ಗುರುವಾರ , ಜೂನ್ 30, 2022
27 °C

ನಿತೀಶ್, ತೇಜಸ್ವಿ ಸ್ನೇಹವನ್ನು ಸಹಿಸದ ಬಿಜೆಪಿ: ಸಿಬಿಐ ದಾಳಿಗೆ ಆರ್‌ಜೆಡಿ ಆಕ್ರೋಶ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರ ಸ್ನೇಹವನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಲಾಲು ಪ್ರಸಾದ್‌ ಯಾದವ್‌ ಅವರಿಗೆ ಸೇರಿದ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಲು ಕುಮ್ಮಕ್ಕು ನೀಡಿದೆ ಎಂದು ಆರ್‌ಜೆಡಿ ಉಪಾಧ್ಯಕ್ಷ ಶಿವಾನಂದ ತಿವಾರಿ ಆರೋಪಿಸಿದ್ದಾರೆ.

ಆರ್‌ಜೆಡಿ ಮುಖಸ್ಥ ಲಾಲು ಪ್ರಸಾದ್‌ ಯಾದವ್‌ ಹಾಗೂ ಅವರ ಕುಟುಂಬದವರಿಗೆ ಸೇರಿದ 17 ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಈ ವಿಚಾರವಾಗಿ ತಿವಾರಿ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

'ನಿತೀಶ್ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ನಡುವಿನ ನಿಕಟ ಸಂಬಂಧವನ್ನು ಬಿಜೆಪಿಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಹಾರದಲ್ಲಿ ಜಾತಿವಾರು ಸಮೀಕ್ಷೆ ನಡೆಸುವ ವಿಚಾರವಾಗಿ ಈ ಇಬ್ಬರು ನಾಯಕರು ಒಂದಾಗಿದ್ದಾರೆ. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹೇಗಾದರೂ ಮಾಡಿ ಅದನ್ನು ತಡೆಯಲು ಪ್ರಯತ್ನಿಸುತ್ತಿವೆ. ರಾಜ್ಯದಲ್ಲಿ ಸಂಪನ್ಮೂಲ ಮತ್ತು ಸೌಲಭ್ಯಗಳಿಂದ ವಂಚಿತರಾಗುವ ದೊಡ್ಡ ಸಮುದಾಯದವನ್ನು ಸೃಷ್ಟಿಸುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಯೋಜನೆಯಾಗಿದೆ' ಎಂದು ಟೀಕಿಸಿದ್ದಾರೆ.

'ಜಾತಿವಾರು ಸಮೀಕ್ಷೆಯು ಬಿಹಾರದಲ್ಲಿರುವ ಪ್ರತಿ ಜಾತಿಯ ಜನರ ನೈಜ ಅಂಕಿ–ಅಂಶವನ್ನು ನೀಡಲಿದೆ. ಅದರಂತೆ ರಾಜ್ಯ ಸರ್ಕಾರವು ಯೋಜನೆಗಳನ್ನು ಸಿದ್ಧಪಡಿಸಿ, ಸೌಲಭ್ಯಗಳನ್ನು ವಿತರಿಸಬಹುದು. ಜಾತಿವಾರು ಸಮೀಕ್ಷೆ ಬಳಿಕ, ಸಂಪನ್ಮೂಲಗಳ ಹಂಚಿಕೆಗೆ ಬೇಡಿಕೆ ವ್ಯಕ್ತವಾಗಲಿದೆ. ಸಾರ್ವಜನಿಕರು ಅದಕ್ಕಾಗಿ ದನಿ ಎತ್ತಲಿದ್ದಾರೆ. ಆದರೆ, ದೇಶದಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ಸರ್ಕಾರಕ್ಕೆ ಎದುರಾಗಿ ನಿಲ್ಲುವಂತಹ ಸನ್ನಿವೇಶ ನಿರ್ಮಾಣವಾಗದಂತೆ ನೋಡಿಕೊಳ್ಳಲು ಬಿಜೆಪಿ ಬಯಸುತ್ತಿದೆ' ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ನಿತೀಶ್‌ ಕುಮಾರ್‌ ಬಿಹಾರ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ: ಆರ್‌ಜೆಡಿ ಪ್ರಶ್ನೆ

ನಿತೀಶ್‌ ಕುಮಾರ್‌ ಸರ್ಕಾರದಲ್ಲಿ ಸಚಿವರಾಗಿರುವ ಅಶೋಕ್‌ ಚೌಧರಿ, ಆರ್‌ಜೆಡಿ ನಾಯಕನ ಆರೋಪವನ್ನು ನಿರಾಕರಿಸಿದ್ದಾರೆ.

ಜಾತಿವಾರು ಸಮೀಕ್ಷೆಯು ನಿತೀಶ್ ಕುಮಾರ್‌ ಅವರ ಬಹುಕಾಲದ ಬೇಡಿಕೆಯಾಗಿದೆ. ಹಾಗಾಗಿ, ಲಾಲು ಪ್ರಸಾದ್‌ ಕುಟುಂಬದವರಿಗೆ ಸೇರಿದ ಸ್ಥಳಗಳಲ್ಲಿ ನಡೆದಿರುವ ಸಿಬಿಐ ದಾಳಿಗಳಿಗೂ ಜಾತಿವಾರು ಸಮೀಕ್ಷೆ ಮತ್ತು ನಿತೀಶ್‌ ಕುಮಾರ್‌, ತೇಜಸ್ವಿಯಾದವ್‌ ಸ್ನೇಹಕ್ಕೂ ಸಂಬಂಧವಿಲ್ಲ' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು