ಗುರುವಾರ , ಫೆಬ್ರವರಿ 25, 2021
28 °C
ಭಾರತದ ಭೂ ಪ್ರದೇಶದಲ್ಲಿ ಗ್ರಾಮ ನಿರ್ಮಾಣದ ವರದಿ l ಸರ್ಕಾರದ ಸ್ಪಷ್ಟನೆಗಾಗಿ ಆಗ್ರಹ

ಚೀನಾ ಹಳ್ಳಿ: ಬಿಜೆಪಿ–ಕಾಂಗ್ರೆಸ್‌ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅರುಣಾಚಲ ಪ್ರದೇಶದಲ್ಲಿ ಚೀನಾವು ಹಳ್ಳಿ ನಿರ್ಮಿಸಿದೆ ಎನ್ನಲಾದ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಇತರ ನಾಯಕರೂ ಈ ಸಂಬಂಧ ಪ್ರಧಾನಿಯನ್ನು ಟೀಕಿಸಿದ್ದಾರೆ. ಬಿಜೆಪಿ ಸಹ ತಿರುಗೇಟು ನೀಡಿದೆ.

ಅರುಣಾಚಲ ಪ್ರದೇಶದಲ್ಲಿ ಚೀನಾ ಹಳ್ಳಿ ಮತ್ತು ರಸ್ತೆಯನ್ನು ನಿರ್ಮಿಸಿದೆ ಎಂಬ ವರದಿ ಇರುವ ಪತ್ರಿಕಾ ವರದಿಯ ಚಿತ್ರವನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜತೆಗೆ, ‘ದೇಶ ತಲೆಬಾಗಲು ಬಿಡುವುದಿಲ್ಲ ಎಂಬ ಅವರ ಭರವಸೆ ನೆನಪಿದೆಯೇ’ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ದೇಶ ತಲೆಬಾಗಲು ಬಿಡುವುದಿಲ್ಲ’ ಎಂದು ಹೇಳಿದ್ದರು.

‘ಮೋದಿ ಅವರೇ, ನಿಮ್ಮ 56 ಇಂಚಿನ ಎದೆ ಎಲ್ಲಿದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಮನೀಷ್ ತಿವಾರಿ ಅವರು, ‘ಇದು ಅತ್ಯಂತ ಗಂಭೀರವಾದ ವಿಚಾರ. ಅಬ್ಬಾ ದೇವರೆ, ಈ ಬಾರಿ ಸೈನಿಕರಲ್ಲ. ಇಡೀ ಹಳ್ಳಿ!’ ಎಂದು ಟ್ವೀಟ್ ಮಾಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ, ಈ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ತಿವಾರಿ ಆಗ್ರಹಿಸಿದ್ದಾರೆ.

‘ಅರುಣಾಚಲ ಪ್ರದೇಶದ ಸುಬಾನ್‌ಸಿರಿ ಜಿಲ್ಲೆಯಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸುತ್ತಿದೆ. ಈಗಾಗಲೇ 100 ಮನೆಗಳನ್ನು ನಿರ್ಮಿಸಿದೆ. 2 ಪಥಗಳ ರಸ್ತೆಯನ್ನೂ ನಿರ್ಮಿಸಿದೆ’ ಎಂದು ಅರುಣಾಚಲ ಪ್ರದೇಶ ಬಿಜೆಪಿ ಸಂಸದ ತಾಪಿರ್ ಗಾವೊ ಲೋಕಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದರು. ತಾಪಿರ್ ಅವರ ಕಳವಳವನ್ನು ಕಾಂಗ್ರೆಸ್ ನಾಯಕರು ಈಗ ಮುನ್ನೆಲೆಗೆ ತಂದಿದ್ದಾರೆ.

‘ತಾಪಿರ್ ಅವರ ಕಳವಳವು ನಿಜವೇ ಆಗಿದ್ದರೆ, ಚೀನಾವು ಗಡಿಯನ್ನು ಉಲ್ಲಂಘಿಸಿದೆ ಎಂಬುದು ಸತ್ಯ. ವಿವಾದಿತ ಪ್ರದೇಶದಲ್ಲಿ ಚೀನಾವು ಶಾಶ್ವತ ವಸತಿ ಪ್ರದೇಶಗಳನ್ನು ನಿರ್ಮಿಸಿದೆ. ಸರ್ಕಾರವು ಈ ಬಗ್ಗೆ ಏನು ಹೇಳುತ್ತದೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಬ್ಯಾರಕ್‌ಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆ

ಚೀನಾ-ಭಾರತದ ಗಡಿಯಿಂದ 4.5 ಕಿ.ಮೀ. ದೂರದಲ್ಲಿ, ಭಾರತದ ನೆಲೆದಲ್ಲಿ ಚೀನಾ ಹಳ್ಳಿಯನ್ನು ನಿರ್ಮಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಳ್ಳಿ ಇರುವ ಜಾಗದ ಅಕ್ಷಾಂಶ ಮತ್ತು ರೇಖಾಂಶ ವಿವರಗಳನ್ನೂ ಪ್ರಕಟಿಸಿವೆ. ಆ ಅಕ್ಷಾಂಶ ಮತ್ತು ರೇಖಾಂಶಗಳನ್ನು ಆಧರಿಸಿ ಗೂಗಲ್‌ ನಕ್ಷೆಯಲ್ಲಿ ಹುಡುಕಿದಾಗ, ಆ ಜಾಗದಲ್ಲಿ ಸಣ್ಣಪುಟ್ಟ ಕಟ್ಟಡಗಳು ಇರುವುದು ಪತ್ತೆಯಾಗಿದೆ. ಆದರೆ ಈ ನಕ್ಷೆ 2019ರ ಡಿಸೆಂಬರ್‌ವರೆಗೆ ಮಾತ್ರ ಅಪ್‌ಡೇಟ್ ಆಗಿದೆ.

ಆದರೆ, ಹಳ್ಳಿ ಇರುವ ಜಾಗದಿಂದ 300 ಮೀಟರ್ ದಕ್ಷಿಣದಲ್ಲಿ ಸೇನಾ ಬ್ಯಾರಕ್‌ ಇರುವುದು ಗೂಗಲ್ ನಕ್ಷೆಯಲ್ಲಿ ಗೋಚರಿಸುತ್ತದೆ. ಪ್ಲಾನೆಟ್‌ ಲ್ಯಾಬ್ಸ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರದಲ್ಲಿ ಈ ಬ್ಯಾರಕ್‌ನ ವಿವರ ಮತ್ತಷ್ಟು ಸ್ಪಷ್ಟವಾಗಿದೆ. 2010ರಲ್ಲಿ ತೆಗೆಯಲಾದ ಗೂಗಲ್ ಅರ್ಥ್ ಉಪಗ್ರಹ ಚಿತ್ರದಲ್ಲೂ ಈ ಬ್ಯಾರಕ್ ಇರುವುದು ದಾಖಲಾಗಿದೆ. ಆದರೆ ಈಗ ಬ್ಯಾರಕ್‌ ವಿಸ್ತೀರ್ಣ ಮತ್ತಷ್ಟು ದೊಡ್ಡದಾಗಿದೆ.

ಈ ಹಳ್ಳಿ ಮತ್ತು ಬ್ಯಾರಕ್‌ಗೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ದಕ್ಷಿಣ ಟಿಬೆಟ್‌ನ ಶಾನ್ನನ್ ಎಂಬ ಹಳ್ಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಶಾನ್ನನ್‌ನಿಂದ ಲ್ಹಾಸಾವರೆಗೆ ಸುಸಜ್ಜಿತ ಹೆದ್ದಾರಿ ಇದೆ. ಮೇಲೆ ಹೇಳಲಾದ ಹಳ್ಳಿ ಇರುವ ಜಾಗ ಭಾರತದ್ದು ಎಂದು ‘ಭಾರತೀಯ ಸರ್ವೇಕ್ಷಣೆ ನಕ್ಷೆ’ ಹೇಳುತ್ತದೆ. ಆದರೆ ಈ ಜಾಗದವರೆಗೆ ಅರುಣಾಚಲ ಪ್ರದೇಶದ ಯಾವ ಪ್ರದೇಶದಿಂದಲೂ ರಸ್ತೆ ಇಲ್ಲ.

ಚೀನಾಕ್ಕೆ ಜಾಗ ಕೊಟ್ಟವರು ನೆಹರೂ’

‘ಚೀನಾದ ವಿಚಾರದಲ್ಲಿ ರಾಹುಲ್‌ ಗಾಂಧಿ, ಅವರ ವಂಶ ಮತ್ತು ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ಯಾವಾಗ ನಿಲ್ಲಿಸಲಿದೆ? ಈಗ ಉಲ್ಲೇ ಖಿಸಿದ ಸ್ಥಳವೂ ಸೇರಿ ಸಾವಿರಾರು ಎಕರೆ ಪ್ರದೇಶವನ್ನು ಚೀನಾಕ್ಕೆ ಉಡುಗೊರೆಯಂತೆ ಕೊಟ್ಟವರು ಜವಾಹರ ಲಾಲ್‌ ನೆಹರೂ ಎಂಬು ದನ್ನು ರಾಹುಲ್‌ ಅಲ್ಲಗಳೆಯುತ್ತಾರೆಯೇ? ಕಾಂಗ್ರೆಸ್‌ ಚೀನಾಕ್ಕೆ ಮತ್ತೆ ಮತ್ತೆ ಯಾಕೆ ಶರಣಾಗುತ್ತಿದೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಶ್ನಿಸಿದ್ದಾರೆ. 

‘ಕಾಂಗ್ರೆಸ್‌ ಪಕ್ಷವು ಚೀನಾ ಮತ್ತು ಅಲ್ಲಿನ ಕಮ್ಯುನಿಸ್ಟ್‌ ಪಕ್ಷದ ಜತೆಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ರದ್ದು ಮಾಡುವ ಯೋಚನೆ ರಾಹುಲ್‌ ಅವರಿಗೆ ಇದೆಯೇ? ಅವರ ಕುಟುಂಬವು ನಡೆಸುತ್ತಿರುವ ಟ್ರಸ್ಟ್‌ಗಳಿಗೆ ಚೀನಾದಿಂದ ಬಂದ ದೇಣಿಗೆಯನ್ನು ಹಿಂದಿರುಗಿಸುತ್ತಾರೆಯೇ? ಅಥವಾ ಕಾಂಗ್ರೆಸ್‌ನ ನೀತಿ ಮತ್ತು ಪದ್ಧತಿಗಳು ಚೀನಾದ ಹಣ ಮತ್ತು ಒಡಂಬಡಿಕೆಯಿಂದಲೇ ನಿರ್ಧರಿತವಾಗಲಿದೆಯೇ’ ಎಂದು ನಡ್ಡಾ ಕೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು