ಕೋವಿಡ್: ಸೌಕರ್ಯ ಪರಿಶೀಲನೆಗೆ ಸೂಚನೆ

ನವದೆಹಲಿ (ಪಿಟಿಐ): ಕೋವಿಡ್ ಸೋಂಕು ತೀವ್ರಗೊಂಡಲ್ಲಿ ಪರಿಣಾಮಕಾರಿಯಾಗಿ ಪರಿಸ್ಥಿತಿ ನಿರ್ವಹಿಸಲು ಬೇಕಿರುವ ಸೌಕರ್ಯಗಳನ್ನು ಗುರುತಿಸಿ ‘ತುರ್ತು ಕೋವಿಡ್ ಪ್ರತಿಕ್ರಿಯಾತ್ಮಕ ಪ್ಯಾಕೇಜ್’ನಡಿ ಪಟ್ಟಿ ಮಾಡಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ₹ 23,123 ಕೋಟಿಯ ‘ತುರ್ತು ಕೋವಿಡ್ ಪ್ರತಿಕ್ರಿಯಾತ್ಮಕ ಪ್ಯಾಕೇಜ್’ಗೆ (ಇಸಿಆರ್‌ಪಿ–ಫೇಸ್ 2) ಅನುಮೋದನೆ ನೀಡಿತ್ತು. ಪೂರಕವಾಗಿ ಆಗಿರುವ ಸಿದ್ಧತೆಗಳನ್ನು ಗುರುವಾರ ಆರೋಗ್ಯ ಸಚಿವಾಲಯವು ಪರಿಶೀಲಿಸಿತು.
2021–22ನೇ ಆರ್ಥಿಕ ವರ್ಷಕ್ಕಾಗಿ ನೂತನ ಪ್ಯಾಕೇಜ್, ಯೋಜನೆಗೆ ಜುಲೈ 8ರಂದು ಸಚಿವ ಸಂಪುಟ ಅನುಮೋದನೆ ನೀಡಿತ್ತು. ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯ ಪರಿಣಾಮಕಾರಿ ನಿರ್ವಹಣೆಗೆ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಇದರ ಉದ್ದೇಶ.
ಕೋವಿಡ್ ನಿರ್ವಹಣೆಗೆ ವಿವಿಧ ಆಯಾಮಗಳನ್ನು ಕುರಿತ ನೀತಿಗಳು, ಮಾರ್ಗದರ್ಶಿ ಸೂತ್ರಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಭೆಯಲ್ಲಿ ಮಾಹಿತಿ ಒದಗಿಸಲಾಯಿತು. ವೆಚ್ಚ ಅಂದಾಜುಗಳನ್ನು ಆದಷ್ಟು ಶೀಘ್ರವಾಗಿ ಕಳುಹಿಸಿಕೊಟ್ಟರೆ, ತ್ವರಿತಗತಿಯಲ್ಲಿ ಅನುಮೋದನೆ ಪಡೆಯಲು ಅನುಕೂಲವಾಗಿದೆ ಎಂದು ಆರೋಗ್ಯ ಸಚಿವಾಲಯವು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.
ಮಾದರಿ ಪರೀಕ್ಷೆ, ಸೋಂಕು ಗುರುತಿಸುವಿಕೆ, ಚಿಕಿತ್ಸೆ, ಐಸೋಲೆಟ್ ಕಾರ್ಯತಂತ್ರ, ಪರೀಕ್ಷಾ ಸಾಮರ್ಥ್ಯ ವೃದ್ಧಿಗೆ ಅಗತ್ಯವಿರುವ ಸೌಲಭ್ಯ, ಹೆಚ್ಚುವರಿ ಹಾಸಿಗೆಗಳ ಅಗತ್ಯ, ಜಿಲ್ಲಾ ಮಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ, ಪ್ರಮುಖ ಔಷಧಿಗಳು, ಪರೀಕ್ಷಾ ಕಿಟ್‌ಗಳು, ಪಿಪಿಇಗಳು, ಆಮ್ಲಜನಕ ಪೂರೈಕೆ ವೃದ್ಧಿಗೆ ಕ್ರಮ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಕುರಿತು ಪರಿಶೀಲನಾ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.
ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವಂತೆ ಎಂಬಿಬಿಎಸ್ ವಿದ್ಯಾರ್ಥಿಗಳು, ಪದವಿ ಇಂಟರ್ನ್ಸ್‌ಗಳು, ಸ್ಥಾನಿಕ ವೈದ್ಯರ ಸೇವೆಯನ್ನು ಅಗತ್ಯಾನುಸಾರ ಬಳಸಿಕೊಳ್ಳಬಹುದು ಎಂದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ಮಾಡಲಾಗಿದೆ. ಅಂತೆಯೇ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಗಳನ್ನು ಪೂರ್ಣಪ್ರಮಾಣದ ಕೋವಿಡ್ ಸೇವೆಗೆ ಬಳಸಲು ಸೂಚಿಸಲಾಗಿದೆ.
ಸ್ಥಳೀಯ ಅಗತ್ಯವನ್ನು ಆಧರಿಸಿ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಬಹುದು. ಆದರೆ, ಅಗತ್ಯವಿರುವ ಸೌಲಭ್ಯ ಮತ್ತು ವೆಚ್ಚದ ಅಂದಾಜನ್ನು ವಿಶ್ಲೇಷಿಸಿ ನೀಡುವುದು ಅಗತ್ಯವಾಗಿದೆ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.