ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ | ಮೂರು ನಿರ್ಣಾಯಕ ಸಮಿತಿ ರಚನೆ: ಅಧ್ಯಕ್ಷೆ ಸೋನಿಯಾರಿಂದ ಸದಸ್ಯರ ನೇಮಕ

ಉದಯಪುರ ಚಿಂತನ ಶಿಬಿರದಲ್ಲಿನ ನಿರ್ಣಯ
Last Updated 24 ಮೇ 2022, 12:05 IST
ಅಕ್ಷರ ಗಾತ್ರ

ನವದೆಹಲಿ: ಉದಯಪುರ ಚಿಂತನ ಶಿಬಿರದಲ್ಲಿ ತೆಗೆದುಕೊಂಡಿರುವ ನಿರ್ಧಾರಗಳ ಮೇರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಮೂರು ನಿರ್ಣಾಯಕ ಸಮಿತಿಗಳನ್ನು ರಚಿಸಿದ್ದಾರೆ.

ರಾಜಕೀಯ ವ್ಯವಹಾರಗಳು, ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾರ್ಯಪಡೆ (ಟಾಸ್ಕ್ ಫೋರ್ಸ್)– 2024 ಮತ್ತು ಭಾರತ್ ಜೋಡೋ ಯಾತ್ರೆಗೆ ಯೋಜನಾ ಸಮಿತಿಗಳನ್ನು ರಚಿಸಲಾಗಿದೆ. ಚುನಾವಣಾ ಕಾರ್ಯತಂತ್ರಜ್ಞ ಸುನೀಲ್‌ ಕಾನುಗೋಲು ಅವರ ಸೇರ್ಪಡೆ ಅನಿರೀಕ್ಷಿತ ಬೆಳವಣಿಗೆಯಾಗಿದೆ.

ಮೂರೂ ಸಮಿತಿಗಳಲ್ಲಿ ಜಿ–23 ನಾಯಕರು, ಪಕ್ಷದಲ್ಲಿ ಬದಲಾವಣೆ ಬಯಸಿದ ನಾಯಕರು ಇದ್ದಾರೆ. ಸಮಿತಿಗಳಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿನ್ ಪೈಲಟ್ ಕೂಡ ಇದ್ದಾರೆ. ದಿಗ್ವಿಜಯ ಸಿಂಗ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಎರಡು ಸಮಿತಿಗಳಲ್ಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳಲ್ಲಿ ಸೋಲು ಅನುಭವಿಸುತ್ತಿರುವ ಮತ್ತು ಸಾಂಸ್ಥಿಕ ದೌರ್ಬಲ್ಯದಿಂದ ಹೊರಬರಲು ಉದಯಪುರ ಚಿಂತನ ಶಿಬಿರದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ನಂತರ ಕಾಂಗ್ರೆಸ್‌ ಸಮಿತಿಗಳನ್ನು ರಚಿಸಿದೆ.

ಸೋನಿಯಾ ಗಾಂಧಿ ನೇತೃತ್ವದ ರಾಜಕೀಯ ವ್ಯವಹಾರಗಳ ಸಮಿತಿಗೆ ಎಂಟು ನಾಯಕರನ್ನು ನೇಮಿಸಲಾಗಿದೆ. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಜಿತೇಂದ್ರ ಸಿಂಗ್ ಹಾಗೂ ರಾಹುಲ್ ಗಾಂಧಿ ಸದಸ್ಯರಾಗಿದ್ದಾರೆ.

ಕಾರ್ಯಪಡೆ–2024 ಸಮಿತಿಯು ಲೋಕಸಭೆ ಚುನಾವಣೆಯ ಚುನಾವಣಾ ಕಾರ್ಯತಂತ್ರವನ್ನು ನೋಡಿಕೊಳ್ಳುವುದಿಲ್ಲ. ಆದರೆ ಉದಯಪುರ ಘೋಷಣೆ ಮತ್ತು ಸಮಾವೇಶದಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಿದ ಆರು ತಂಡಗಳ ವರದಿಗಳನ್ನು ಅನುಸರಿಸಲು ಮೇಲ್ವಿಚಾರಣಾ ಸಮಿತಿಯಂತೆ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಿತಿಯಲ್ಲಿ ಪಿ.ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ ವಾದ್ರಾ, ರಣದೀಪ್ ಸುರ್ಜೆವಾಲಾ ಮತ್ತು ಸುನೀಲ್‌ ಕಾನುಗೋಲು ಇದ್ದಾರೆ.

ಚುನಾವಣಾ ಕಾರ್ಯತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಪಕ್ಷಕ್ಕೆ ಸೇರಲು ನಿರಾಕರಿಸಿದ ಒಂದು ತಿಂಗಳ ನಂತರ ಕಾನುಗೋಲು ಅವರ ಸೇರ್ಪಡೆ ಮಹತ್ವದ್ದಾಗಿದೆ. 2014 ರ ಮೊದಲು ನರೇಂದ್ರ ಮೋದಿ ಪ್ರಚಾರಕ್ಕಾಗಿ ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದ ಕಾನುಗೋಲು ಮತ್ತು ಕಿಶೋರ್ ಅವರು ನಂತರ ದೂರವಾಗಿದ್ದರು.

ಕಾರ್ಯಪಡೆಯ ಪ್ರತಿಯೊಬ್ಬ ಸದಸ್ಯರಿಗೆ ಸಂಸ್ಥೆ, ಸಂವಹನ ಮತ್ತು ಮಾಧ್ಯಮ, ಪ್ರಭಾವ, ಹಣಕಾಸು ಮತ್ತು ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯಗಳನ್ನು ನಿಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆಯ ಸಮನ್ವಯಕ್ಕಾಗಿ ಕೇಂದ್ರೀಯ ಯೋಜನಾ ಸಮಿತಿಯಲ್ಲಿ ದಿಗ್ವಿಜಯ ಸಿಂಗ್, ಸಚಿನ್ ಪೈಲಟ್, ಶಶಿ ತರೂರ್, ರವನೀತ್ ಬಿಟ್ಟು, ಕೆ.ಜೆ.ಜಾರ್ಜ್, ಜ್ಯೋತಿ ಮಣಿ, ಪ್ರದ್ಯುತ್ ಬರ್ದೋಲೋಯ್, ಜಿತು ಪಟ್ವಾರಿ ಮತ್ತು ಸಲೀಂ ಅಹ್ಮದ್ ಸದಸ್ಯರಾಗಿದ್ದಾರೆ. ಕಾರ್ಯಪಡೆಯ ಸದಸ್ಯರು ಮತ್ತು ಎಲ್ಲಾ ಸಮಿತಿಗಳ ಮುಖ್ಯಸ್ಥರು ಈ ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT