ಶುಕ್ರವಾರ, ಡಿಸೆಂಬರ್ 9, 2022
21 °C

ಕಪಾಳಮೋಕ್ಷ ಮಾಡಿದ್ದಕ್ಕೆ ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಕಪಾಳಮೋಕ್ಷ ಮಾಡಿದರೆಂದು ಸಿಟ್ಟಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಾಂಶುಪಾಲರ ಮೇಲೆ ಶನಿವಾರ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪ್ರಾಂಶುಪಾಲ ರಾಮ್‌ಸಿಂಗ್‌ ವರ್ಮಾ ಅವರ ಸ್ಥಿತಿ ಗಂಭೀರವಾಗಿದೆ.

‘ರೇವಾನ್‌ ನಿವಾಸಿಯಾಗಿರುವ ವಿದ್ಯಾರ್ಥಿಯು ಆಸನದ ವಿಚಾರವಾಗಿ ಶುಕ್ರವಾರ ಸಹಪಾಠಿ ಜೊತೆ ಜಗಳ ಮಾಡಿಕೊಂಡಿದ್ದ. ಆತನನ್ನು ಕೊಠಡಿಗೆ ಕರೆಸಿದ್ದ ಪ್ರಾಂಶುಪಾಲರು ಬುದ್ಧಿವಾದ ಹೇಳಲು ಮುಂದಾಗಿದ್ದರು. ಈ ವೇಳೆ ಆತ ತನ್ನ ವರ್ತನೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಕಪಾಳಕ್ಕೆ ಹೊಡೆದಿದ್ದರು. ಮರು ಮಾತನಾಡದೆ ಅಲ್ಲಿಂದ ಮನೆಗೆ ತೆರಳಿದ್ದ ಆತ ಶನಿವಾರ ಬೆಳಿಗ್ಗೆ ಪಿಸ್ತೂಲ್‌ನೊಂದಿಗೆ ಕಾಲೇಜಿಗೆ ಬಂದಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾಲೇಜಿನ ಹೊರಗೆ ನಿರ್ಮಾಣ ಮಾಡಲಾಗುತ್ತಿರುವ ಮಳಿಗೆಗಳನ್ನು ರಾಮ್‌ಸಿಂಗ್‌ ಪರಿಶೀಲಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಯು ಅವರೆಡೆ ಮೂರು ಸುತ್ತು ಗುಂಡು ಹಾರಿಸಿದ್ದ. ಅವು ರಾಮ್‌ಸಿಂಗ್‌ ತಲೆ, ಹೊಟ್ಟೆ ಹಾಗೂ ತೊಡೆಗೆ ತಗುಲಿದ್ದವು. ಗುಂಡಿನ ಸದ್ದು ಕೇಳಿದೊಡನೆ ಕಾಲೇಜಿನ ಇತರ ಸಿಬ್ಬಂದಿ ಹೊರಗೆ ಬಂದಿದ್ದರು. ಅವರನ್ನು ಕಂಡೊಡನೆ ವಿದ್ಯಾರ್ಥಿಯು ಅಲ್ಲಿಂದ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.

‘ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ವಿದ್ಯಾರ್ಥಿಯ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆತ ಪಿಸ್ತೂಲ್‌ ಎಲ್ಲಿಂದ ತಂದ ಎಂಬುದು ಗೊತ್ತಿಲ್ಲ ಎಂದು ವಿದ್ಯಾರ್ಥಿಯ ಕುಟುಂಬದವರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು