ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು

12ನೇ ತರಗತಿ ಪರೀಕ್ಷೆ ಮುಂದೂಡಿಕೆ
Last Updated 14 ಏಪ್ರಿಲ್ 2021, 20:21 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಹತ್ತನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಿದೆ. 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಕೋವಿಡ್‌ ಪ್ರಕರಣಗಳು ತೀವ್ರವಾಗಿ ಹೆಚ್ಚಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

‘12ನೇ ತರಗತಿಯ ಪರೀಕ್ಷೆಯು ಮೇ 4ರಿಂದ ಜೂನ್‌ 14ರವರೆಗೆ ನಿಗದಿಯಾಗಿತ್ತು. ಈ ಪರೀಕ್ಷೆಗಳನ್ನು ನಂತರ ನಡೆಸಲಾಗುವುದು. ಜೂನ್‌ 1ರಂದು ಮಂಡಳಿಯು ಪರಿಸ್ಥಿತಿಯ ಅವಲೋಕನ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡರೆ, ಪರೀಕ್ಷೆ ಆರಂಭಕ್ಕಿಂತ 15 ದಿನ ಮೊದಲೇ ಮಾಹಿತಿ ನೀಡಲಾಗುವುದು’ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಂಡಳಿಯು ಸಿದ್ಧಪಡಿಸುವ ಮಾನದಂಡದ ಆಧಾರದಲ್ಲಿ 10ನೇ ತರಗತಿಯ ಫಲಿತಾಂಶ ಪ್ರಕಟಿಸಲಾಗುವುದು. ಸಿಕ್ಕ ಅಂಕಗಳ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರೀಕ್ಷೆ ನಡೆಸಲು ಸಾಧ್ಯವಾಗುವಂತಹ ಸ್ಥಿತಿ ನಿರ್ಮಾಣ ಆದ ಬಳಿಕ ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

‘ಕೋವಿಡ್‌ ಸಾಂಕ್ರಾಮಿಕವು ಹಲವು ರಾಜ್ಯಗಳಲ್ಲಿ ತೀವ್ರಗತಿಯಲ್ಲಿ ಏರುತ್ತಿದೆ. 11 ರಾಜ್ಯಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಸಿಬಿಎಸ್‌ಇ ರಾಜ್ಯ ಮಂಡಳಿಗಳ ಹಾಗೆ ಅಲ್ಲ. ದೇಶದ ಎಲ್ಲ ಭಾಗಗಳಲ್ಲಿಯೂ ಸಿಬಿಎಸ್‌ಇ ವಿದ್ಯಾರ್ಥಿಗಳು ಇದ್ದಾರೆ. ಹಾಗಾಗಿ, ದೇಶದಾದ್ಯಂತ ಏಕಕಾಲದಲ್ಲಿ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ’ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಟನಲ್‌ ಅಸೆಸ್ಮೆಂಟ್‌ (ಆಂತರಿಕ ಮೌಲ್ಯಮಾಪನ) ಆಧಾರದ ಮೇಲೆ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನೀಡಲಾಗುತ್ತದೆ. ವಿದ್ಯಾರ್ಥಿಗೆ ಅದು ತೃಪಿದಾಯಕವೆಂದು ತೋರದಿದ್ದರೆ ಪರೀಕ್ಷೆಗೆ ಹಾಜರಾಗಬಹುದು. ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಹೇಳಿದ್ದಾರೆ.

ಈ ಹಿಂದೆ ಮೇ 4ರಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು.

ಸಿಬಿಎಸ್‌ಇ ಅಧಿಸೂಚನೆ
ಸಿಬಿಎಸ್‌ಇ ಅಧಿಸೂಚನೆ

‘ಎಸ್ಸೆಸ್ಸೆಲ್ಸಿ: ಪರಿಸ್ಥಿತಿ ಅವಲೋಕಿಸಿ ನಿರ್ಧಾರ’

ಬೆಂಗಳೂರು: ‘ಸಿಬಿಎಸ್‌ಇ ರೀತಿಯಲ್ಲಿ ರಾಜ್ಯದಲ್ಲಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಪಡಿಸುವ ಅಥವಾ ದ್ವಿತೀಯ ಪಿ.ಯು ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

‘ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್‌ 21ರಿಂದ ಆರಂಭಿಸಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ, ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

‘ಪರೀಕ್ಷೆ ರದ್ದು ಸರಿಯಲ್ಲ’

ಬೆಂಗಳೂರು: ‘ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕರ್ನಾಟಕ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌) ಪ್ರತಿಕ್ರಿಯಿಸಿದೆ.

‘ಕೋವಿಡ್‌ ತೀವ್ರವಾಗಿದ್ದ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಕಳೆದ ವರ್ಷ, ಮೈಕ್ರೋ ಪ್ಲ್ಯಾನಿಂಗ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಬಾರಿ, ಆನ್‌ಲೈನ್‌ ಮೂಲಕವಾದರೂ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT