ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗನ್‌ ಚಿಕ್ಕ‍ಪ್ಪನ ಹತ್ಯೆ: ಕಿರುಕುಳಕ್ಕೆ ಹೆದರಿ ತನಿಖೆ ನಿಲ್ಲಿಸಿದ ಸಿಬಿಐ

ಸುಪ್ರೀಂ ಕೋರ್ಟ್‌ ದ್ವಿಸದಸ್ಯ ನ್ಯಾಯಪೀಠದ ಅಭಿಪ್ರಾಯ
Last Updated 30 ನವೆಂಬರ್ 2022, 15:40 IST
ಅಕ್ಷರ ಗಾತ್ರ

ನವದೆಹಲಿ: ‘ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ತಮ್ಮ ಹಾಗೂ ಹಾಲಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್‌.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಹೆಚ್ಚುವರಿ ತನಿಖೆ ಕೈಗೊಂಡಿದ್ದ ಸಿಬಿಐ, ಕಿರುಕುಳಕ್ಕೆ ಹೆದರಿ ತನಿಖೆ ಸ್ಥಗಿತಗೊಳಿಸಿತ್ತು’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಈ ಸಂಬಂಧವಿವೇಕಾನಂದ ರೆಡ್ಡಿ ಅವರ ಪುತ್ರಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಎಂ.ಎಂ.ಸುಂದರೇಶ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಕಡಪಾದಿಂದ ಹೈದರಾಬಾದ್‌ನ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

‘ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಸಿಬಿಐ, ಪ್ರಕರಣದ ತನಿಖೆ ಮುಂದುವರಿಸಿತ್ತು. ಸಿಬಿಐ ಅಧಿಕಾರಿಗಳ ವಿರುದ್ಧ ಆಂಧ್ರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿತ್ತು. ತನಿಖಾಧಿಕಾರಿಗಳ ವಿರುದ್ಧವೇ ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಕ್ಷುಲ್ಲಕ ದೂರುಗಳನ್ನು ದಾಖಲಿಸಲಾಗಿತ್ತು. ಹೀಗಾಗಿ ಸಿಬಿಐ ತನಿಖೆ ನಡೆಸುವುದನ್ನು ನಿಲ್ಲಿಸಿತ್ತು. ಈ‍ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಸಂಬಂಧ ಮೃತರ ಮಗಳು ಸುನೀತಾ ನಾರೆಡ್ಡಿ ಹಾಗೂ ಅವರ ತಾಯಿ ಆತಂಕ ವ್ಯಕ್ತಪಡಿಸಿರುವುದರಲ್ಲೂ ಅರ್ಥವಿದೆ’ ಎಂದು ನ್ಯಾಯಪೀಠ ಹೇಳಿದೆ.

ಬೆದರಿಕೆ ಇದ್ದಿದ್ದರಿಂದ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಶೇಖ್‌ ದಸ್ತಗಿರಿ ಹಾಗೂ ರಂಗಣ್ಣ ಎಂಬುವರಿಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದ ಕೆ.ಗಂಗಾಧರ ರೆಡ್ಡಿ ಅವರು ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಲು ಮುಂದೆ ಬಂದಿದ್ದರು. ಹೇಳಿಕೆ ದಾಖಲಿಸುವ ಮುನ್ನವೇ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು ಎಂಬುದನ್ನು ನ್ಯಾಯಪೀಠ ಗಮನಿಸಿತು.

‘ವಿವೇಕಾನಂದ ರೆಡ್ಡಿ ಹತ್ಯೆಯಲ್ಲಿ ಹಾಲಿ ಸಂಸದ ವೈ.ಎಸ್‌.ಅವಿನಾಶ್‌ ರೆಡ್ಡಿಯ ಕೈವಾಡ ಇರುವ ಕುರಿತು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಅವರು ಸಾಕ್ಷ್ಯ ನಾಶ ಮಾಡಲು ಮುಂದಾಗಿದ್ದರು. ವಿವೇಕಾನಂದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಅವರನ್ನು ಈವರೆಗೂ ಬಂಧಿಸಿಲ್ಲ. ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಅವಿನಾಶ್‌ ಹಾಗೂ ಅವರ ಆಪ್ತ ಡಿ.ಶಿವಶಂಕರ್‌ ರೆಡ್ಡಿ ಅವರನ್ನುಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳು ರಕ್ಷಣೆ ಮಾಡುತ್ತಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲ ಸಿದ್ದಾರ್ಥ್‌ ಲೂಥ್ರಾ ನ್ಯಾಯಪೀಠಕ್ಕೆ ತಿಳಿಸಿದರು.

ವಿವೇಕಾನಂದ ರೆಡ್ಡಿ ಅವರನ್ನು 2019ರ ಮಾರ್ಚ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT