ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ– ಅಮೆರಿಕ ನಡುವೆ ಪರಸ್ಪರ ಗೌರವ, ಸಹಬಾಳ್ವೆ ಇರಬೇಕು: ಷಿ ಜಿನ್‌ಪಿಂಗ್‌

Last Updated 16 ನವೆಂಬರ್ 2021, 6:32 IST
ಅಕ್ಷರ ಗಾತ್ರ

ಬೀಜಿಂಗ್‌: ಪರಸ್ಪರ ಗೌರವ, ಶಾಂತಿ, ಸಹಬಾಳ್ವೆ, ಸಹಕಾರದೊಂದಿಗೆ ಚೀನಾ ಮತ್ತು ಅಮೆರಿಕ ಹೆಜ್ಜೆ ಇಡಬೇಕಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ತಿಳಿಸಿದರು.

ವರ್ಚುವಲ್‌ ಶೃಂಗಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಉಭಯ ದೇಶಗಳು ಸಂಬಂಧ ವೃದ್ಧಿಗೆ ಸಕಾರಾತ್ಮಕ ದಿಕ್ಕಿನಲ್ಲಿ ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು. ಇದು ಎರಡೂ ದೇಶಗಳ ನಡುವೆ ಸ್ಥಿರ ಮತ್ತು ಉತ್ತಮ ಸಂಬಂಧವನ್ನು ಬೆಳೆಸುತ್ತದೆ ಎಂದು ಹೇಳಿದರು.

ಸೆಪ್ಟೆಂಬರ್‌ನಲ್ಲಿ ಉಭಯ ನಾಯಕರ ನಡುವೆ ದೂರವಾಣಿ ಮೂಲಕ ನಡೆದ ಮಾತುಕತೆಯ ಬಳಿಕ, ನಡೆಯುತ್ತಿರುವ ವರ್ಚುವಲ್‌ ಶೃಂಗಸಭೆ ಇದಾಗಿದೆ.

ವ್ಯಾಪಾರ, ಮಾನವ ಹಕ್ಕು, ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್‌ನಂತಹ ವಿಷಯಗಳ ಕುರಿತು ಬೀಜಿಂಗ್‌ ತೆಗೆದುಕೊಂಡ ಕ್ರಮಗಳಿಂದ ಚೀನಾ ಮತ್ತು ಅಮೆರಿಕದ ದ್ವಿಪಕ್ಷೀಯ ಸಂಬಂಧ ಹಳಸಿತ್ತು. ಇದೀಗ ಎರಡೂ ದೇಶಗಳ ನಾಯಕರ ಶೃಂಗಸಭೆ ಏರ್ಪಟ್ಟಿದೆ.

‘ಎರಡೂ ದೇಶಗಳು ವಿವಿಧ ಸವಾಲುಗಳನ್ನು ಎದುರಿಸುತ್ತಿವೆ. ಹಾಗಾಗಿ ನಮ್ಮ ನಡುವೆ ಸಂವಹನ ಮತ್ತು ಸಹಕಾರ ವೃದ್ಧಿಯಾಗಬೇಕಿದೆ’ ಎಂದು ಜಿನ್‌ಪಿಂಗ್‌ ಪ್ರತಿಪಾದಿಸಿದರು.

‘ಚೀನಾ– ಅಮೆರಿಕ ದೇಶಗಳ ನಡುವಿನ ಸ್ಪರ್ಧೆಯು ಸಂಘರ್ಷಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಉಭಯ ದೇಶಗಳ ನಾಯಕರದ್ದಾಗಿದೆ. ಸ್ಪರ್ಧೆಯು ನೇರ, ಸರಳವಾಗಿರುವಂತೆ ನೋಡಿಕೊಳ್ಳಬೇಕಿದೆ‘ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಿಳಿಸಿದರು.

ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿ ದೇಶಗಳು ಮತ್ತು ವಿಶ್ವಸಂಸ್ಥೆಯು ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶಗಳಾದ ಅಮೆರಿಕ ಮತ್ತು ಚೀನಾ ನಡುವೆ ಸಂವಹನ ಮತ್ತು ಸಹಕಾರ ಇನ್ನಷ್ಟು ವೃದ್ಧಿಯಾಗಬೇಕು ಎಂದು ಜಿನ್‌ಪಿಂಗ್‌ ಹೇಳಿದರು.

ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಎರಡೂ ದಶಗಳು ಸಮರ್ಪಕವಾಗಿ ನಿಭಾಯಿಸುತ್ತಿವೆ ಎಂದಿರುವ ಜಿನ್‌ಪಿಂಗ್‌, ವಿಶ್ವಶಾಂತಿ ಮತ್ತು ಜಗತ್ತಿನ ಅಭಿವೃದ್ದಿಗಾಗಿ ಒಂದಾಗಿ ಮುನ್ನಡೆಯಬೇಕಿದೆ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT