ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ಹನಿಟ್ರ್ಯಾಪ್‌: ಉನ್ನತ ಮಟ್ಟದ ತನಿಖೆಗೆ ಬಿಜೆಪಿ, ಕಾಂಗ್ರೆಸ್‌ ಒತ್ತಾಯ

Last Updated 12 ಅಕ್ಟೋಬರ್ 2022, 5:43 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ನಡೆದ ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆಗೆ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಒತ್ತಾಯಿಸಿದೆ. ಅಪರಾಧಿಗಳ ರಕ್ಷಣೆಗೆ ಬಿಜೆಡಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಸಿಬಿಐ ತನಿಖೆಗೆ ಒತ್ತಾಯಿಸಿರುವ ಬಿಜೆಪಿ, ಪ್ರಕರಣದಲ್ಲಿ ರಾಜ್ಯದ ಹಲವು ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ.

ಪೊಲೀಸರುಪ್ರಕರಣದ ತನಿಖೆಯನ್ನು ಯಥಾರ್ಥವಾಗಿ ನಡೆಸಿಲ್ಲ. ರಾಜ್ಯದ ಹಲವು ಸಚಿವರು ಸೇರಿದಂತೆ ಆಡಳಿತ ಪಕ್ಷದ ಹಿರಿಯ ಮುಖಂಡರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಹನಿಟ್ರ್ಯಾಪ್‌ ಜಾಲದ ಸಂಪರ್ಕ ಹೊಂದಿರುವವರ ಹೆಸರನ್ನು ಪೊಲೀಸರು ಬಹಿರಂಗ ಪಡಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ಮೃತಿ ಪಾಟ್ನಾಯಕ್‌ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದ್ದಾರೆ.

ಕಾಲಹಂಡಿ ನಿವಾಸಿಯಾಗಿರುವ ಬಂಧಿತ ಮಹಿಳೆ ಪ್ರಭಾವಿ ವ್ಯಕ್ತಿಗಳನ್ನು ಸಂಪರ್ಕಿಸಿ, ಸಲುಗೆ ಬೆಳೆಸುತ್ತಿದ್ದರು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದರು. ಬಳಿಕ ಅವರ ಖಾಸಗಿ ಕ್ಷಣಗಳ ಫೋಟೊ, ವಿಡಿಯೊಗಳನ್ನು ತೆಗೆದು ಬ್ಲಾಕ್‌ಮೇಲ್‌ ಮಾಡುತ್ತಿದ್ದರು. ಕೃತ್ಯದಲ್ಲಿ ಮಹಿಳೆಯ ಗಂಡನೂ ಸೇರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಕೆಯ ಗಂಡನನ್ನು ಬಂಧಿಸದೆ ಸಾಕ್ಷ್ಯಗಳನ್ನು ನಾಶ ಪಡಿಸಲು ಪೊಲೀಸರು ಅವಕಾಶ ನೀಡಿದ್ದಾರೆ ಎಂದು ಪಾಟ್ನಾಯಕ್‌ ಆರೋಪಿಸಿದ್ದಾರೆ.

ಈ ಕೃತ್ಯದಲ್ಲಿ ಆಡಳಿತ ಪಕ್ಷದ ಮುಖಂಡರು ನೇರವಾಗಿ ಪಾಲ್ಗೊಂಡಿದ್ದಾರೆ. ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಸಿಬಿಐಗೆ ವರ್ಗಾಯಿಸಲು ಅರ್ಹ ಪ್ರಕರಣ ಇದಾಗಿದೆ. ಈ ಪ್ರಕರಣವನ್ನು ತನಿಖೆ ನಡೆಸಲು ರಾಜ್ಯ ಪೊಲೀಸರು ಅನರ್ಹರಾಗಿದ್ದಾರೆ ಎಂದು ಪಾಟ್ನಾಯಕ್‌ ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್‌ ನ್ಯಾಯಾಂಗದ ಅಡಿಯಲ್ಲಿ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಆಡಳಿತ ಪಕ್ಷದ ಹಲವು ಮುಖಂಡರು ಹನಿಟ್ರ್ಯಾಪ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಂಧಿತ ಮಹಿಳೆ ಮತ್ತು ಆಕೆಯ ಗಂಡ ಬ್ಲಾಕ್‌ಮೇಲ್‌ ಮೂಲಕ ಕೋಟ್ಯಂತರ ರೂಪಾಯಿ ಹಣ ಗಳಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ದೇಬಾಸಿಸ್‌ ಪಾಟ್ನಾಯಕ್‌ ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಡಿ, ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT