ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ್ ನಟನೆಯ ರಸ್ತೆ ಸುರಕ್ಷತೆ ಜಾಹೀರಾತಿನಲ್ಲಿ ವರದಕ್ಷಿಣೆಗೆ ಬೆಂಬಲ: ಸೇನಾ ಕಿಡಿ

Last Updated 13 ಸೆಪ್ಟೆಂಬರ್ 2022, 3:23 IST
ಅಕ್ಷರ ಗಾತ್ರ

ಮುಂಬೈ: ರಸ್ತೆ ಸುರಕ್ಷತೆ ಕುರಿತು ಚಿತ್ರಿಸಲಾಗಿರುವ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ವರದಕ್ಷಿಣೆಗೆ ಉತ್ತೇಜನ ನೀಡಲಾಗಿದೆ ಎಂದು ಶಿವಸೇನಾ ಮತ್ತು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಿಡಿಕಾರಿದೆ.

ಒಂದು ನಿಮಿಷದ ಜಾಹೀರಾತು ವಿಡಿಯೊದಲ್ಲಿಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುಮಗಳನ್ನು ಬೀಳ್ಕೊಡುವ ಸನ್ನಿವೇಶವನ್ನಿಟ್ಟುಕೊಂಡು ಜಾಹೀರಾತು ಸೃಷ್ಟಿಸಲಾಗಿದೆ.

ಮದುಮಗಳು ಕಣ್ಣೀರು ಸುರಿಸುತ್ತಾ ಗಂಡನೊಂದಿಗೆ ಕಾರಿನಲ್ಲಿ ಕುಳಿತಿರುತ್ತಾಳೆ.ತಂದೆ ಅವರಿಬ್ಬರಿಗೂ ವಿದಾಯ ಹೇಳುತ್ತಾ ಭಾವುಕರಾಗಿರುತ್ತಾರೆ. ಈ ವೇಳೆ ಮಧ್ಯಪ್ರವೇಶಿಸುವ ಅಕ್ಷಯ್‌, ಅಪಘಾತವಾದರೆ ಆಗುವ ಅನಾಹುತದ ಬಗ್ಗೆ ತಿಳಿಸಿ, ಎರಡು ಏರ್‌ ಬ್ಯಾಗ್‌ ಬದಲು ಆರು ಏರ್‌ ಬ್ಯಾಗ್‌ಗಳಿರುವ ಕಾರಿನಲ್ಲಿ ಮದುಮಕ್ಕಳನ್ನು ಕಳುಹಿಸಿಕೊಡಿ ಎಂದು ಸಲಹೆ ನೀಡುತ್ತಾರೆ.ಅದಕ್ಕೆ ತಂದೆ ಒಪ್ಪಿಕೊಳ್ಳುತ್ತಾರೆ.

ನಂತರ ಮದುಮಕ್ಕಳು 6 ಏರ್‌ ಬ್ಯಾಗ್‌ ಇರುವ ಕಾರಿನಲ್ಲಿ ಸಾಗುತ್ತಾರೆ. ಅವರಿಗೆ ಎಲ್ಲರೂ ಸಂತಸದಿಂದ ಬೀಳ್ಕೊಡುವುದುಮುಂದಿನ ದೃಶ್ಯದಲ್ಲಿದೆ. ಕೊನೆಯಲ್ಲಿಅಕ್ಷಯ್‌ ರಸ್ತೆ ಸುರಕ್ಷತೆಯ ಸಂದೇಶ ಸಾರುತ್ತಾರೆ.

ಈ ವಿಡಿಯೊವನ್ನು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೂ ಹಂಚಿಕೊಂಡಿದ್ದು, 6 ಏರ್‌ ಬ್ಯಾಗ್ ಇರುವ ವಾಹನದಲ್ಲಿ ಸಂಚರಿಸುವ ಮೂಲಕ ಸುರಕ್ಷಿತ ಪ್ರಯಾಣ ಮಾಡಿ ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕ ಜಾಗೃತಿಯ ಈ ವಿಡಿಯೊಗೆ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಹಾಗೂ ಟಿಎಂಸಿಯ ಸಾಕೇತ್‌ ಗೋಖಲೆಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಇದು ಸಮಸ್ಯಾತ್ಮಕ ಜಾಹೀರಾತು. ಸರ್ಕಾರ ಕಾರಿನ ಪ್ರಯಾಣದ ಸುರಕ್ಷತೆ ಉದ್ದೇಶದಿಂದ ಹಣ ವ್ಯಯಿಸುತ್ತಿದೆಯೇ? ಅಥವಾ ಈ ಜಾಹೀರಾತು ಮೂಲಕ ಕ್ರೂರ ಮತ್ತು ಅಪರಾಧ ಚಟುವಟಿಕೆಯಾದ ವರದಕ್ಷಿಣೆಗೆ ಉತ್ತೇಜನ ನೀಡುತ್ತಿದೆಯೇ?' ಎಂದು ಚತುರ್ವೇದಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಟಿಎಂಸಿ ನಾಯಕ ಸಾಕೇತ್‌,ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಇತ್ತೀಚೆಗೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದನ್ನು ಉಲ್ಲೇಖಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅವರುತಮ್ಮ ಟ್ವೀಟ್‌ನಲ್ಲಿ '1. ಭಾರತ ಸರ್ಕಾರ ಅಧಿಕೃತವಾಗಿ ವರದಕ್ಷಿಣೆಗೆ ಉತ್ತೇಜನ ನೀಡುತ್ತಿರುವುದು ಅಸಹ್ಯಕರವಾಗಿದೆ. ಇದಕ್ಕಿಂತ ಅಚ್ಚರಿ ಇನ್ನೇನಿದೆ?
2. ಸೈರಸ್‌ ಮಿಸ್ತ್ರಿ ಅವರು ಮೃತಪಟ್ಟದ್ದು ದೋಷಪೂರಿತ ರಸ್ತೆ ವಿನ್ಯಾಸದಿಂದಾಗಿ. ದುರಂತ ಸಂಭವಿಸಿದ ಸ್ಥಳ ಅಪಘಾತ ವಲಯವಾಗಿತ್ತು.
ರಸ್ತೆಗಳನ್ನು ಸರಿಪಡಿಸುವ ಬದಲು 6 ಏರ್ ಬ್ಯಾಗ್‌ಗಳನ್ನೊಳಗೊಂಡ ದುಬಾರಿ ಕಾರುಗಳನ್ನು ಉತ್ತೇಜಿಸುವುದು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಅದ್ಭುತ ಮಾರ್ಗ' ಎಂದು ಕಿಡಿಕಾರಿದ್ದಾರೆ.

ಜಾಹೀರಾತಿಗೆ ನೆಟ್ಟಿಗರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಹಾಗೂ ರಸ್ತೆಗಳನ್ನು ಸರಿಪಡಿಸಿ ಎಂದು ಚಾಟಿ ಬೀಸಿದ್ದಾರೆ.

ಈ ಬಗ್ಗೆ ಸಚಿವರು ಅಥವಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಕ್ಷಯ್‌ ಕುಮಾರ್‌ ಅವರು ಇತ್ತೀಚೆಗೆ ಪಾನ್‌ ಮಸಾಲ ಜಾಹೀರಾತೊಂದರಲ್ಲಿ ಕಾಣಿಸಿಕೊಂಡದ್ದೂ ವಿವಾದವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾದ ಬಳಿಕ ಅವರು ಅಭಿಮಾನಿಗಳ ಕ್ಷಮೆ ಕೋರಿದ್ದರು. ಅಲ್ಲದೆ, ಆ ಜಾಹೀರಾತಿನ ಒ‍ಪ್ಪಂದ ಕಡಿದುಕೊಳ್ಳುವುದಾಗಿಯೂ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT