ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್: ಸೈನಿಕರ ಗುಂಡಿಗೆ 14 ಮಂದಿ ಬಲಿ

ಕಾರ್ಮಿಕರ ಮೇಲೆ ಗುಂಡು ಹಾರಿಸಿದ ಅಸ್ಸಾಂ ರೈಫಲ್ಸ್ ಯೋಧರು – ಆರೋಪ
Last Updated 5 ಡಿಸೆಂಬರ್ 2021, 20:10 IST
ಅಕ್ಷರ ಗಾತ್ರ

ಕೊಹಿಮಾ/ಗುವಾಹಟಿ: ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್‌ ಗ್ರಾಮಗಳಲ್ಲಿ 14 ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದಾರೆ. ದಾಳಿಯಲ್ಲಿ 11 ನಾಗರಿಕರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಶನಿವಾರ ಸಂಜೆಯ ಹೊತ್ತು ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಟಿರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ನಾಗರಿಕರನ್ನು ಉಗ್ರರು ಎಂದು ತಪ್ಪಾಗಿ ಗುರುತಿಸಿ ಸೈನಿಕರು ನಡೆಸಿದ ದಾಳಿಯಲ್ಲಿ ಎಂಟುನಾಗರಿಕರು ಮೃತಪಟ್ಟಿದ್ದಾರೆ. ಕತ್ತಲಾದರೂ ಮನೆಗೆ ಬಾರದೇ ಇದ್ದವರನ್ನು ಹುಡುಕಿಕೊಂಡು ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಆಗ ನಡೆದ ಘರ್ಷಣೆಯಲ್ಲಿ ಮತ್ತೆ ಐವರು ನಾಗರಿಕರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ.ನಾಗರಿಕರ ಹತ್ಯೆಯ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಅಸ್ಸಾಂ ರೈಫಲ್ಸ್‌ನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ. ಆಗ ಸೈನಿಕರು ಹಾರಿಸಿದ ಗುಂಡಿಗೆ ಮತ್ತೊಬ್ಬ ನಾಗರಿಕ ಬಲಿಯಾಗಿದ್ದಾರೆ.

‘ನಾಗರಿಕರು ನಡೆಸಿದ ದಾಳಿಯಲ್ಲಿ ಒಬ್ಬ ಸೈನಿಕ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಆದರೆ ಕಾರ್ಯಾ
ಚರಣೆ ಮತ್ತು ಕಾರ್ಯಾಚರಣೆ ನಂತರದ ಅವಘಡದ ಬಗ್ಗೆ ಪಶ್ಚಾತ್ತಾಪವಿದೆ’ ಎಂದು ಸೇನೆಯ 3 ಕೋರ್‌ ಘಟಕವು ಪ್ರಕಟಣೆ ಹೊರಡಿಸಿದೆ.

‘ಎನ್‌ಎಸ್‌ಸಿಎನ್‌ ನಿಷೇಧಿತ ಸಂಘಟನೆಯ ಯಾಂಗ್ ಅಂಗ್ ಬಣದ ಉಗ್ರರು ಮ್ಯಾನ್ಮಾರ್‌ನಿಂದ ನುಸುಳುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಇತ್ತು. ಅದನ್ನು ಆಧರಿಸಿ ಟಿರು ಮತ್ತು ಒಟಿಂಗ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆಗ ಈ ಅವಘಡ ಸಂಭವಿಸಿದೆ’ ಎಂದು ಸೇನೆಯು ಹೇಳಿದೆ. ಜತೆಗೆ ಘಟನೆ ಕುರಿತು ಆಂತರಿಕ ತನಿಖೆಗೆ ಆದೇಶಿಸಿದೆ. ನಾಗಾಲ್ಯಾಂಡ್ ಸರ್ಕಾರ ಸಹ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.

ನಡೆದದ್ದೇನು: ಟಿರು ಮತ್ತು ಒಟಿಂಗ್ ಗ್ರಾಮದ ಯುವಕರು ಸಮೀಪದಲ್ಲೇ ಇರುವ ಕಲ್ಲಿದ್ದಲು ಗಣಿಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಪಿಕ್‌ಅಪ್ ಟ್ರಕ್‌ನಲ್ಲಿ ತಮ್ಮ ಗ್ರಾಮಗಳಿಗೆ ವಾಪಸಾಗುತ್ತಿದ್ದರು. ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದ ಪ್ರದೇಶವನ್ನು ಪಿಕ್‌ಅಪ್ ಹಾದು ಬಂದಿದೆ. ಆಗ ಸೈನಿಕರು ಪಿಕ್‌ಅಪ್‌ ಮೇಲೆ ಗುಂಡು ಹಾರಿಸಿದ್ದಾರೆ. ನಿರಾಯುಧರಾಗಿದ್ದ ನಾಗರಿಕರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಲಾಗಿದೆ’ ಎಂದು ಕೊನ್ಯಾಕ್ ಮುರಾಂಗ್ ಸಂಘಟನೆ ಹೇಳಿದೆ. ಮೃತಪಟ್ಟವರು ಕೊನ್ಯಾಕ್ ಬುಡಕಟ್ಟಿಗೆ ಸೇರಿದವರಾಗಿದ್ದಾರೆ.

ನಂತರ ಗ್ರಾಮಸ್ಥರು ಅಲ್ಲೇ ಇದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಸಮೀಪದಲ್ಲಿ ಇದ್ದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ, ಸೇನೆಯ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಭಾನುವಾರವೂ ಹಲವು ಗ್ರಾಮಸ್ಥರು ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದಾರೆ. ಮೊನ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

‘ನಿರಾಯುಧರ ಮೇಲೆ ಗುಂಡು ಹಾರಿಸಿದ್ದೇಕೆ?’

‘ಇದೊಂದು ಯದ್ಧಾಪರಾಧ, ಸಾವಿನ ಸಂಖ್ಯೆಗಳನ್ನು ಪರಿಗಣಿಸಿದರೆ ಇದು ಹತ್ಯಾಕಾಂಡವೇ ಸರಿ. ಇದನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಗುಪ್ತಚರ ಮಾಹಿತಿಯ ವೈಫಲ್ಯ ಎಂದು ಹೇಳಿ ಸೇನೆ ತನ್ನ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ನಾಗಾಲ್ಯಾಂಡ್ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ರಾಜ್ಯದ ಬುಡಕಟ್ಟು ವ್ಯವಹಾರಗಳ ಸಚಿವ ತೆಮ್‌ಜೆನ್‌ ಇಮ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಿಕ್‌ಅಪ್‌ ಟ್ರಕ್‌ನಲ್ಲಿದ್ದ ನಾಗರಿಕರ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ನಿರಾಯುಧರಾಗಿದ್ದವರ ಮೇಲೆ ಗುಂಡು ಹಾರಿಸಿದ್ದು ಏಕೆ? ಗುಂಡು ಹಾರಿಸಲು ಆದೇಶ ನೀಡಿದವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ಶಿಕ್ಷಿಸುವ ಮೂಲಕ, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಅವರು ಹೇಳಿದ್ದಾರೆ.

‘ಆಫ್‌ಸ್ಪ ರದ್ದುಮಾಡಿ’

ಸೇನೆಗೆ ವಿಶೇಷಾಧಿಕಾರ ನೀಡುವ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಆಫ್‌ಸ್ಪ)–1958’ಯನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಇಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು, ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT