ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಗೆ ರೈತರ ಷರತ್ತು; ಗೃಹ ಸಚಿವರ ಜತೆ ಚರ್ಚೆ

Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ‘ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವಿಧಾನ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಖಾತರಿಗೊಳಿಸುವುದು ಹಾಗೂ ಈ ಹಿಂದೆ ಪ್ರಸ್ತಾಪಿಸಲಾದ ಎರಡು ವಿಚಾರಗಳು ಕಡ್ಡಾಯವಾಗಿ ಮಾತುಕತೆಯ ಭಾಗವಾಗಿರಬೇಕು’ ಎಂದು 40 ರೈತ ಸಂಘಟನೆಗಳನ್ನು ಪ್ರತಿನಿಧಿಸುವ ‘ಸಂಯುಕ್ತ ಕಿಸಾನ್‌ ಮೋರ್ಚಾ’ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ.

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಬುಧವಾರ ಮಾತುಕತೆಗೆ ಬರುವಂತೆ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳಿಗೆ ಆಹ್ವಾನ ನೀಡಿತ್ತು. ಅದನ್ನು ಒಪ್ಪಿಕೊಂಡಿರುವ ಸಂಘಟನೆಗಳು ಸರ್ಕಾರಕ್ಕೆ ಮಂಗಳವಾರ ಬರೆದ ಪತ್ರದಲ್ಲಿ ಈ ಷರತ್ತುಗಳನ್ನು ಮುಂದಿಟ್ಟಿವೆ.

ಮಾತುಕತೆಯ ವೇಳೆ ಪ್ರಸ್ತಾಪವಾಗಬೇಕಿರುವ ವಿಷಯಗಳಿಗೆ ಸಂಬಂಧಿಸಿದಂತೆ ಡಿ.26ರಂದೇ ಸಂಘಟನೆಯು ಸರ್ಕಾರಕ್ಕೆ ಪತ್ರವೊಂದನ್ನು ಕಳುಹಿಸಿತ್ತು. ಸರ್ಕಾರದ ಜತೆಗೆ ಮಾತುಕತೆ ನಿಗದಿಯಾಗಿರುವುದರಿಂದ ಬುಧವಾರ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಟ್ರ್ಯಾಕ್ಟರ್‌ ರ್‍ಯಾಲಿಯನ್ನು ಗುರುವಾರಕ್ಕೆ ಮುಂದೂಡಿರುವುದಾಗಿ ಸಂಘಟನೆಗಳು ತಿಳಿಸಿವೆ.

ದಾಂದಲೆಗೆ ಬೆಂಬಲ ಇಲ್ಲ: ‘ಮೊಬೈಲ್‌ ಟವರ್‌ಗಳು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ನಾವು ವಿರೋಧಿಸುತ್ತೇವೆ’ ಎಂದು ಪಂಜಾಬ್‌ನ ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

‘ನಾವು ಹೊಸ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದೇವೆ. ಇಂಥ ದಾಂದಲೆಗಳನ್ನು ಬೆಂಬಲಿಸುವುದಿಲ್ಲ. ಇಂಥ ಕೃತ್ಯಗಳನ್ನು ನಡೆಸದಂತೆ ಜನರಲ್ಲಿ ಮನವಿ ಮಾಡಿದ್ದೇವೆ’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ನ ಕಾರ್ಯದರ್ಶಿ ಸುಖದೇವ್‌ ಸಿಂಗ್‌ ಹೇಳಿದ್ದಾರೆ.

ರೈತ ಪ್ರತಿಭಟನೆ ಆರಂಭವಾದ ನಂತರ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಮೊಬೈಲ್‌ ಟವರ್‌ಗಳಿಗೆ ಹಾನಿ ಉಂಟುಮಾಡಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೋಮವಾರ ಹೇಳಿದ್ದರು.

ಗೃಹ ಸಚಿವರ ಜತೆ ಚರ್ಚೆ: ರೈತ ಪ್ರತಿನಿಧಿಗಳ ಜತೆಗೆ ನಡೆಯಲಿರುವ ಮಾತುಕತೆಯ ಹಿನ್ನೆಲೆಯಲ್ಲಿ ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಹಾಗೂ ರೈಲ್ವೆ ಖಾತೆಯ ಸಚಿವ ಪೀಯೂಷ್‌ ಗೋಯಲ್‌ ಅವರು ಗೃಹಸಚಿವ ಅಮಿತ್‌ ಶಾ ಅವರನ್ನು ಮಂಗಳವಾರ ಭೇಟಿಮಾಡಿ ಮಾತುಕತೆ ನಡೆಸಿದರು.

ಚರ್ಚೆಯ ಸಂದರ್ಭದಲ್ಲಿ ಬುಧವಾರದ ಮಾತುಕತೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವು ಏನಿರಬೇಕು ಎಂಬ ವಿಚಾರಕ್ಕೆ ಅಂತಿಮ ರೂಪ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT