ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಏರಿಕೆ ಖಂಡಿಸಿ 3 ಹಂತಗಳ ಅಭಿಯಾನ: ಕಾಂಗ್ರೆಸ್ ಉಸ್ತುವಾರಿಗಳ ಸಭೆಯಲ್ಲಿ ನಿರ್ಧಾರ

Last Updated 26 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆ ವಿರುದ್ಧ ‘ತುಟ್ಟಿ ಮುಕ್ತ ಭಾರತ ಅಭಿಯಾನ’ ಎಂಬ ಮೂರು ಹಂತಗಳ ಚಳವಳಿ ನಡೆಸಲು ಕಾಂಗ್ರೆಸ್‌ ಶನಿವಾರ ನಿರ್ಧರಿಸಿದೆ. ಮಾರ್ಚ್‌ 31ರಿಂದ ಏಪ್ರಿಲ್‌ 7ರವರೆಗೆ ರ‍್ಯಾಲಿಗಳು, ಜಾಥಾಗಳನ್ನು ದೇಶದಾದ್ಯಂತ ನಡೆಸಲು ತೀರ್ಮಾನಿಸಲಾಗಿದೆ.

ಮೊದಲ ಹಂತದಲ್ಲಿ, ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಜನರು ತಮ್ಮ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಚ್‌ 31ರಂದು ಪ್ರತಿಭಟನೆ ನಡೆಸಲಿದ್ದಾರೆ. ಜನರು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಾರ ಹಾಕಿ, ಡೋಲು ಮತ್ತು ಗಂಟೆ ಬಾರಿಸಲಿದ್ದಾರೆ. ಹಣದುಬ್ಬರದ ಬಗ್ಗೆ ಗಮನ ಸೆಳೆಯಲಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್ ಮತ್ತು‍ ಡೀಸೆಲ್‌ ದರದಲ್ಲಿ ಆಗಿರುವ ಭಾರಿ ಏರಿಕೆಯ ಬಗ್ಗೆ ‘ಕಿವುಡ’ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಯತ್ನಿಸಲಿದ್ದಾರೆ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಎರಡನೇ ಹಂತವು ಏಪ್ರಿಲ್‌ 2ರಿಂದ ಏಪ್ರಿಲ್‌ 4ರವರೆಗೆ ನಡೆಯಲಿದೆ. ಎನ್‌ಜಿಒಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು, ನಿವಾಸಿ ಅಭಿವೃದ್ಧಿ ಸಂಘಗಳು ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಜಾಥಾಗಳನ್ನು ನಡೆಸಲಿವೆ. ಏಪ್ರಿಲ್‌ 7ರಂದು ಪಕ್ಷವು ‘ತುಟ್ಟಿ ಮುಕ್ತ ಭಾರತ’ ಧರಣಿ ಮತ್ತು ಜಾಥಾಗಳನ್ನು ನಡೆಸಲಿದೆ. ಇದು ರಾಜ್ಯ ರಾಜಧಾನಿಗಳಲ್ಲಿ ನಡೆಯಲಿದೆ. ಎನ್‌ಜಿಒಗಳು, ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳೂ ಇದರಲ್ಲಿ ಭಾಗಿಯಾಗಲಿವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಜನರನ್ನು ಕೈಬಿಟ್ಟಿದೆ ಮತ್ತು ವಂಚಿಸಿದೆ. ಜನರ ಮತಗಳನ್ನು ಪಡೆಯುವುದಕ್ಕಾಗಿ 137 ದಿನ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌, ಕೊಳವೆ ಮೂಲಕ ಪೂರೈಕೆಯ ನೈಸರ್ಗಿಕ ಅನಿಲ (ಪಿಎನ್‌ಜಿ) ಮತ್ತು ಸಿಎನ್‌ಜಿ ದರವನ್ನು ಸರ್ಕಾರವು ಸ್ಥಿರವಾಗಿಯೇ ಇರಿಸಿತ್ತು. ಕಳೆದ ಒಂದು ವಾರವು ಜನರಿಗೆ ದುಃಸ್ವಪ್ನವೇ ಆಗಿದೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಜತೆಗೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಚಳವಳಿ ನಡೆಸಲು ತೀರ್ಮಾನಿಸಲಾಯಿತು. ಪಕ್ಷವು ನಡೆಸುತ್ತಿರುವ ಸದಸ್ಯತ್ವ ಅಭಿಯಾನ ಮತ್ತು ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಪ್ರಿಯಾಂಕಾ ಗಾಂಧಿ ವಾದ್ರಾ, ಉಮ್ಮನ್‌ ಚಾಂಡಿ, ಮುಕುಲ್‌ ವಾಸ್ನಿಕ್‌, ತಾರಿಕ್‌ ಅನ್ವರ್‌, ಸುರ್ಜೇವಾಲಾ, ಅಜಯ ಮಾಕನ್‌ ಮತ್ತು ಪಕ್ಷದ ಖಜಾಂಚಿ ಪವನ್‌ ಕುಮಾರ್‌ ಬನ್ಸಲ್‌ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT