ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮುನ್ನೆಚ್ಚರಿಕೆಗೆ ಕೇಂದ್ರದ ಸೂಚನೆ

Last Updated 18 ಮಾರ್ಚ್ 2022, 20:23 IST
ಅಕ್ಷರ ಗಾತ್ರ

ನವದೆಹಲಿ:ಆಗ್ನೇಯ ಏಷ್ಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು, ಶೀತಜ್ವರ ಮಾದರಿಯ ಆರೋಗ್ಯ ಸಮಸ್ಯೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆಗಳ (ಸಾರಿ) ಕುರಿತು ಮತ್ತೆ ಮೇಲ್ವಿಚಾರಣೆ ಆರಂಭಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಐಎಲ್‌ಐ’ ಮತ್ತು ‘ಸಾರಿ’ ಇರುವವರಿಗೆ ಕೋವಿಡ್ ಪರೀಕ್ಷೆ ಸಹಿತ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಕೋವಿಡ್‌ ನಿರ್ವಹಣೆಗೆ ಇದು ಪ್ರಮುಖ ಆಧಾರ ಎಂದುಕೇಂದ್ರ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದ ಕಾರಣ ಇತ್ತೀಚೆಗೆ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿತ್ತು.

‘ಐಎಲ್‌ಐ’ ಮತ್ತು ‘ಸಾರಿ’ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಗಂಟಲ ದ್ರವದ ಮಾದರಿಯನ್ನು ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆಗಾಗಿ (ಜೀನೋಮ್‌ ಸೀಕ್ವೆನ್ಸಿಂಗ್‌) ಕಳುಹಿಸುವಂತೆ ಸರ್ಕಾರ ಸೂಚಿಸಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಹೊಸಕೋವಿಡ್ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸಾಕಷ್ಟು ಸಂಖ್ಯೆಯಲ್ಲಿ ಮಾದರಿಗಳನ್ನುವೈರಾಣು ಸಂರಚನಾ ವಿಶ್ಲೇಷಣೆ ಸಂಸ್ಥೆಯಾದ ಐಎನ್‌ಎಸ್‌ಎಸಿಒಜಿ ಜಾಲಕ್ಕೆ ಸಲ್ಲಿಸುವಂತೆಸೂಚಿಸಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಪುನರಾರಂಭವಾಗಿರುವ ಈ ಸಂದರ್ಭದಲ್ಲಿ ಇನ್ನಷ್ಟು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು, ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಹೊಸ ಪ್ರಕರಣಗಳು ಪತ್ತೆಯಾದರೆ ಕೂಡಲೇ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಪರೀಕ್ಷೆಗೆ ಒಳಪಡಿಸಿ ಕಣ್ಗಾವಲು ಇಡಬೇಕು. ಈ ಮೂಲಕ ಸೋಂಕು ಹರಡುವಿಕೆ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೋವಿಡ್‌ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಜನ ಜಾಗೃತಿ ಮೂಡಿಸುವುದರ ಜತೆಗೆ, ನಿಯಮಿತವಾಗಿ ಕೈ ಶುಚಿಗೊಳಿಸುವ ಮತ್ತು ವೈಯಕ್ತಿಕ ಅಂತರ ಸೇರಿದಂತೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಜನರಲ್ಲಿ ಅರಿವು ಮೂಡಿಸಬೇಕು.ಪರೀಕ್ಷೆ, ನಿಗಾ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ನಿಯಮಗಳ ಪಾಲನೆಯ ಸೂತ್ರಗಳನ್ನು ಸಮರ್ಪಕವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

‘ಕೋವಿಡ್ ಮಧ್ಯಭಾಗದಲ್ಲಿದ್ದೇವೆ’
ಜಿನೀವಾ (ರಾಯಿಟರ್ಸ್‌): ‘
ಕೋವಿಡ್–19 ಪರಿಸ್ಥಿತಿ ಇನ್ನೂ ಅಂತ್ಯಗೊಂಡಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದೆ.

ಕೋವಿಡ್ ಕುರಿತ ಹೊಸ ಅಂಕಿ ಅಂಶಗಳನ್ನು ಆಧರಿಸಿ ಡಬ್ಲ್ಯುಎಚ್‌ಒ ವಕ್ತಾರರಾದ ಮಾರ್ಗರೆಟ್ ಹ್ಯಾರಿಸ್‌ ಅವರು ಈ ವಿಷಯ ತಿಳಿಸಿದ್ದಾರೆ.

‘ನಾವು ಖಂಡಿತವಾಗಿಯೂ ಸದ್ಯ ಕೋವಿಡ್‌ ಪರಿಸ್ಥಿತಿಯ ಮಧ್ಯದಲ್ಲಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT