ಮಂಗಳವಾರ, ಆಗಸ್ಟ್ 9, 2022
23 °C
ಪ್ರತಿಭಟನೆ ತಡೆದ ದೆಹಲಿ ಪೊಲೀಸರು l ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಜನತಂತ್ರದ ಕೊಲೆ: ಕಾಂಗ್ರೆಸ್‌ ಸಂಸದರ ಆಕ್ರೋಶ, ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ಸಂಸದರು ಮತ್ತು ಕಾರ್ಯಕರ್ತರನ್ನು ದೆಹಲಿ ಪೊಲೀಸರು ಶುಕ್ರವಾರ ಎಳೆದೊಯ್ದಿರುವುದನ್ನು, ಪಕ್ಷವು ತೀವ್ರವಾಗಿ ಖಂಡಿಸಿದೆ. ‘ದೇಶದಲ್ಲಿ ಪ್ರಜಾ‍ಪ್ರಭುತ್ವದ ಕೊಲೆಯಾಗುತ್ತಿದೆ. ಪ್ರಜಾಪ್ರಭುತ್ವ ನೆನಪು ಮಾತ್ರ’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್‌ ಶುಕ್ರವಾರ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಸಂಸತ್ ಭವನದ 1ನೇ ದ್ವಾರದ ಬಳಿ ‍ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು. ಎಲ್ಲರೂ ಕಪ್ಪು ಬಟ್ಟೆ ಧರಿಸಿದ್ದರು. ಕೇಂದ್ರ  ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಅಲ್ಲಿಂದ ರಾಷ್ಟ್ರಪತಿ ಭವನದತ್ತ ಮೆರವಣಿಗೆ ಹೊರಟರು.

ಪ್ರತಿಭಟನಕಾರರು ವಿಜಯ್ ಚೌಕ್‌ ತಲುಪುವಷ್ಟರಲ್ಲೇ ಪೊಲೀಸರು ಅವರನ್ನು ತಡೆದರು. ದೆಹಲಿಯಲ್ಲಿ ನಿಷೇಧಾಜ್ಞೆ ಇರುವುದರಿಂದ ಪ್ರತಿಭಟನೆ ನಡೆಸಲು ಅವಕಾಶವಿಲ್ಲ, ಪ್ರತಿಭಟನೆ ನಿಲ್ಲಿಸಿ ಎಂದು ಪೊಲೀಸರು ಹೇಳಿದರು. ಅದನ್ನು ಲೆಕ್ಕಿಸದೆ ಕಾಂಗ್ರೆಸ್‌ ಸದಸ್ಯರು ಮೆರವಣಿಗೆ ಮುಂದುವರಿಸಿದರು. ಆಗ ಪೊಲೀಸರು ರಾಹುಲ್ ಗಾಂಧಿ ಸೇರಿ ಅವರೆಲ್ಲರನ್ನೂ ವಶಕ್ಕೆ ಪಡೆದು, ಬಸ್‌ಗಳಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪ್ರಧಾನಿ ನಿವಾಸದತ್ತ ಹೊರಟ ಕಾಂಗ್ರೆಸ್‌ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದರು.

ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಹೊತ್ತೊಯ್ಯುತ್ತಿರುವ ಚಿತ್ರ ಮತ್ತು ವಿಡಿಯೊಗಳನ್ನು ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾರನ್ನು ಎಳೆದೊಯ್ದ ಪೊಲೀಸರು: ಇನ್ನೊಂದೆಡೆ, ಇಲ್ಲಿನ ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕೇಂದ್ರ ಕಚೇರಿಯ ಬಳಿಯಿಂದ ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಲಿಲ್ಲ. ಕಾಂಗ್ರೆಸ್‌ ಕಚೇರಿಗೆ ಸಂ‍ಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಈ ಮೂಲಕ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ತಮ್ಮ ಪಕ್ಷದ ಕಚೇರಿಗೆ ತಲುಪುವುದನ್ನು ತಡೆಯಲಾಗಿತ್ತು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಸೇರಿದಂತೆ ಹಲವರು ಪಕ್ಷದ ಕಚೇರಿಗೆ ಹೋಗಲು ಯತ್ನಿಸಿದರು. ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ ಅನ್ನು ಹತ್ತಿದ ಪ್ರಿಯಾಂಕಾ ಅವರನ್ನು ಪೊಲೀಸರು ತಡೆದರು. ಪ್ರಿಯಾಂಕಾ ಅವರು ಅಲ್ಲಿಯೇ ರಸ್ತೆಯಲ್ಲೇ ಧರಣಿ ಕೂತರು. ಕಾಂಗ್ರೆಸ್‌ ಕಾರ್ಯಕರ್ತರೂ ಅವರಿಗೆ ಜತೆಯಾದರು.

ಧರಣಿ ಕೂತ ಪ್ರಿಯಾಂಕಾ ಅವರನ್ನು ಮಹಿಳಾ ಪೊಲೀಸರು ಬಲವಂತವಾಗಿ ವಾಹನ ಹತ್ತಿಸಲು ಯತ್ನಿಸಿದರು. ಅಗ ಪ್ರಿಯಾಂಕಾ ತೀವ್ರ ಪ್ರತಿರೋಧ ಒಡ್ಡಿದರು. ನಂತರ ಪೊಲೀಸರು, ಇಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಹೊರಡಿ ಎಂದರು. ಆಗಲೂ ಪ್ರಿಯಾಂಕಾ ಧರಣಿ ಮುಂದುವರಿಸಿದರು. ಏಳೆಂಟು ಮಹಿಳಾ ಪೊಲೀಸರು ಬಂದು ಪ್ರಿಯಾಂಕಾರನ್ನು ಬಲವಂತವಾಗಿ ಎತ್ತಿಕೊಂಡು ಹೋದರು. ಪೊಲೀಸ್ ವಾಹನವನ್ನು ಏರಲು ಪ್ರಿಯಾಂಕಾ ತೀವ್ರ ಪ್ರತಿರೋಧ ಒಡ್ಡಿದಾಗ, ಅವರ ಕೈಕಾಲು ಹಿಡಿದು ವಾಹನದೊಳಕ್ಕೆ ಎಳೆದೊಯ್ದರು.

ಈ ವೇಳೆ ಮಹಿಳಾ ಪೊಲೀಸ ರೊಬ್ಬರು ಪ್ರಿಯಾಂಕಾ ಅವರ ಕುತ್ತಿಗೆಯನ್ನು ಮೊಣಕೈನಿಂದ ಒತ್ತಿದ್ದಾರೆ. ಈ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕಪ್ಪು ಬಟ್ಟೆ...


ಮಲ್ಲಿಕಾರ್ಜುನ ಖರ್ಗೆ

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸಂಸದರು, ನಾಯಕರು ಮತ್ತು ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿದ್ದರು. ಪ್ರತಿಭಟನೆಗೂ ಮುನ್ನ ಮಾಧ್ಯಮಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಅವರು ಅವರು ಬಿಳಿ ಜುಬ್ಬಾ ತೊಟ್ಟಿದ್ದರು ಮತ್ತು ತೋಳಿಗೆ ಕಪ್ಪು ಕಟ್ಟಿದ್ದರು. ಆದರೆ ಪ್ರತಿಭಟನೆಯಲ್ಲಿ ಭಾಗಿಯಾಗುವಾಗ ಕಪ್ಪು ಬಟ್ಟೆ ಧರಿಸಿದ್ದರು.

ಪ್ರಿಯಾಂಕಾ ಗಾಂಧಿ ಸಹ ಕಪ್ಪು ಬಟ್ಟೆ ಧರಿಸಿದ್ದರು. ಪಿ.ಚಿದಂಬರಂ, ಕಾರ್ತಿ ಚಿದಂಬರಂ, ಅಧೀರ್ ರಂಜನ್ ಚೌಧರಿ, ಮನೀಷ್ ತಿವಾರಿ, ರಣದೀ‍ಪ್ ಸಿಂಗ್ ಸುರ್ಜೇವಾಲಾ, ಪವನ್ ಖೇರಾ, ಶಶಿ ತರೂರ್‌ ಸೇರಿದಂತೆ ಕಾಂಗ್ರೆಸ್‌ನ ಸಂಸದರು ಮತ್ತು ರಾಜ್ಯಸಭಾ ಸದಸ್ಯರೆಲ್ಲರೂ ಕಪ್ಪು ಬಟ್ಟೆ ಧರಿಸಿದ್ದರು. ಸಂಸತ್ತಿನ ಉಭಯ ಸದನಗಳಲ್ಲಿ ಭಾಗಿಯಾಗುವಾಗಲೂ ಅವರು ಕಪ್ಪು ಪಟ್ಟು ಧರಿಸಿ ತಮ್ಮ ಪ್ರತಿಭಟನೆ ದಾಖಲಿಸಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಪ್ಪು ಧಿರಿಸು ಗಮನ ಸೆಳೆಯಿತು. ಬಿಳಿ ಕಚ್ಚೆ ಪಂಚೆಯ ಮೇಲೆ ಕಪ್ಪು ಜುಬ್ಬಾ ಧರಿಸಿದ್ದ ಅವರು, ತಲೆಗೆ ಕಪ್ಪು ಪೇಟ ಸುತ್ತಿದ್ದರು. ಅವರ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಲವೆಡೆ ಪ್ರತಿಭಟನೆ

*ನಿಂಬೆಹಣ್ಣು, ಮೆಣಸಿನಕಾಯಿ, ಹಾಲಿನ ಖಾಲಿ ಪೊಟ್ಟಣಗಳು ಮತ್ತು ತರಕಾರಿಗಳ ಸರವನ್ನು ಧರಿಸಿ ಕಾಂಗ್ರೆಸ್‌ನ ಸಂಸದರು, ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು

*ತಮಿಳುನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಎಸ್‌. ಆಳಗಿರಿ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿಯ ರಾಜ ಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು

*ಪುದುಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 200 ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ

*ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ರಾಜಸ್ಥಾನದ ಜೈಪುರದಲ್ಲಿ ಪ್ರತಿಭಟನೆ ನಡೆಸಿದರು 

*ಉತ್ತರಾಖಂಡ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ರಾಜ ಭವನ ಚಲೋ ನಡೆಸಿದರು

*ಛತ್ತೀಸಗಡದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

*ಉತ್ತರ ಪ್ರದೇಶದ ಲಖನೌನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು. ರಾಜ ಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಅವರನ್ನು ಪೊಲೀಸರು ತಡೆದರು.

****
ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುವ ನಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಕಾಂಗ್ರೆಸ್‌ ಸಂಸದರನ್ನು ಪೊಲೀಸ್‌ ವಾಹನಗಳಲ್ಲಿ ತುಂಬಲಾಗಿದೆ.

-ಜೈರಾಮ್ ರಮೇಶ್, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ

****

ಪ್ರಜಾಪ್ರಭುತ್ವವನ್ನು ರಕ್ಷಿಸಲು, ಜನರ ಪರವಾಗಿ ದನಿ ಎತ್ತಲು ನಾವು ಹೋರಾಡುತ್ತಿದ್ದೇವೆ. ಆದರೆ ನಮ್ಮ ಸಂಸದರ ಮೇಲೆ ಹಲ್ಲೆ ನಡೆಸಲಾಗಿದೆ.

- ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ 

****

ಹಣದುಬ್ಬರದ ಬಗ್ಗೆ ಆರ್‌ಬಿಐ ಗರ್ವನರ್ ಚಿಂತಾಕ್ರಾಂತರಾಗಿದ್ದಾರೆ. ಹಣಕಾಸು ಸಚಿವರು ಮಾತ್ರ ಹಣದುಬ್ಬರ ಇಲ್ಲ ಎಂದು ಸಂಸತ್ತಿನಲ್ಲಿ ಸುಳ್ಳು ಹೇಳಿದರು.

-ಗೌರವ್ ಗೊಗೊಯಿ, ಕಾಂಗ್ರೆಸ್ ಸಂಸದ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು