ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬದಲಾವಣೆ: ಕಾಂಗ್ರೆಸ್‌ ಪಕ್ಷದಲ್ಲಿ ಏನೆಲ್ಲಾ ಆಗ್ತಿದೆ?

Last Updated 24 ಆಗಸ್ಟ್ 2020, 13:21 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು, ಹಿಂದಿನ ಮತ್ತು ಇಂದಿನ ಸಂಸದರು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 23 ನಾಯಕರು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕಾಂಗ್ರೆಸ್‌ ನಾಯಕತ್ವ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ಪಕ್ಷದಲ್ಲಿ ಪ್ರತಿ ಹಂತದಲ್ಲಿಯೂ ದೊಡ್ಡ ಮಟ್ಟದ ಬದಲಾವಣೆಯಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

15ದಿನಗಳ ಹಿಂದೆ ಬರೆದಿದ್ದಾರೆ ಎನ್ನಲಾದ ಈ ಪತ್ರದಲ್ಲಿ ದೇಶದ ಯುವಕರು ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ನರೇಂದ್ರ ಮೋದಿಯವರನ್ನು ನಿಸ್ಸಂಶಯವಾಗಿ ನಂಬಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಷ್ಟಲ್ಲದೆ, ಪಕ್ಷದ ಬೆಂಬಲ ನೆಲೆಯು ದುರ್ಬಲವಾಗುತ್ತಿದೆ ಹಾಗೂ ಯುವಕರು ಪಕ್ಷದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವುದು ಗಂಭೀರವಾದವಿಷಯವಾಗಿದೆ ಎಂಬುದನ್ನು ಒತ್ತಿ ಹೇಳಲಾಗಿದೆ.

ಪತ್ರದ ಸುದ್ದಿ ನಿರಾಕರಿಸಿದ್ದ ಕಾಂಗ್ರೆಸ್‌
ಪಕ್ಷದ ಮುಖಂಡರು ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಎರಡು ವಾರಗಳ ಹಿಂದೆಯೇ ಬಹಿರಂಗವಾಗಿತ್ತು. ಆದರೆ. ಅಂತಹ ಪತ್ರವೇ ಬಂದಿಲ್ಲ ಎಂದು ಪಕ್ಷವು ಸ್ಪಷ್ಟಪಡಿಸಿತ್ತು.

ಪತ್ರಕ್ಕೆ ಸಹಿ ಹಾಕಿದವರಲ್ಲಿ ಕೇಂದ್ರದ ಮಾಜಿ ಸಚಿವರು, ಸಂಸದರು ಸೇರಿದ್ದಾರೆ.ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಉಪ ನಾಯಕ ಆನಂದ್‌ ಶರ್ಮಾ, ಮಾಜಿ ಮುಖ್ಯಮಂತ್ರಿಗಳಾದ ಭೂಪಿಂದರ್‌ ಸಿಂಗ್‌ ಹೂಡಾ, ಪೃಥ್ವಿರಾಜ್‌ ಚವಾಣ್‌, ಕೇಂದ್ರದ ಮಾಜಿ ಸಚಿವರಾದ ಮುಕುಲ್ ವಾಸ್ನಿಕ್‌, ಕಪಿಲ್‌ ಸಿಬಲ್‌, ವೀರಪ್ಪ ಮೊಯಿಲಿ, ಶಶಿ ತರೂರ್‌, ಸಂಸದರಾದ ಮನೀಶ್‌ ತಿವಾರಿ, ಮಾಜಿ ಸಂಸದರಾದ ಮಿಲಿಂದ್‌ ದೇವ್ರಾ, ಜಿತಿನ್ ಪ್ರಸಾದ, ಸಂದೀಪ್‌ ದೀಕ್ಷಿತ್‌ ಪತ್ರಕ್ಕೆ ಸಹಿ ಹಾಕಿದ್ದಾರೆ.

ರಾಜೀನಾಮೆಗೆಸೋನಿಯಾ ಸಿದ್ಧ
ಪಕ್ಷದ ಮಧ್ಯಂತರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಸಿದ್ಧ ಎಂದು ಸೋನಿಯಾ ಅವರು ತಮ್ಮ ಆಪ್ತರಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು ತಕ್ಷಣವೇ ಸ್ಥಾನ ಬಿಟ್ಟು ಕೆಳಗಿಳಿಯಬಹುದು ಅಥವಾ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷಕ್ಕೆ ಸಮಯ ನೀಡಬಹುದು. ಹೊಸ ಅಧ್ಯಕ್ಷರು ನೇಮಕವಾಗುವ ವರೆಗೆ ಅವರು ಮುಂದುವರಿಯಬಹುದು ಎನ್ನಲಾಗಿದೆ.

ಹುದ್ದೆ ಒಲ್ಲದ ರಾಹುಲ್‌
ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ರಾಹುಲ್‌ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ನಾಯಕತ್ವಕ್ಕಾಗಿ ಪಕ್ಷವು ಗಾಂಧಿ ಕುಟುಂಬದ ಹೊರಗಿನವರನ್ನು ಹುಡುಕಬೇಕು ಎಂದೂ ಅವರು ಹೇಳಿದ್ದರು.

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ. ಅಧ್ಯಕ್ಷ ಸ್ಥಾನಕ್ಕೆ ಮರಳುವ ಯೋಚನೆಯೇ ಇಲ್ಲ ಎಂದು ಹಲವು ಬಾರಿ ಅವರು ಹೇಳಿದ್ದರು. ಹಾಗಿದ್ದರೂ, ಪಕ್ಷದ ಪದಾಧಿಕಾರಿಗಳ ನೇಮಕ, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ನೇಮಕದ ವಿಚಾರದ ನಿರ್ಧಾರಗಳಲ್ಲಿ ಅವರ ಮಾತೇ ಅಂತಿಮವಾಗಿತ್ತು. ರಾಜಸ್ಥಾನ ಕಾಂಗ್ರೆಸ್‌ನ ಮುಖಂಡರಾದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವಣ ಭಿನ್ನಮತ ಪರಿಹಾರದಲ್ಲಿಯೂ ರಾಹುಲ್‌ ಮುಖ್ಯ ಪಾತ್ರ ವಹಿಸಿದ್ದರು.

ಪತ್ರದ ಮಹತ್ವವೇನು? ನಾಯಕತ್ವ ಬದಲಾವಣೆ ಹೊರತಾಗಿ, ಪತ್ರ ನೀಡುವ ಸುಳಿವುಗಳೇನು?
ಪಕ್ಕದಲ್ಲಿ ಗುಂಪುಗಾರಿಕೆ ಆರಂಭವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಪತ್ರದ ಬಗ್ಗೆ ರಾಜಕೀಯ ವಲಯದಲ್ಲಿ ವಿಭಿನ್ನ ಆಯಾಮದ ಚರ್ಚೆಗಳು ನಡೆಯುತ್ತಿದೆ. ಪಕ್ಷವನ್ನು ಈಗ ಮುನ್ನಡೆಸುತ್ತಿರುವ ನಾಯಕತ್ವ ಬದಲಾವಣೆಯ ಕೂಗು ಇದಾಗಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಗಳಲ್ಲಿ ಸತತ ಎರಡು ಬಾರಿ ಮುಖಭಂಗ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸಾಲು ಸಾಲು ಹಿನ್ನಡೆ ಅನುಭವಿಸಿರುವುದರಿಂದ ಭವಿಷ್ಯದಲ್ಲಿ ಇದುವರೆಗಿನಂತೆ ಮುನ್ನಡೆಯಲು ಸಾಧ್ಯವಿಲ್ಲ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿದೆ.

ಹಾಗಾಗಿ, ಪಕ್ಷದ ನಾಯಕತ್ವ ಹಾಗೂ ದಿಕ್ಸೂಚಿ ಅನಿಶ್ಚಿತತೆಯಿಂದ ಕೂಡಿದ್ದು, ವಿವಿಧ ಸ್ಥಾನಗಳಿಗೆ ನೇಮಕಾತಿ ವೇಳೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಮತ್ತು ಪಕ್ಷದೊಳಗೆ ಮುಕ್ತ ಚರ್ಚೆಗೆ ಅವಕಾಶ ಇಲ್ಲ ಎಂಬಿತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಜೊತೆಗೆ ಹಲವು ಮಹತ್ವದ ಸಲಹೆಗಳನ್ನೂ ನೀಡಲಾಗಿದೆ.

'ಪಕ್ಷದೊಳಗೆ ಉತ್ತಮ ವ್ಯವಸ್ಥೆಗಳನ್ನು ಜಾರಿಗೆ ತರಲು ಈ ಪತ್ರವು ಸೂಕ್ತ ರೀತಿಯಲ್ಲಿ ಅನುವು ಮಾಡಿಕೊಟ್ಟಿದೆ. ಆದರೆ, ಈ ವಿಚಾರವು ಸಮರ್ಥ ವ್ಯಕ್ತಿಯೊಬ್ಬರು ಪಕ್ಷದ ಚುಕ್ಕಾಣಿ ಹಿಡಿಯುವದರ ಮೇಲೆ ಅವಲಂಬಿತವಾಗಿದೆ' ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಇದರೊಂದಿಗೆ ನೆಹರೂ ಕುಟುಂಬದವರ ಬದಲು ಬೇರೊಬ್ಬರು ಪಕ್ಷವನ್ನು ಮುನ್ನಡೆಸಬೇಕು ಎಂಬ ಆಶಯ ಪಕ್ಷದೊಳಗೆ ಬಲಗೊಳ್ಳುತ್ತಿದೆ.

ನಾಯಕತ್ವದ ಭಿನ್ನಾಭಿಪ್ರಾಯ ಮೂಡಿದ್ದು ಹೇಗೆ?
2000ನೇ ಇಸವಿಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಚುಕ್ಕಾಣಿ ಹಿಡಿದಾಗಿನಿಂದ ನಾಯಕತ್ವದ ಬಗೆಗಿನ ಅಪಸ್ವರ ಅಷ್ಟಾಗಿ ಕೇಳಿ ಬಂದಿರಲಿಲ್ಲ. 2004ರಿಂದ 2014 ರವರೆಗೆ 10 ವರ್ಷ ಕಾಲ ಕೇಂದ್ರದಲ್ಲಿ ಪಕ್ಷ ಅಧಿಕಾರದಲ್ಲಿ ಇದ್ದದ್ದು ಅದಕ್ಕೆ ಪ್ರಮುಖ ಕಾರಣ.

ಆದರೆ,2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪಕ್ಷದಲ್ಲಿ ಆಂತರಿಕ ತಳಮಳ ಆರಂಭವಾಯಿತು. ರಾಹುಲ್‌ ಗಾಂಧಿ ವಿರುದ್ಧ ಬಹಳ ಹಿಂದಿನಿಂದಲೂ ಗೊಣಗಾಟಗಳು ಇದ್ದವಾದರೂ, 2014 ಮತ್ತು 2018ರ ಲೋಕಸಭೆ ಚುನಾವಣೆಗಳಲ್ಲಿ ಸೋಲು ಕಂಡದ್ದು ಮತ್ತು ರಾಷ್ಟ್ರದಾದ್ಯಂತ ವಿಧಾನಸಭೆ ಚುನಾವಣೆಗಳಲ್ಲಿನ ಸತತ ಹಿನ್ನಡೆಯಿಂದಾಗಿ ಅದು ವಿಪರೀತವಾಯಿತು. ಇದೀಗ ರಾಹುಲ್‌ ಮತ್ತು ಹಿರಿಯ ನಾಯಕರ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

ಕಳೆದ ತಿಂಗಳುಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಪಕ್ಷದ ಸಾಮಾನ್ಯ ನಡೆದಿತ್ತು.ಸದ್ಯ ಸೋನಿಯಾಗೆ ಬರೆಯಲಾಗಿರುವ ಪತ್ರಕ್ಕೆ ಸಹಿ ಹಾಕಿರುವವರಲ್ಲಿ ಒಬ್ಬರಾಗಿರುವ ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು ಸಭೆಯಲ್ಲಿ ಪ್ರಾಮಾಣಿಕ ಆತ್ಮಾವಲೋಕನಕ್ಕೆ ಕರೆ ನೀಡಿದ್ದರು. ಇದೇ ವೇಳೆ ಹಿರಿಯ ನಾಯಕ ಪಿ.ಚಿದಂಬರಂ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದರು. ಜನರ ಅಸಮಾಧಾನಗಳನ್ನು ಅರ್ಥಮಾಡಿಕೊಳ್ಳಲು ಪಕ್ಷವು ಜನಸಾಮಾನ್ಯರನ್ನು ತಲುಪಬೇಕಿದೆ ಎಂದು ವಾದಿಸಿದ್ದರು.

ಇದೇ ವೇಳೆ ಸದ್ಯದ ನಾಯಕತ್ವವನ್ನು ಬೆಂಬಲಿಸಿದ್ದ ಯುವ ಸಂಸದ ರಾಜೀವ್‌ ಸತವ್‌, ಆತ್ಮಾವಲೋಕವು ಯುಪಿಎ ಸರ್ಕಾರದ ಎರಡನೇ ಅವಧಿಯಿಂದ ಪ್ರಾರಂಭವಾಗಲಿ ಎಂದು ಹೇಳಿದ್ದರು.

‘ಆತ್ಮಾವಲೋಕನವನ್ನು ಎಲ್ಲ ರೀತಿಯಿಂದಲೂ ಮಾಡಿಕೊಳ್ಳಿ. ಆದರೆ, ನಾವು ಲೋಕಸಭೆಯಲ್ಲಿ 44 ಸ್ಥಾನಕ್ಕೆ ಕುಸಿದದ್ದು ಹೇಗೆ? ಎಂಬುದನ್ನು ಗಮನಿಸಬೇಕು. ನಾವು 2009ರಲ್ಲಿ 200ಕ್ಕಿಂತ ಹೆಚ್ಚು ಸ್ಥಾನ ಗಳಿಸಿದ್ದೆವು. ಇದೀಗ 44 ಸ್ಥಾನಕ್ಕೆ ಕುಸಿದದ್ದು ಹೇಗೆ ಮತ್ತು ಏಕೆ? ಅದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವೆಲ್ಲರೂ ಈಗ ಮಾತನಾಡುತ್ತಿದ್ದೀರಿ. ಆದರೆ, ಆಗ ನೀವೆಲ್ಲರೂ ಮಂತ್ರಿಗಳಾಗಿದ್ದಿರಿ. ಪ್ರಾಮಾಣಿಕವಾಗಿ ಹೇಳುವುದಾದರೆ ನೀವೆಲ್ಲಾ ವೈಫಲ್ಯ ಕಂಡದ್ದು ಎಲ್ಲಿ ಎಂಬುದನ್ನು ತಿಳಿಯಬೇಕಿದೆ. ಯುಪಿಎ–2 ಅವಧಿಯಿಂದ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದು ಸತವ್‌ ಪ್ರತಿಕ್ರಿಯಿಸಿದ್ದರು.ಅದಾದ ಬಳಿಕ ಭಿನ್ನಮತ ಭುಗಿಲೆದ್ದಿದೆ.

ಸಭೆಯಲ್ಲಿ ನಡೆದ ಈ ರೀತಿಯ ಬಿರುಸಿನ ಚರ್ಚೆಯ ಬಳಿಕ ಸೋನಿಯಾಗೆ ಪತ್ರ ಬರೆಯಲಾಗಿದ್ದು, ಮುಂದಾಳತ್ವದ ಬಗೆಗಿನ ಅಸಮಾಧಾನವನ್ನು ಹೊರಹಾಕಲಾಗಿದೆ.

ಕಾಂಗ್ರೆಸ್‌ ಮಟ್ಟಿಗೆ ಇದು ದೊಡ್ಡ ಮಟ್ಟದ ಭಿನ್ನಾಭಿಪ್ರಾಯ!
ಕಾಂಗ್ರೆಸ್‌ ಪಕ್ಷದ ಮಟ್ಟಿಗೆ ಭಿನ್ನಾಭಿಪ್ರಾಯ, ವಿಭಜನೆಗಳು ಹೊಸದೇನು ಅಲ್ಲ. ಆದರೆ, ಈ ಬಾರಿ ಅದಕ್ಕೆ ಕಾರಣವೇ ಬೇರೆ. ಪಕ್ಷವು ಇದೀಗ ಆರು ವರ್ಷಕ್ಕಿಂತ ಹೆಚ್ಚು ಕಾಲ ಕೇಂದ್ರದಲ್ಲಿ ಅಧಿಕಾರದಿಂದ ದೂರ ಉಳಿದಿರುವುದು ಮಹತ್ವ ಪಡೆದುಕೊಂಡಿದೆ. ಏಕೆಂದರೆ, ಇಷ್ಟು ದೀರ್ಘಕಾಲ ಅಧಿಕಾರದಿಂದ ದೂರ ವಿರುವುದು ಇದು ಎರಡನೇ ಸಲ ಮಾತ್ರ.

1996 ರಿಂದ 2004 (ಹತ್ತು ವರ್ಷ) ರವರೆಗೆ ಅಧಿಕಾರಕ್ಕೇರಿರಲಿಲ್ಲ. 1998ರಲ್ಲಿ ತಲೆದೋರಿದ್ದ ಬಿಕ್ಕಟ್ಟಿನಿಂದಾಗಿ ನೆಹರೂ ಕುಟುಂಬದವರಲ್ಲದ ಸಿತಾರಾಂ ಕೇಸ್ರಿ ಅವರಿಗೆ ಪಕ್ಷದ‌ ನೇತೃತ್ವ ವಹಿಸಲಾಗಿತ್ತು. ಆದರೆ, ಬಳಿಕ ಅವರ ವಿರುದ್ಧವೂ ಪಿತೂರಿಗಳು ನಡೆದು ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ತೆರೆಮರೆಯ ಪ್ರಯತ್ನಗಳು ನಡೆದಿದ್ದವು.

ಅದಕ್ಕೂ ಮೊದಲು, 1990ರ ದಶಕದ ಆರಂಭದಲ್ಲಿ ಭಿನ್ನಮತ ತಲೆದೋರಿತ್ತು. ಆಗಲೂ ಗಾಂಧಿ ಕುಟುಂಬದವರಲ್ಲದ ಪಿ.ವಿ. ನರಸಿಂಹ ರಾವ್ (ಮಾಜಿ ಪ್ರಧಾನಿ) ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಅವರ ವಿರುದ್ಧವೂ ಪಿತೂರಿ ನಡೆದಿದ್ದರಿಂದ ಎನ್.ಡಿ. ತಿವಾರಿ ಮತ್ತು ಅರ್ಜುನ್ ಸಿಂಗ್ ಅವರು ಕಾಂಗ್ರೆಸ್‌ನಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಪ್ರಾರಂಭಿಸಿದ್ದರು.

1969ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ನೀಲಂ ಸಂಜೀವ ರೆಡ್ಡಿ ಅವರು ಕಾಂಗ್ರೆಸ್‌ನಿಂದ ಮತ್ತು ವಿವಿಗಿರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರುವಿವಿ ಗಿರಿಯವರಿಗೆ ಬೆಂಬಲ ನೀಡಿದ್ದರಿಂದ ಅಧಿಕೃತ ಅಭ್ಯರ್ಥಿ ರೆಡ್ಡಿ ಸೋಲು ಕಂಡಿದ್ದರು. ಹೀಗಾಗಿ ಇಂದಿರಾ ಅವರನ್ನುಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಎಸ್‌. ನಿಜಲಿಂಗಪ್ಪ ಅವರು ಪಕ್ಷದಿಂದ ಹೊರಹಾಕಿದ್ದರು. ಆಗಲೂ ನಾಯಕತ್ವದ ಬಗ್ಗೆ ದೊಡ್ಡಮಟ್ಟದಲ್ಲಿಯೇ ಅಪಸ್ವರ ಕೇಳಿ ಬಂದಿದ್ದವು.

ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಅಭಿಲಾಷ್ ಎಸ್‌.ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT