕ್‌ ಅವರ ಹೇಳಿಕೆ ಪಡೆಯಲು ನೋಟಿಸ್‌ ನೀಡುವಂತೆ ಸೂಚಿಸಿರುವ ಕೋರ್ಟ್‌, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ. '2019ರ ಏಪ್ರಿಲ್‌ನಲ್ಲಿಯೇ ಮುಕ್ತಾಯಗೊಂಡಿರುವ ಪ್ರಕರಣದ ಮರು ತನಿಖೆ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ, ಹಾಗಾಗಿ ಅರ್ನಬ್‌ ಅವರನ್ನು ಬಂಧನದಲ್ಲಿ ಮುಂದುವರಿಸುವುದೂ ಕಾನೂನು ಬಾಹಿರವಾಗಿದೆ. ಅರ್ನಬ್‌ ಅವರಿಗೆ ಮಧ್ಯಂತರ ಜಾಮೀನು ನೀಡುವಂತೆ' ವಕೀಲರು ಕೋರಿದ್ದಾರೆ.

ಬುಧವಾರ ಅರ್ನಬ್‌ ಅವರನ್ನು ಬಂಧಿಸಿ ಅಲಿಬಾಗ್‌ ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಕೋರ್ಟ್‌ ಅವರಿಗೆ 14 ದಿನಗಳು, ನವೆಂಬರ್‌ 18ರ ವರೆಗೂ ನ್ಯಾಯಾಂಗ ಬಂಧನ ವಿಧಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲಿಬಾಗ್‌ ನ್ಯಾಯಾಲಯದಲ್ಲೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅರ್ನಬ್‌ ಪರ ವಕೀಲ ಆಬಾದ್ ಪೊಂಡಾ ತಿಳಿಸಿದ್ದಾರೆ.

‘ಬಂಧನ: ಮೇಲ್ನೋಟಕ್ಕೆ ಕಾನೂನು ಬಾಹಿರ’

‘ಅರ್ನಬ್‌ ಗೋಸ್ವಾಮಿ ಅವರ ಬಂಧನ ಮೇಲ್ನೋಟಕ್ಕೆ ಕಾನೂನು ಬಾಹಿರದ್ದಂತೆ ತೋರುತ್ತಿದೆ’ ಎಂದು ಅಲಿಬಾಗ್‌ ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಅರ್ನಬ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲು ನಿರಾಕರಿಸಿದೆ.

ಮೃತರು ಮತ್ತು ಆರೋಪಿಗಳ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಸುನೈನಾ ಪಿಂಗಲ್‌ ತಿಳಿಸಿದ್ದಾರೆ.

ಮುಂಬೈನಲ್ಲಿರುವ ಅರ್ನಬ್‌ ಅವರ ನಿವಾಸದಲ್ಲಿ ಕಳೆದ ಬುಧವಾರ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಲಿಬಾಗ್‌ ನ್ಯಾಯಾಲಯವು ಗೋಸ್ವಾಮಿ ಅವರನ್ನು ನವೆಂಬರ್‌ 18ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT