ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೂ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ ಮರುಪಾವತಿಗೆ ಕೇಂದ್ರ ಅಸ್ತು

Last Updated 6 ಸೆಪ್ಟೆಂಬರ್ 2020, 15:32 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19ನಿಂದಾಗಿ ಮಾರ್ಚ್ 25 ರಿಂದ ಜಾರಿಗೆ ಬಂದ ಲಾಕ್‌ಡೌನ್‌ಗೆ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ಗಳ ಹಣ ಮರುಪಾವತಿ ಮಾಡಲು ಕೋರಿದ್ದ ವಿಮಾನ ಪ್ರಯಾಣಿಕರಿಗೆ ಆಕರ್ಷಕ ಯೋಜನೆಯೊಂದು ಕಾಯುತ್ತಿದೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಎಲ್ಲಾ ಪ್ರಯಾಣಿಕರಿಗೆ 15 ದಿನಗಳೊಳಗೆ ಮಾರ್ಚ್ 25ರ ಮೊದಲು ಕಾಯ್ದಿರಿಸಿದ ಟಿಕೆಟ್‌ಗಳ ಸಂಪೂರ್ಣ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ಪ್ರಸ್ತಾಪಿಸಿದೆ.

ಕೇಂದ್ರವು ರೂಪಿಸಿರುವ ಯೋಜನೆ ಪ್ರಕಾರ, ಯಾವುದೇ ವಿಮಾನಯಾನ ಸಂಸ್ಥೆಯು ತಕ್ಷಣ ಮರುಪಾವತಿಸುವ ಆರ್ಥಿಕ ಸ್ಥಿತಿಯಲ್ಲಿಲ್ಲದಿದ್ದರೆ, 2020ರ ಮಾರ್ಚ್ 31ಕ್ಕೂ ಮುನ್ನ ಪ್ರಯಾಣಿಕರು ಅದೇ ಮಾರ್ಗದಲ್ಲಿ ಪ್ರಯಾಣಿಸುವ ಅಥವಾ ಬೇರೆ ಯಾವುದೇ ಮಾರ್ಗದಲ್ಲಿ ಪ್ರಯಾಣಿಸುವಾಗ ನೆರವಾಗುವಂತೆ ಮರುಪಾವತಿ ಮೊತ್ತವನ್ನು ಕ್ರೆಡಿಟ್ ಶೆಲ್‌ನಲ್ಲಿ ಇಡಬೇಕಾಗುತ್ತದೆ. ಈ ಆಯ್ಕೆಯು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು 15 ದಿನಗಳಲ್ಲಿಯೇ ಮರುಪಾವತಿ ಮಾಡಬೇಕು ಎಂದು ತಿಳಿಸಿದೆ.

ಒಂದು ವೇಳೆ ಪ್ರಯಾಣಿಕರು ಪ್ರಯಾಣಿಸಲು ಬಯಸದಿದ್ದರೆ, ಕ್ರೆಡಿಟ್ ಶೆಲ್ ಅನ್ನು ಯಾವುದೇ ವ್ಯಕ್ತಿಗಾದರೂ ವರ್ಗಾಯಿಸಬಹುದು. ಮರುಪಾವತಿ ಮೊತ್ತವನ್ನು ಬಳಸದೆ ಇದ್ದಲ್ಲಿ, ಈ ಮೊತ್ತದ ಮೇಲೆ ಪ್ರತಿ ತಿಂಗಳು ಬಡ್ಡಿ ಸೇರಿಕೊಳ್ಳುತ್ತದೆ ಮತ್ತು 2021, ಮಾರ್ಚ್ 31ರ ನಂತರ ಅದನ್ನು ಪೂರ್ಣವಾಗಿ ಮರುಪಾವತಿಸಲಾಗುತ್ತದೆ.

ಏಪ್ರಿಲ್ 16ರ ಡಿಜಿಸಿಎ ಅಧಿಸೂಚನೆಯಲ್ಲಿ, ಲಾಕ್‌ಡೌನ್ ಸಮಯದಲ್ಲಿ (ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ) ಬುಕ್ ಮಾಡಲಾದ ಟಿಕೆಟ್‌ಗಳ ಸಂಪೂರ್ಣ ಮರುಪಾವತಿಯನ್ನು ನೀಡುತ್ತದೆ ಎಂದು ಹೇಳಿತ್ತು. ಈ ದಿನಾಂಕಕ್ಕೂ ಮೊದಲು ಟಿಕೆಟ್ ಕಾಯ್ದಿರಿಸಿದ್ದವರು ತಮ್ಮ ಟಿಕೆಟ್ ಮೊತ್ತವನ್ನು ಮರುಪಾವತಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಜೂನ್ 12 ರಂದು, ವಿಮಾನಯಾನ ನಿರ್ವಾಹಕರು ಮತ್ತು ಟ್ರಾವೆಲ್ ಏಜೆಂಟರನ್ನು ಸಂಪರ್ಕಿಸಿದ ಬಳಿಕ ಪರಿಹಾರ ಕಂಡುಕೊಳ್ಳುವಂತೆ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಸೆಪ್ಟೆಂಬರ್ 9 ರಂದು ಅರ್ಜಿಗಳನ್ನು ತೆಗೆದುಕೊಳ್ಳುವಾಗ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಕೇಂದ್ರದ ಅಫಿಡವಿಟ್ ಅನ್ನು ಪರಿಗಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT