ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ–ಸೇಲಂ ಅಷ್ಟಪಥ ಹೆದ್ದಾರಿ ಯೋಜನೆ: ತೀರ್ಪು ಮರುಪರಿಶೀಲನೆ ಕೋರಿ ಮೇಲ್ಮನವಿ

Last Updated 8 ಜನವರಿ 2021, 10:11 IST
ಅಕ್ಷರ ಗಾತ್ರ

ನವದೆಹಲಿ: ಚೆನ್ನೈ ಮತ್ತು ಸೇಲಂ ನಡುವಣ ₹ 10 ಸಾವಿರ ಕೋಟಿ ವೆಚ್ಚದ ಅಷ್ಟಪಥಗಳ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ಕುರಿತ ಆದೇಶ ಎತ್ತಿಹಿಡಿದಿದ್ದ ತೀರ್ಪಿನ ಮರು ಪರುಶೀಲನೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

‘ತೀರ್ಪು ನಿಯಮಗಳಿಗೆ ವಿರುದ್ಧವಾಗಿದೆ. ನ್ಯಾಯವನ್ನು ಎತ್ತಿಹಿಡಿಯುವುದಿಲ್ಲ’ ಎಂದು ಅರ್ಜಿದಾರ, ಸೇಲಂ ನಿವಾಸಿ ಯುವರಾಜ್.ಎಸ್‌ ಎಂಬುವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

‘ಸಾರ್ವಜನಿಕ ನೀತಿಯ ನ್ಯಾಯಾಂಗ ಪರಾಮರ್ಶೆಗೆ ಕಾಯ್ದೆಗಳಿವೆ. ನೀತಿಯಲ್ಲಿಯೇ ದೊಡ್ಡ ಪ್ರಮಾಣದ ಉಲ್ಲಂಘನೆಯಾಗಿದೆ’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಯೋಜನೆಗಾಗಿ ಭೂಸ್ವಾಧೀನವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿ 2020ರ ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಕೇಂದ್ರ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್ ಸೇರಿ ಕೆಲ ಮುಖಂಡರು ಈ ಸಂಬಂಧ ಮದ್ರಾಸ್ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಮದ್ರಾಸ್ ಹೈಕೋರ್ಟ್‌ 2020ರ ಏಪ್ರಿಲ್‌ 8ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ‘ಭಾರತ್ ಮಾಲಾ ಪರಿಯೋಜನಾ –ಫೇಸ್ 15’ ಯೋಜನೆಗೆ ನಿಗದಿಪಡಿಸಲಾಗಿದ್ದ ಭೂಮಿಯನ್ನು ಹೊಸ ಹೆದ್ದಾರಿ ಅಭಿವೃದ್ಧಿಗಾಗಿ ಸ್ವಾಧೀನ ಪಡೆಯಲು ರಾಷ್ಟ್ರೀಯ ಹೆದ್ದಾರಿ ಕಾಯ್ದೆಯ ವಿಧಿ 3ಎ (1) ಅನ್ವಯ ಅಧಿಸೂಚನೆ ಹೊರಡಿಸಲಾಗಿದೆ. ‘ಇದು, ನಿಯಮಬಾಹಿರ ಮತ್ತು ಕಾನೂನಿನ ಪ್ರಕಾರ ಸರಿಯಲ್ಲ’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.

ಉದ್ದೇಶಿತ 277.3 ಕಿ.ಮೀ ಉದ್ದದ ಅಷ್ಟಪಥದ ಮಾರ್ಗವು ಉಭಯ ನಗರಗಳ ನಡುವಣ ಸಂಚಾರದ ಅವಧಿಯನ್ನು ಸುಮಾರು ಎರಡೂವರೆ ಗಂಟೆ ಕುಗ್ಗಿಸಲಿದೆ. ಆದರೆ, ರೈತರು ಭೂಮಿ ನೀಡಲು ವಿರೋಧಿಸಿದ್ದರೆ, ಪರಿಸರ ವಾದಿಗಳು ಯೋಜನೆಗಾಗಿ ಸಾಕಷ್ಟು ಮರ ಕಡಿಯುವುದನ್ನು ವಿರೋಧಿಸಿದ್ದಾರೆ.

ಯೋಜನೆಯಡಿ ಉದ್ದೇಶಿತ ರಸ್ತೆಯು ಮೀಸಲು ಅರಣ್ಯ ಮತ್ತು ಜಲಮೂಲಗಳನ್ನು ಹಾದುಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT