ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಅಸಮರ್ಥ: ಪಿ.ಚಿದಂಬರಂ

ಶ್ರೀಮಂತರಿಗಾಗಿ ಶ್ರೀಮಂತರು ಮಂಡಿಸಿದ ಬಜೆಟ್, ವಾಪಸ್ ಪಡೆಯಿರಿ –ಪಿ.ಚಿದಂಬರಂ
Last Updated 11 ಫೆಬ್ರುವರಿ 2021, 12:01 IST
ಅಕ್ಷರ ಗಾತ್ರ

ನವದೆಹಲಿ: ‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಶಾದಾಯಕ ಆಗಿದೆ. ಇದು, ಶ್ರೀಮಂತರಿಗಾಗಿ, ಶ್ರೀಮಂತರು ಮಂಡಿಸಿದ ಶ್ರೀಮಂತ ಬಜೆಟ್’ ಎಂದು ಗುರುವಾರ ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.

ರಾಜ್ಯಸಭೆಯಲ್ಲಿ ಬಜೆಟ್ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ‘ಇದು, ದೇಶದ ಶೇ 73ರಷ್ಟು ಆಸ್ತಿ ಮೇಲೆ ನಿಯಂತ್ರಣವುಳ್ಳ ಶೇ 1ರಷ್ಟು ಜನರಿಗಾಗಿ ಮಂಡಿಸಲಾದ ಬಜೆಟ್’ ಎಂದು ಟೀಕಿಸಿದರು.

2021–22ನೇ ಹಣಕಾಸು ವರ್ಷದ ಬಜೆಟ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ ಅವರು, ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಪೂರ್ಣವಾಗಿ ಅಸಮರ್ಥವಾಗಿದೆ ಎಂದೂ ತರಾಟೆಗೆ ತೆಗೆದುಕೊಂಡರು.

ಬಜೆಟ್‌ನ ಅಂಕಿ ಅಂಶಗಳನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡ ಅವರು, ‘ಒಟ್ಟು ಹೆಚ್ಚುವರಿ ಬಂಡವಾಳ ವೆಚ್ಚದ ಮೊತ್ತ ₹ 51 ಸಾವಿರ ಕೋಟಿ ಎಂದು ತೋರಿಸಲಾಗಿದೆ. ಹಾಗಿದ್ದರೆ, ಉಳಿದ ಹಣ ಎಲ್ಲಿಗೆ ಹೋಗುತ್ತದೆ’ ಎಂದು ಪ್ರಶ್ನಿಸಿದರು.

ಆರ್ಥಿಕತೆ ಕುಸಿಯುತ್ತಿದೆ ಎಂಬುದನ್ನು ಸರ್ಕಾರ ನಿರಾಕರಿಸುತ್ತಿದೆ. ಹಣಕಾಸು ಕ್ಷೇತ್ರದ ಸಮಸ್ಯೆ ಸ್ಥಿರವಾದುದಲ್ಲ, ಚಲನಶೀಲ ಎಂದೂ ಭಾವಿಸಿದೆ. ಕೊರೊನಾ ಸ್ಥಿತಿ ಆರಂಭಕ್ಕೂ ಮೊದಲ ಎರಡು ವರ್ಷದಲ್ಲೇ ಆರ್ಥಿಕತೆ ಕುಸಿತ ಆರಂಭವಾಗಿತ್ತು ಎಂದರು.

ದೇಶ ಮೂರು ವರ್ಷ ಅಸಮರ್ಥ ಆರ್ಥಿಕ ನಿರ್ವಹಣೆಯನ್ನು ಗಮನಿಸಿದೆ. ಅಸಮರ್ಥ ಪದಕ್ಕೆ ಹಣಕಾಸು ಸಚಿವೆ ಆಕ್ಷೇಪಿಸುತ್ತಾರೆ. ಆದರೆ, ನಾನು ಸಂಸತ್ತಿನಲ್ಲಿ ಇದಕ್ಕಿಂತಲೂ ತೀಕ್ಷ್ಣಪದ ಬಳಸಲಾರೆ. ಮೂರು ವರ್ಷದ ಅಸಮರ್ಥ ನಿರ್ವಹಣೆ ಎಂದರೆ 21–22ರ ಅಂತ್ಯದಲ್ಲಿ ನಾವು ಮತ್ತೆ 2017–18ನೇ ರಲ್ಲಿ ಇದ್ದ ಸ್ಥಿತಿಗೆ ಮರಳಿದ್ದೇವೆ ಎಂದು ದೂರಿದರು.

ಅಭಿವೃದ್ಧಿ ಸಾಲಿನಲ್ಲಿರುವ ತಮಿಳುನಾಡು ಸೇರಿದಂತೆ ದೇಶದ ಬಹುತೇಕ ಭಾಗದಲ್ಲಿ ಬೇಡಿಕೆ ಕಾಣಿಸುತ್ತಿಲ್ಲ. ಇನ್ನು ಉತ್ತರ ಪ್ರದೇಶ, ಬಿಹಾರ, ಒಡಿಶಾ ರಾಜ್ಯಗಳಲ್ಲಿನ ಸ್ಥಿತಿ ಒಬ್ಬರ ಊಹೆಗೆ ಬಿಟ್ಟಿದ್ದಾಗಿದೆ. ದೇಶವನ್ನು ಒಟ್ಟಾಗಿ ಕಡೆಗಣಿಸಿದಿರಿ. ಈ ಬಜೆಟ್ ಯಾರಿಗಾಗಿ? 2021ನೇ ಹಣಕಾಸು ವರ್ಷದ ಅಂತ್ಯಕ್ಕೆ ನಿರೀಕ್ಷಿತ ಅಭಿವೃದ್ಧಿ ದಾಖಲಾಗುವುದು ಅಸಾಧ್ಯ ಎಂದರು.

ಸರ್ಕಾರ ಜಿಡಿಪಿ ಪ್ರಗತಿಯು ಶೇ 14.8ರಷ್ಟಿರಲಿದೆ ಎಂದು ಅಂದಾಜಿಸಿದೆ. ಆದರೆ, ಶೇ 11ರಷ್ಟು ಪ್ರಗತಿ ಕಾಣಲಿದೆ ಎಂದೂ ಹೇಳುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣ ಕನಿಷ್ಠ ಶೇ 5 ರಿಂದ 6ರಷ್ಟಿರುತ್ತದೆ. ಕೇವಲ ಸಂಖ್ಯೆಗಳನ್ನು ದೊಡ್ಡದಾಗಿ ಹೇಳಬೇಡಿ. ಜಿಡಿಪಿ ಸ್ಥಿರಗೊಳ್ಳಲು ಕನಿಷ್ಠ ಮೂರು ವರ್ಷ ಬೇಕು ಎಂದು ಎಚ್ಚರಿಸಿದರು. ಬಜೆಟ್‌ನಲ್ಲಿ ಉಲ್ಲೇಖಿಸಿದ ಅನೇಕ ಅಂಕಿ ಅಂಶಗಳು ಶಂಕೆ ಮೂಡಿಸುತ್ತವೆ. ಈ ಬಜೆಟ್ ವಾಪಸು ಪಡೆಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT