ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯೇಂದ್ರ ಜೈನ್ ವಿರುದ್ಧದ ಆರೋಪ ರಾಜಕೀಯ ಪ್ರೇರಿತ: ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಅಗ್ರಹ
Last Updated 31 ಮೇ 2022, 13:32 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿರುವ ಕುರಿತು ಮಂಗಳವಾರ ಮೌನ ಮುರಿದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ‘ಜೈನ್ ಮೇಲಿನ ಆರೋಪವು ಸುಳ್ಳಾಗಿದ್ದು, ರಾಜಕೀಯ ಪ್ರೇರಿತವಾಗಿದೆ’ ಎಂದಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಜೈನ್ ಅವರ ವಿರುದ್ಧದ ಆರೋಪ ಪ್ರಕರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದೇನೆ. ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡಲಾಗಿದೆ. ಆಮ್ ಆದ್ಮಿ ಪಕ್ಷವು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ’ ಎಂದು ಪ್ರತಿಪಾದಿಸಿದರು.

‘ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ಜೈನ್ ಅವರು ಶುದ್ಧಹಸ್ತರಾಗಿ ವಾಪಸ್ ಬರುತ್ತಾರೆ. ಸುಳ್ಳು ಪ್ರಕರಣವು ದೀರ್ಘ ಕಾಲ ನಿಲ್ಲುವುದಿಲ್ಲ’ ಎಂದರು.

ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಜೈನ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಆಗ್ರಹಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ‘ಅವರು ಏನು ಬೇಕಾದರೂ ಹೇಳುತ್ತಾರೆ. ಅದರಲ್ಲಿ ಶೇಕಡ ಒಂದಾದರೂ ಅಂಶವಿದ್ದರೆ ಸಾಕು ನಾನು ಕ್ರಮ ತೆಗೆದುಕೊಳ್ಳುತ್ತಿದ್ದೆ’ ಎಂದು ಉತ್ತರಿಸಿದರು.

‘ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನವೇ ಜನವರಿಯಲ್ಲಿ ಜೈನ್ ಅವರನ್ನು ಇ.ಡಿ ಬಂಧಿಸಬಹುದು ಎಂದು ಕೆಲ ಮೂಲಗಳಿಂದ ತಿಳಿದುಕೊಂಡಿದ್ದೆ. ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ದೂರುಗಳ ಬಗ್ಗೆ ಗಮನ ಹರಿಸಿದ್ದು, ಯಾವುದೇ ತನಿಖಾ ಸಂಸ್ಥೆಗಳ ಕಾರ್ಯಾಚರಣೆಗೂ ಮುನ್ನವೇ ಅಂಥವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿದೆ. ಆದರೆ, ಕೇಂದ್ರದ ಕೈಗೊಂಬೆಗಳಾಗಿರುವ ತನಿಖಾ ಸಂಸ್ಥೆಗಳು ರಾಜಕೀಯ ಪ್ರೇರಿತವಾಗಿವೆ’ ಎಂದು ಅವರು ದೂರಿದ್ದಾರೆ.

‘ಪಂಜಾಬ್‌ನಲ್ಲಿ ಸಚಿವರೊಬ್ಬರ ಆಡಿಯೊವೊಂದನ್ನು ನೋಡಿದ್ದೀರಿ. ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಯಾವುದೇ ವಿರೋಧಪಕ್ಷವಾಗಲೀ, ತನಿಖಾ ಸಂಸ್ಥೆಗೂ ಅದರ ಬಗ್ಗೆ ತಿಳಿದಿರಲಿಲ್ಲ. ಬೇಕಿದ್ದರೆ ನಾವು ಅದನ್ನು ಹತ್ತಿಕ್ಕಬಹುದಿತ್ತು. ಆದರೆ, ಸಚಿವರ ವಿರುದ್ಧ ಕ್ರಮಕೈಗೊಂಡು ಬಂಧಿಸಿದ್ದೇವೆ. ನಾನು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಸಿಬಿಐಗೆ ಒಪ್ಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT