ಭಾನುವಾರ, ಆಗಸ್ಟ್ 1, 2021
26 °C

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಬ್ರಾಹ್ಮಣರನ್ನು ಸೆಳೆಯಲು ಬಿಎಸ್‌ಪಿ ಅಭಿಯಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಬಿಎಸ್‌ಪಿ ಈಗಿನಿಂದಲೇ ಚುನಾವಣಾ ತಂತ್ರಗಾರಿಕೆ ರೂಪಿಸಲು ಸಿದ್ಧತೆ ಆರಂಭಿಸಿದೆ.

‘ಬಿಜೆಪಿಯ ವಿರುದ್ದ ಬ್ರಾಹ್ಮಣ ಸಮುದಾಯವನ್ನು ಜಾಗೃತಗೊಳಿಸಲು ಅಯೋಧ್ಯೆಯಲ್ಲಿ ಮುಂದಿನವಾರದಿಂದ ಬಿಎಸ್ಪಿ ಅಭಿಯಾನ ಆರಂಭಿಸಲಿದೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ ಮಾತುಗಳನ್ನು ಕೇಳಿ ಬ್ರಾಹ್ಮಣ ಸಮುದಾಯವು ದಾರಿ ತಪ್ಪುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಅವರು ನಮ್ಮ ಪಕ್ಷಕ್ಕೆ ಮತ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ಚಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಜುಲೈ 23ರಂದು ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಜಾಗೃತ ಅಭಿಯಾನ ಆರಂಭವಾಗಲಿದೆ. ಬಿಎಸ್‌ಪಿ ಆಡಳಿತದಲ್ಲಿ ಬ್ರಾಹ್ಮಣರ ಹಿತಾಸಕ್ತಿಗಳು ಸುರಕ್ಷಿತವಾಗಿ ಉಳಿಯಲಿವೆ’ ಎಂದೂ ಅವರು ಭರವಸೆ ನೀಡಿದ್ದಾರೆ.

‘ರೈತರ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಕೇಂದ್ರ ಸರ್ಕಾರವನ್ನು ಹೊಣೆಯನ್ನಾಗಿಸಬೇಕು’ ಎಂದು ಮಾಯಾವತಿ ತಿಳಿಸಿದ್ದಾರೆ.

‘ನೂತನ ಮೂರು ಕೃಷಿಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಕೇಂದ್ರ ಸರ್ಕಾರವು ತೋರಿದ ವರ್ತನೆ ಅತ್ಯಂತ ದುಃಖಕರವಾದದ್ದು. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಂಸತ್ತಿನಲ್ಲಿ ಕೇಂದ್ರದ ವಿರುದ್ಧ ಒತ್ತಡ ಹೇರಬೇಕಾಗಿದೆ. ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ನಿರುದ್ಯೋಗ, ಹಣದುಬ್ಬರ ಹೆಚ್ಚಾಗಿದೆ.ಇದರಿಂದಾಗಿ ಜನರು ಕಷ್ಟ ಎದುರಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಇಂಧನ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಮತ್ತು ಕೋವಿಡ್ –19 ಲಸಿಕೆಗೆ ಸಂಬಂಧಿಸಿದ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ’ ಬಿಎಸ್‌ಪಿ ಸಂಸದೆಯೂ ಆಗಿರುವ ಮಾಯಾವತಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು