ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನೆಲದಲ್ಲಿ ಚೀನಾ ವಸತಿ ಪ್ರದೇಶ: ವರದಿ

ಉಪಗ್ರಹ ಚಿತ್ರ ಆಧರಿಸಿ ‘ಎನ್‌ಡಿ ಟಿ.ವಿ’ ವರದಿ
Last Updated 18 ನವೆಂಬರ್ 2021, 22:15 IST
ಅಕ್ಷರ ಗಾತ್ರ

ನವದೆಹಲಿ: ‘ಚೀನಾವು ಅರುಣಾಚಲ ಪ್ರದೇಶದಲ್ಲಿ ಹೊಸ ವಸತಿ ಪ್ರದೇಶವೊಂದನ್ನು ನಿರ್ಮಿಸಿದೆ ಎಂಬುದು ಉಪಗ್ರಹ ಚಿತ್ರಗಳಿಂದ ಸಾಬೀತಾಗಿದೆ’ ಎಂದು ‘ಎನ್‌ಡಿ ಟಿ.ವಿ’ ವರದಿ ಮಾಡಿದೆ. ಆ ಉಪಗ್ರಹ ಚಿತ್ರಗಳನ್ನೂ ಎನ್‌ಡಿ ಟಿ.ವಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

‘ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್‌ ಲ್ಯಾಬ್‌ ಕಂಪನಿಗಳು ಒದಗಿಸುವ ಅತ್ಯಂತ ಸ್ಪಷ್ಟವಾದ, ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಈ ವರದಿ ಪ್ರಕಟಿಸಲಾಗಿದೆ. ಅರುಣಾಚಲ ಪ್ರದೇಶದ ಶಿಯೋಮಿ ಜಿಲ್ಲೆಯ ಗಡಿಭಾಗದಲ್ಲಿ ಈ ವಸತಿ ಪ್ರದೇಶವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಚೀನಾ ನಡುವೆ ಇರುವ ವಾಸ್ತವ ಗಡಿ ರೇಖೆಯಿಂದ(ಎಲ್‌ಎಸಿ) ಉತ್ತರಕ್ಕೆ ಮತ್ತು ಅಂತರರಾಷ್ಟ್ರೀಯ ಗಡಿಯಿಂದ ದಕ್ಷಿಣ ಭಾಗದಲ್ಲಿ ಈ ವಸತಿ ಪ್ರದೇಶನಿರ್ಮಿಸಲಾಗಿದೆ. ಈ ಎರಡೂ ಗಡಿಗಳ ಮಧ್ಯಭಾಗದಲ್ಲಿ
ಈ ವಸತಿ ಪ್ರದೇಶ ಇದೆ’ ಎಂದು ‘ಎನ್‌ಡಿ ಟಿ.ವಿ’ ವರದಿ ಮಾಡಿದೆ.

‘ಅಂತರರಾಷ್ಟ್ರೀಯ ಗಡಿಯಿಂದ 7 ಕಿ.ಮೀ. ಒಳಗೆ ಈ ಸ್ಥಳವಿದೆ. 2019ರಲ್ಲಿ ಮ್ಯಾಕ್ಸರ್ ಟೆಕ್ನಾಲಜೀಸ್ ಮತ್ತು ಪ್ಲಾನೆಟ್‌ ಲ್ಯಾಬ್ಸ್‌ ತೆಗೆದಿದ್ದ ಉಪಗ್ರಹ ಚಿತ್ರಗಳಲ್ಲಿ, ಈ ವಸತಿ ಪ್ರದೇಶದ ಕುರುಹು ಇರಲಿಲ್ಲ. ಆದರೆ 2021ರ ಜುಲೈನಲ್ಲಿ ತೆಗೆಯಲಾಗಿರುವ ಚಿತ್ರದಲ್ಲಿ ಕಟ್ಟಡಗಳು ನಿರ್ಮಾಣವಾಗಿರುವುದು ಕಾಣುತ್ತದೆ. ಅರ್ಧ ಚಂದ್ರಾಕೃತಿಯಲ್ಲಿರುವ ಈ ವಸತಿಪ್ರದೇಶದಲ್ಲಿ 60 ಸಣ್ಣ ಕಟ್ಟಡಗಳು ಮತ್ತು ಕೆಲವು ದೊಡ್ಡ ಕಟ್ಟಡಗಳು ಇವೆ. ಒಂದು ದೊಡ್ಡ ಕಟ್ಟಡದ ಚಾವಣಿಯ ಮೇಲೆ ಚೀನಾದ ಧ್ವಜದ ಚಿತ್ರವನ್ನು ಬರೆಯಲಾಗಿದೆ. ಧ್ವಜದ ಚಿತ್ರವು ಉಪಗ್ರಹ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ’ ಎಂದು ಎನ್‌.ಡಿ ಟಿ.ವಿ ವಿವರಿಸಿದೆ.

‘ಮ್ಯಾಕ್ಸರ್, ಪ್ಲಾನೆಟ್ ಲ್ಯಾಬ್ಸ್‌ ತೆಗೆದಿರುವ ಚಿತ್ರಗಳಲ್ಲಿ ಪ್ರದೇಶದ ಅಕ್ಷಾಂಶ ಮತ್ತು ರೇಖಾಂಶವನ್ನು ನಮೂದಿಸಲಾಗಿದೆ. ಅದನ್ನು ಭಾರತ ಸರ್ಕಾರದ ಉಪಗ್ರಹ ನಕ್ಷೆ ಪೋರ್ಟಲ್‌ ‘ಭಾರತ್ ಮ್ಯಾಪ್ಸ್‌’ನಲ್ಲಿ ಹಾಕಿದರೆ, ಆ ಸ್ಥಳವು ಭಾರತದ ಗಡಿಯೊಳಗೆ ಇದೆ ಎಂದು ತೋರಿಸುತ್ತದೆ. ‘ಭಾರತ್ ಮ್ಯಾಪ್ಸ್‌’ ಅನ್ನು ಭಾರತೀಯ ಸರ್ವೇಯರ್ ಜನರಲ್ ಮೂಲಕ ಧೃಡಪಡಿಸಲಾಗಿದೆ. ಈ ಪ್ರಕಾರ ಕಟ್ಟಡಗಳನ್ನು ನಿರ್ಮಿಸಿರುವ ಪ್ರದೇಶವು ಭಾರತದ ಗಡಿಯೊಳಗೇ ಇದೆ’ ಎಂದು ವರದಿ ಹೇಳಿದೆ.

ವಸತಿ ಪ್ರದೇಶಗಳ ಇರುವಿಕೆ, ಆ ಪ್ರದೇಶದ ಮೇಲೆ ದೇಶವೊಂದರ ನಿಯಂತ್ರಣವಿರುವುದರ ಪ್ರತೀಕ ಎಂದು ಅಂತರರಾಷ್ಟ್ರೀಯ ಕಾನೂನುಗಳು ಹೇಳುತ್ತವೆ. ಈ ಕಾನೂನನ್ನು ಬಳಸಿಕೊಂಡು, ಈ ಪ್ರದೇಶವು ತನ್ನದೆಂದು ಹೇಳುವ ಉದ್ದೇಶದಿಂದಲೇ ಭಾರತದ ನೆಲದಲ್ಲಿ ಚೀನಾ ವಸತಿ ಪ್ರದೇಶವನ್ನು ನಿರ್ಮಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ ಎಂದು ವರದಿ ವಿವರಿಸಿದೆ.

ಈ ವಸತಿ ಪ್ರದೇಶದಿಂದ 93 ಕಿ.ಮೀ. ದೂರದಲ್ಲಿ, ಭಾರತದ ನೆಲದಲ್ಲಿ ಮತ್ತೊಂದು ದೊಡ್ಡ ಗ್ರಾಮವನ್ನು ಚೀನಾ ನಿರ್ಮಿಸಿದೆ ಎಂದು ಜನವರಿಯಲ್ಲಿ ಎನ್‌ಡಿ ಟಿ.ವಿ ವರದಿ ಮಾಡಿತ್ತು. ಆ ವರದಿಯಲ್ಲಿರುವ ಅಂಶಗಳನ್ನು, ಅಮೆರಿಕದ ರಕ್ಷಣಾ ಸಚಿವಾಲಯವೂ ದೃಢೀಕರಿಸಿತ್ತು. ಆದರೆ ಅಮೆರಿಕದ ವರದಿಯನ್ನು ಭಾರತದ ರಕ್ಷಣಾ ಸಚಿವಾಲಯವು ತಿರಸ್ಕರಿಸಿತ್ತು.

‘ಎಲ್‌ಎಸಿಯಿಂದ ಉತ್ತರಕ್ಕಿದೆ’

‘ಈ ವಸತಿ ಪ್ರದೇಶವು ಎಲ್‌ಎಸಿಯಿಂದ ಉತ್ತರಕ್ಕೆ ಇದೆ’ ಎಂದು ಭಾರತೀಯ ಸೇನೆ ಸಮಜಾಯಿಷಿ ನೀಡಿದೆ ಎಂದು ಎನ್‌ಡಿ ಟಿ.ವಿ ಹೇಳಿದೆ.

ಉಪಗ್ರಹ ಚಿತ್ರಗಳನ್ನು ತೋರಿಸಿ, ಭಾರತೀಯ ಸೇನೆಯ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಅದಕ್ಕೆ ಅವರು, ‘ನೀವು ಕೊಟ್ಟಿರುವ ಅಕ್ಷಾಂಶ ಮತ್ತು ರೇಖಾಂಶವನ್ನು ಪರಿಶೀಲಿಸಲಾಗಿದೆ. ಅದು ಎಲ್‌ಎಸಿಯಿಂದ ಉತ್ತರಕ್ಕೆ ಇದೆ’ ಎಂದಷ್ಟೇ ಹೇಳಿದ್ದಾರೆ.ಎಲ್‌ಎಸಿಯಿಂದ ಉತ್ತರಕ್ಕೆ ಅಂತರರಾಷ್ಟ್ರೀಯ ಗಡಿ ಇದೆ. ಆ ಭಾಗದಲ್ಲಿ ಈ ಪ್ರದೇಶವಿದೆ ಎಂಬುದನ್ನು ಭಾರತೀಯ ಸೇನೆ ನಿರಾಕರಿಸುತ್ತಿಲ್ಲ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ಶೀಘ್ರದಲ್ಲೇ ಮಾತುಕತೆ

‘ಪೂರ್ವ ಲಡಾಖ್‌ನ ಸಂಘರ್ಷಪೀಡಿತ ಪ್ರದೇಶದಿಂದ ಭಾರತ ಮತ್ತು ಚೀನಾ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಸಂಬಂಧ ಎರಡೂ ಸೇನೆಗಳ ಅಧಿಕಾರಿಗಳ ಮಧ್ಯೆ ಮತ್ತೆ ಮಾತುಕತೆ ನಡೆಸಲು ಎರಡೂ ದೇಶಗಳು ಒಪ್ಪಿಕೊಂಡಿವೆ’ ಎಂದು ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.

ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಎರಡೂ ಸೇನೆಯ ಅಧಿಕಾರಿಗಳು ಈವರೆಗೆ 13 ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಗಳು ನಿರೀಕ್ಷಿತ ಫಲ ನೀಡಿಲ್ಲ. ಈಗ 14ನೇ ಸುತ್ತಿನ ಮಾತುಕತೆ ನಡೆಸಲು ಒಪ್ಪಿಕೊಳ್ಳಲಾಗಿದೆ. ಮಾತುಕತೆ ನಡೆಯಲಿರುವ ದಿನ ಮತ್ತು ಸಮಯವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT