ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಆರೋಗ್ಯ: ಚಾರಿಟಬಲ್ ಔಷಧ ತುಟ್ಟಿ -ಎನ್‌ಎಸ್‌ಒ ವರದಿ

Last Updated 19 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ನಡೆಸುವ ಆಸ್ಪತ್ರೆಗಳು ಔಷಧಗಳಿಗೆ ದುಬಾರಿ ದರ ವಿಧಿಸುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ವಿಧಿಸುವ ಶುಲ್ಕಕ್ಕಿಂತ ದುಬಾರಿ ಶುಲ್ಕವನ್ನು ಚಾರಿಟಬಲ್‌ ಆಸ್ಪತ್ರೆಗಳಲ್ಲಿ ತೆರಬೇಕಿದೆ.ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಎನ್‌ಎಸ್‌ಒ) ಸಿದ್ಧಪಡಿಸಿರುವ ‘ಭಾರತದಲ್ಲಿ ಆರೋಗ್ಯ’ ವರದಿಯಲ್ಲಿ ಈ ಮಾಹಿತಿ ಇದೆ.

ದೇಶದ ಎಲ್ಲಾ ರಾಜ್ಯಗಳಲ್ಲಿ2017ರ ಜುಲೈನಿಂದ 2018ರ ಜೂನ್‌ವರೆಗೆ ಸಮೀಕ್ಷೆ ನಡೆಸಿ, ಎನ್‌ಎಸ್‌ಒ ಈ ವರದಿ ಯನ್ನು ಸಿದ್ಧಪಡಿಸಿದೆ.ಒಬ್ಬ ವ್ಯಕ್ತಿ ಯಾವುದೇ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯಲು ತಗಲುವ ಸರಾಸರಿ ವೆಚ್ಚದ ಬಗ್ಗೆ ಸಂಗ್ರಹಿಸಿರುವ ಮಾಹಿತಿಯಲ್ಲಿ ಈ ದತ್ತಾಂಶ ಇದೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಚಾರಿಟಬಲ್ ಆಸ್ಪತ್ರೆಗಳು ಔಷಧಕ್ಕೆ ವಿಧಿಸುವ ಸರಾಸರಿ ಶುಲ್ಕ ₹5,561. ರಾಜ್ಯದ ಚಾರಿಟಬಲ್ ಆಸ್ಪತ್ರೆಗಳು ಔಷಧಕ್ಕೆ ₹ 6,886ರಷ್ಟು ಸರಾಸರಿ ಶುಲ್ಕ ವಿಧಿಸುತ್ತಿವೆ. ಮಿಜೋರಾಂ (₹10,672), ಉತ್ತರ ಪ್ರದೇಶ (₹10,822) ಮತ್ತು ಮಹಾರಾಷ್ಟ್ರದ (₹7,581) ಚಾರಿಟಬಲ್ ಆಸ್ಪತ್ರೆಗಳಲ್ಲಿ ಮಾತ್ರ ಔಷಧಕ್ಕೆ, ಕರ್ನಾಟಕದ ಚಾರಿಟಬಲ್ ಆಸ್ಪತ್ರೆಗಳಿಗಿಂತ ಹೆಚ್ಚು ಹಣ ಭರಿಸ ಬೇಕಿದೆ. ಬೇರೆ ಎಲ್ಲಾ ರಾಜ್ಯಗಳಲ್ಲಿ ಕಡಿಮೆ ವೆಚ್ಚದಲ್ಲಿ ಔಷಧ ಒದಗಿಸುತ್ತಿವೆ.

ರಾಜ್ಯದಲ್ಲಿ ಒಳರೋಗಿ ಚಿಕಿತ್ಸೆ ವೆಚ್ಚ

ಆಸ್ಪತ್ರೆ ಶುಲ್ಕ

* ಆಸ್ಪತ್ರೆಗೆ ಸಂಬಂಧಿಸಿದ ನಿರ್ವಹಣಾ ವೆಚ್ಚ, ಸಹಾಯಕರ ವೆಚ್ಚ ಮತ್ತಿತರ ವೆಚ್ಚವನ್ನು ಈ ಪ್ಯಾಕೇಜ್‌ ಒಳಗೊಂಡಿರುತ್ತದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವೆಚ್ಚವು ₹ 100ಕ್ಕಿಂತ ಕಡಿಮೆ ಇದೆ. ಆದರೆ ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಈ ವೆಚ್ಚ ನಾಲ್ಕು ಪಟ್ಟು ಹೆಚ್ಚು

* ಗ್ರಾಮೀಣ ಪ್ರದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಈ ಶುಲ್ಕ ಕಡಿಮೆ ಇದ್ದು, ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಈ ಶುಲ್ಕ ವಿಪ‍ರೀತ ಎನ್ನುವಷ್ಟು ದುಬಾರಿ. ರಾಷ್ಟ್ರೀಯ ಸರಾಸರಿಗಿಂತ (₹ 6,631), ರಾಜ್ಯದ ನಗರಗಳ ಖಾಸಗಿ ಆಸ್ಪತ್ರೆಗಳಲ್ಲೇ ಈ ಶುಲ್ಕ ಹೆಚ್ಚು

* ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಚಾರಿಟಬಲ್ ಆಸ್ಪತ್ರೆಗಳು ಈ ಸೇವೆಯನ್ನು ಕಡಿಮೆ ಶುಲ್ಕದಲ್ಲಿ ನೀಡುತ್ತಿವೆ

ವೈದ್ಯರ ಶುಲ್ಕ

* ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲೂ ವೈದ್ಯರ ಶುಲ್ಕವನ್ನು ಭರಿಸಬೇಕಿದೆ. ಖಾಸಗಿ ಮತ್ತು ಚಾರಿಟಬಲ್ ಆಸ್ಪತ್ರೆಗಳು ವಿಧಿಸುವ ವೈದ್ಯರ ಶುಲ್ಕದ ಹೋಲಿಕೆಯಲ್ಲಿ, ಇದು ಅತ್ಯಂತ ಕಡಿಮೆ

* ಗ್ರಾಮೀಣ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವ ವೈದ್ಯರ ಶುಲ್ಕಕ್ಕಿಂತ, ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವ ವೈದ್ಯರ ಶುಲ್ಕ ಹೆಚ್ಚು

*ಗ್ರಾಮೀಣ ಪ್ರದೇಶದ ಚಾರಿಟಬಲ್ ಆಸ್ಪತ್ರೆಗಳು ಮತ್ತು ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವ ವೈದ್ಯರ ಶುಲ್ಕದಲ್ಲಿ ಭಾರಿ ವ್ಯತ್ಯಾಸ ಇಲ್ಲ

ಚಾರಿಟಬಲ್ ಆಸ್ಪತ್ರೆಗಳಲ್ಲಿ ಔಷಧ ವೆಚ್ಚ ಹೆಚ್ಚು

* ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ತಗಲುವುದಕ್ಕಿಂತ, ಚಾರಿಟಬಲ್ ಆಸ್ಪತ್ರೆಗಳಲ್ಲಿ ಔಷಧಕ್ಕೆ ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ

* ಗ್ರಾಮೀಣ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವ ಔಷಧದ ಸರಾಸರಿ ವೆಚ್ಚಕ್ಕಿಂತ, ಚಾರಿಟಬಲ್ ಆಸ್ಪತ್ರೆಗಳು ₹ 2,230ರಷ್ಟು ಹೆಚ್ಚುವರಿ ದರದಲ್ಲಿ ಔಷಧವನ್ನು ಒದಗಿಸುತ್ತಿವೆ

*ನಗರ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವ ಔಷಧದ ಸರಾಸರಿ ವೆಚ್ಚಕ್ಕಿಂತ, ಚಾರಿಟಬಲ್ ಆಸ್ಪತ್ರೆಗಳು ₹ 850ರಷ್ಟು ಹೆಚ್ಚುವರಿ ದರದಲ್ಲಿ ಔಷಧವನ್ನು ಒದಗಿಸುತ್ತಿವೆ

ಪ್ರಯೋಗಾಲಯ ವೆಚ್ಚ

* ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಶುಲ್ಕ ಹೆಚ್ಚು. ಆದರೆ ಗ್ರಾಮೀಣ ಪ್ರದೇಶದ ಖಾಸಗಿ ಆಸ್ಪತ್ರೆಗಳು ವಿಧಿಸುವುದಕ್ಕಿಂತ, ಚಾರಿಟಬಲ್ ಆಸ್ಪತ್ರೆಗಳು ದುಬಾರಿ ವೆಚ್ಚದಲ್ಲಿ ಈ ಸೇವೆ ಒದಗಿಸುತ್ತಿವೆ

* ಚಾರಿಟಬಲ್ ಆಸ್ಪತ್ರೆಗಳು ನಗರದಲ್ಲಿ ವಿಧಿಸುವುದಕ್ಕಿಂತ, ಗ್ರಾಮೀಣ ಪ್ರದೇಶದಲ್ಲಿ ಪ್ರಯೋಗಾಲಯ ಸೇವೆಗೆ ಶೇ 50ರಷ್ಟು ಹೆಚ್ಚು ಶುಲ್ಕ ವಿಧಿಸುತ್ತಿವೆ

ಇತರೆ ವೆಚ್ಚ

ರೋಗಿಯ ಸಹಾಯಕರು ಆಸ್ಪತ್ರೆಯಲ್ಲಿ ಇರಲು, ಶೌಚಾಲಯ ಮತ್ತಿತರ ಸವಲತ್ತುಗಳನ್ನು ಬಳಸಲು ವಿಧಿಸುವ ಶುಲ್ಕ ಈ ವೆಚ್ಚದಲ್ಲಿ ಸೇರಿದೆ. ಸಹಾಯಕರ ಊಟ–ತಿಂಡಿಯ ವೆಚ್ಚವೂ ಇದರಲ್ಲಿದೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮತ್ತು ಪ್ರಯೋಗಾಲಯ ಶುಲ್ಕದ ನಂತರ ರೋಗಿ ಮತ್ತು ರೋಗಿಯ ಸಹಾಯಕರು ಅತಿಹೆಚ್ಚು ಹಣ ಭರಿಸಬೇಕಿರುವುದು ಈ ವೆಚ್ಚಕ್ಕೆ. ಗ್ರಾಮೀಣ ಪ್ರದೇಶದ ಖಾಸಗಿ ಆಸ್ಪತ್ರೆಗಳಿಗಿಂತ, ಚಾರಿಟಬಲ್ ಆಸ್ಪತ್ರೆಗಳಲ್ಲಿ ಈ ವೆಚ್ಚ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT